ರಾಜ್ಯ ಸರ್ಕಾರ ಕೋವಿಡ್‌ ವಿಚಾರದಲ್ಲಿ ಪ್ರಚಾರ ಪಡೆಯುವುದನ್ನು ಬಿಟ್ಟು ಕೋವಿಡ್‌ನಿಂದ ಮೃತಪಟ್ಟಎಲ್ಲರ ಮನೆ ಬಾಗಿಲಿಗೆ ಕೋವಿಡ್‌ ಮರಣ ಪ್ರಮಾಣ ಪತ್ರ ತಲುಪಿಸಿ ಸಿಂದಗಿ ಹಾಗೂ ಹಾನಗಲ್‌ ಉಪಚುನಾವಣೆಯಲ್ಲಿ ತಮ್ಮ ಪಕ್ಷದ ಜೆಡಿಎಸ್‌ನಿಂದ ಕಣಕ್ಕಿಳಿಸಿರುವ ಮುಸ್ಲಿಂ ಅಭ್ಯರ್ಥಿಯನ್ನು ಹಿಂಪಡೆಯಲಿ

ಬೆಂಗಳೂರು (ಅ.06): ರಾಜ್ಯ ಸರ್ಕಾರ ಕೋವಿಡ್‌ (covid ) ವಿಚಾರದಲ್ಲಿ ಪ್ರಚಾರ ಪಡೆಯುವುದನ್ನು ಬಿಟ್ಟು ಕೋವಿಡ್‌ನಿಂದ ಮೃತಪಟ್ಟಎಲ್ಲರ ಮನೆ ಬಾಗಿಲಿಗೆ ಕೋವಿಡ್‌ ಮರಣ ಪ್ರಮಾಣ ಪತ್ರ ತಲುಪಿಸಿ ಜತೆಗೆ ಅವರ ಕುಟುಂಬಗಳಿಗೆ ತಲಾ 5 ಲಕ್ಷ ರು. ಪರಿಹಾರ ನೀಡಲಿ ಎಂದು ಮಾಜಿ ಸಚಿವ ಚಲುವಾರಾಯಸ್ವಾಮಿ (Cheluvarayaswamy) ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ನೆಪದಲ್ಲಿ ಪ್ರಚಾರ ಪಡೆಯುತ್ತಿರುವ ಸಚಿವ ಆರ್‌.ಅಶೋಕ್‌ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ (Sudhakar) ಅವರಿಗೆ ನಿಜವಾಗಲೂ ಜನರಿಗೆ ನೆರವಾಗುವ ಮನಸ್ಸಿದರೆ ಕೋವಿಡ್‌ನಿಂದ ಮೃತಪಟ್ಟಎಲ್ಲರ ಮನೆಬಾಗಿಲಿಗೆ ಷರತ್ತು ರಹಿತವಾಗಿ ಕೋವಿಡ್‌ ಮರಣ ಪ್ರಮಾಣ ಪತ್ರ ತಲುಪಿಸಲಿ. ಜತೆಗೆ ಮೃತರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರು. ಪರಿಹಾರ ಕಲ್ಪಿಸಲಿ ಎಂದು ಒತ್ತಾಯಿಸಿದರು.

'ಮಂಡ್ಯದಲ್ಲಿ 7 ಸ್ಥಾನ ಗೆಲ್ಲಿಸಿದ್ದ ಮತದಾರರಿಗೆ ಈಗ ಅರಿವಾಗಿದೆ'

ಎಚ್‌ಡಿಕೆ ಅಭ್ಯರ್ಥಿಗಳ ಹಿಂಪಡೆಯಲಿ

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಅವರಿಗೆ ಕಾಂಗ್ರೆಸ್‌ ಪಕ್ಷಕ್ಕೆ ನೆರವಾಗುವ ಔದಾರ್ಯತೆ ಇರುವುದು ನಿಜವಾಗಿದ್ದರೆ ಸಿಂದಗಿ ಹಾಗೂ ಹಾನಗಲ್‌ ಉಪಚುನಾವಣೆಯಲ್ಲಿ ತಮ್ಮ ಪಕ್ಷದ ಜೆಡಿಎಸ್‌ನಿಂದ ಕಣಕ್ಕಿಳಿಸಿರುವ ಮುಸ್ಲಿಂ ಅಭ್ಯರ್ಥಿಯನ್ನು ಹಿಂಪಡೆಯಲಿ. ಕುಮಾರಸ್ವಾಮಿ ಅವರು ಜೆಡಿಎಸ್‌ಗೆ (JDS) ಪೂರ್ಣ ಬಹುಮತಕ್ಕಾಗಿ ಯಾವ ತಂತ್ರಗಾರಿಕೆ ಮಾಡುತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ ಎಂಬ ಭಯದಿಂದ ಬಿಜೆಪಿಗೆ ಅನುಕೂಲವಾಗುವ ತಂತ್ರಗಾರಿಕೆಗೆ ಇಳಿದಿದ್ದಾರೆ. ಸಿಂದಗಿ ಮತ್ತು ಹಾನಗಲ್‌ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಸುವ ಉದ್ದೇಶದಿಂದಲೇ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ ಎಂದರು.

ಕೇಂದ್ರ ಸರ್ಕಾರ ಕೋವಿಡ್‌ನಿಂದ ಮೃತಪಟ್ಟಹಿಂದುಳಿದ ಹಾಗೂ ದಲಿತ ಸಮುದಾಯದವರ ಕುಟುಂಬಕ್ಕೆ 5 ಲಕ್ಷ ಸಾಲ ಹಾಗೂ ಅದರಲ್ಲಿ 1 ಲಕ್ಷ ಸಬ್ಸಿಡಿ ನೀಡುವ ಯೋಜನೆ ಜಾರಿಗೊಳಿಸಿದೆ. ರಾಜ್ಯ ಸರ್ಕಾರ ಕೋವಿಡ್‌ನಿಂದ ಮೃತಪಟ್ಟರಾಜ್ಯದ ಎಷ್ಟುಕುಟುಂಬದವರಿಗೆ ಈ ಯೋಜನೆ ತಲುಪಿಸಿದೆ ಪ್ರಶ್ನಿಸಿದರು. ಕೋವಿಡ್‌ನಿಂದ ರಾಜ್ಯದಲ್ಲಿ ಸುಮಾರು 4 ಲಕ್ಷಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಆದರೆ, ಸರ್ಕಾರ ಮಾತ್ರ 37 ಸಾವಿರ ಜನ ಮೃತಪಟ್ಟಿದ್ದಾರೆ ಎಂಬ ಸುಳ್ಳು ಲೆಕ್ಕ ನೀಡುತ್ತಿದೆ ಎಂದರು.

ಪುತ್ರನ ಸೋಲಿಸಿದ ದ್ವೇಷದಿಂದ ಮಾತು : ಸುಮಲತಾಗೆ ಕೈ ನಾಯಕ ಬೆಂಬಲ

ಇನ್ನು 18 ವರ್ಷಕ್ಕಿಂತ ಕೆಳಗಿನವರರು ಕೋವಿಡ್‌ ನಿಂದ ಮೃತಪಟ್ಟರೆ ಅವರಿಗೆ ಪರಿಹಾರ ಇಲ್ಲ ಎಂದು ಆರೋಗ್ಯ ಇಲಾಖೆ ಕಾರ್ಯದರ್ಶಿ ಹೇಳಿದ್ದಾರೆ. ಯುವ ಪೀಳಿಗೆ ನಮ್ಮ ದೇಶದ ಭವಿಷ್ಯ ಎಂದು ನಾವು ಭಾವಿಸುತ್ತೇವೆ. ಆದರೆ ಈ ಸರ್ಕಾರಕ್ಕೆ ಅವರ ಪ್ರಾಣ ಲೆಕ್ಕಕ್ಕಿಲ್ಲದಂತಾಗಿದೆ. ಕೋವಿಡ್‌ ನಿಂದ ಸಾವನ್ನಪ್ಪಿದವರಿಗೆ ಯಾವುದೇ ದಾಖಲಾತಿ ಕೇಳದೇ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋಟ್‌ ಸೂಚಿಸಿದೆ. ಅದರಂತೆ ರಾಜ್ಯ ಸರ್ಕಾರ ಕೋವಿಡ್‌ ಮರಣ ಪ್ರಕರಣಗಳಲ್ಲಿ ಯಾವುದೇ ದಾಖಲೆ ಕೇಳದೆ ಎಲ್ಲ ವಯೋಮಾನದವರಿಗೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಇವರ ತಂತ್ರಗಾರಿಕೆ ಜನರಿಗೂ ಅರಿವಾಗಿದೆ. ಜನರ ಸಿಂಪತಿ ಗಿಟ್ಟಿಸಿಕೊಳ್ಳುವ ತಂತ್ರಗಾರಿಕೆಯಿಂದ ಕುಮಾರಸ್ವಾಮಿ ಕಾಂಗ್ರೆಸ್‌ (Congress) ನಾಯಕರನ್ನು ಗುರಿಯಾಗಿಸಿ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಜೆಡಿಎಸ್‌ಗೆ ಕೌಂಟರ್‌ ಕೊಟ್ಟುಕೊಂಡು ರಾಜಕಾರಣ ಮಾಡುವ ಪರಿಸ್ಥಿತಿ ನಮಗಿಲ್ಲ. ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್‌ ಪಕ್ಷಕ್ಕೆ ನೆರವಾಗುವ ಔದಾರ್ಯತೆ ನಿಜವೇ ಆಗಿದ್ದರೆ ಉಪಚುನಾವಣೆಯಲ್ಲಿ ಕಣಕ್ಕಿಳಿಸಿರುವ ಅಭ್ಯರ್ಥಿಗಳನ್ನು ಹಿಂಪಡೆಯಲಿ ಎಂದರು.

ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರ ನಡುವೆ ಭಿನ್ನಭಿಪ್ರಾಯ ಇದೆ ಎಂಬುದು ಊಹಾಪೋಹ. ಪಕ್ಷದ ಸಂಘಟನೆ ವಿಚಾರವಾಗಿ ಒಕ್ಕಲಿಗ ಹಾಗೂ ಲಿಂಗಾಯತ ನಾಯಕರುಗಳು ಸಭೆ ನಡೆಸಿದ್ದಾರೆ. ಅದೇ ರೀತಿ ಇತರೆ ಸಮುದಾಯದ ನಾಯಕರೂ ಸಭೆ ಮಾಡಲಿದ್ದಾರೆ. ಅದರಲ್ಲಿ ತಪ್ಪಿಲ್ಲ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ಮಲ್ಲಿಕಾರ್ಜುನ ಖರ್ಗೆ ಅವರು ಒಂದು ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ. ಎಲ್ಲ ವರ್ಗಗಳ ಜನನಾಯಕರು.

ಚೆಲುವರಾಯಸ್ವಾಮಿ, ಮಾಜಿ ಸಚಿವ.