10 ಸಾವಿರ ಬೆಳೆ ನಷ್ಟ ಪರಿಹಾರ ನೀಡಿ: ಗೋವಿಂದರಾಜು
ಅಕ್ರಮ ಸಕ್ರಮ ಯೋಜನೆ ಅಡಿ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸಂಪರ್ಕ ಸೇರಿದಂತೆ ತಲ ಎಕರೆಗೆ 10 ಸಾವಿರ ಬೆಳೆನಷ್ಟ ಪರಿಹಾರ ಮತ್ತು ಕಳೆದ ಸಾಲಿಗೆ ಕಟ್ಟಿದ್ದ ರೈತರಿಗೆ ಬೆಳೆವಿಮೆ ಪರಿಹಾರ ಕೂಡಲೇ ಬಿಡುಗಡೆಗೊಳಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ಗೋವಿಂದರಾಜು ಸರ್ಕಾರವನ್ನು ಆಗ್ರಹಿಸಿದರು.
ಪಾವಗಡ : ಅಕ್ರಮ ಸಕ್ರಮ ಯೋಜನೆ ಅಡಿ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸಂಪರ್ಕ ಸೇರಿದಂತೆ ತಲ ಎಕರೆಗೆ 10 ಸಾವಿರ ಬೆಳೆನಷ್ಟ ಪರಿಹಾರ ಮತ್ತು ಕಳೆದ ಸಾಲಿಗೆ ಕಟ್ಟಿದ್ದ ರೈತರಿಗೆ ಬೆಳೆವಿಮೆ ಪರಿಹಾರ ಕೂಡಲೇ ಬಿಡುಗಡೆಗೊಳಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ಗೋವಿಂದರಾಜು ಸರ್ಕಾರವನ್ನು ಆಗ್ರಹಿಸಿದರು.
ಶನಿವಾರ ಪಟ್ಟಣಕ್ಕೆ ಭೇಟಿ ನೀಡಿ ಇಲ್ಲಿನ ರೈತರ ಜಲ್ವಂತ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿದ ಬಳಿಕ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.
ಪಾವಗಡ ತಾಲೂಕು ಅತ್ಯಂತ ಬರಗಾಲಕ್ಕೆ ತುತ್ತಾಗಿದೆ. ಇಲ್ಲಿ ಮಳೆ ಬೆಳೆ ಇಲ್ಲದೇ ಶಾಶ್ವತ ಬರ ಆವರಿಸಿದೆ. ರಾಜ್ಯ ಸರ್ಕಾರದ ಘೋಷಣೆಯಂತೆ ಪಾವಗಡ ತಾಲೂಕನ್ನು ವಿಶೇಷವಾಗಿ ಪರಿಗಣಿಸಿ ರೈತ ಮತ್ತು ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಬೇಕು. ಮಳೆಯ ಅಭಾವದಿಂದ ಕಳೆದ ಆನೇಕ ವರ್ಷಗಳಿಂದ ಬೆಳೆ ನಷ್ಟಕ್ಕಿಡಾಗುತ್ತಿದೆ. ಕಳೆದ ಸಾಲಿಗೆ ಬಿತ್ತನೆ ಮಾಡಿದ ಬೆಳೆ ಸಂಪೂರ್ಣ ನಷ್ಟವಾಗಿದ್ದು ಎಕರೆಗೆ ತಲ 2 ಸಾವಿರ ಬದಲಿಗೆ 10 ಸಾವಿರ ಪರಿಹಾರ ಹಣ ಘೋಷಿಸಿಬೇಕು. ವಿಮೆ ಕಟ್ಟಿದ್ದ ರೈತರಿಗೆ ಬೆಳೆವಿಮೆ ಹಣ ಮಂಜೂರಾತಿಗೆ ಸರ್ಕಾರ ಮುಂದಾಗುವಂತೆ ಒತ್ತಾಯಿಸಿದರು.
ಇಲ್ಲಿನ ವಿಶ್ವ ಗಮನ ಸೆಳೆಯುವ ವಿದ್ಯುತ್ ಉತ್ಪಾದನೆಯ ಬೃಹತ್ ಸೌರಶಕ್ತಿಯ ಘಟಕಗಳು ಕಾರ್ಯಾರಂಭದಲ್ಲಿವೆ. ವಿಪರ್ಯಾಸವೆಂದರೆ, ಇತರೆ ರಾಜ್ಯಕ್ಕೆ ವಿದ್ಯುತ್ ಪೂರೆಕೆ ಮಾಡುವ ಶಕ್ತಿ ಇದ್ದರೂ ಪಾವಗಡಕ್ಕೆ ಮಾತ್ರ ವಿದ್ಯುತ್ ಅಭಾವ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕನಿಷ್ಠ 7ಗಂಟೆ ಕಾಲ ನಿರಂತರ ವಿದ್ಯುತ್ ಸರಬರಾಜ್ ಆಗಬೇಕು. ವಲಸೆ ತಪ್ಪಿಸಿ ಇಲ್ಲಿನ ಸೌರಶಕ್ತಿ ಘಟಕಗಳಲ್ಲಿ ಸ್ಥಳೀಯ ವಿದ್ಯಾವಂತ ಯುವಕರಿಗೆ ಉದ್ಯೋಗ ನೀಡಬೇಕು. ಕ್ವಿಂಟಾಲ್ ಕೊಬ್ಬರಿಗೆ 20 ಸಾವಿರ ರು. ನಿಗದಿ ಸೇರಿದಂತೆ ಕೊಬ್ಬರಿ ಹಾಗೂ ಇತರೆ ರೈತರ ಬೆಳೆಗಳ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಸೋಲಾರ್ ಘಟಕಗಳ ನಿರ್ಮಾಣದ ಹಿನ್ನಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸ್ಥಳೀಯ ವಿದ್ಯುತ್ ಉತ್ಪಾದನ ಕಂಪನಿಯ ಮಾಲೀಕರು ತಾಲೂಕಿನ ಗುಂಡ್ಲಹಳ್ಳಿ, ಕಡಪಲಕರೆ ಹಾಗೂ ಸುತ್ತಮುತ್ತಲಿನ ನೂರಾರು ಎಕರೆ ಜಮೀನು ರೈತರಿಂದ ಕಬಳಿಸಿದ್ದು, ಜಮೀನು ಮಾಲೀಕರಿಗೆ ಸೂಕ್ತ ಹಣ ಹಾಗೂ ಯುವಕರಿಗೆ ಉದ್ಯೋಗ ನೀಡುವಲ್ಲಿ ವಂಚಿಸಿದ್ದಾರೆ. ಸೋಲಾರ್ ವಿದ್ಯುತ್ ಉತ್ಪಾದನೆಯ ಸಿಂಟ್ಯಾಕ್ ಕಂಪನಿಯ ವಿರುದ್ಧ ರೈತರಿಂದ ಆನೇಕ ದೂರು ಕೇಳಿ ಬಂದಿವೆ. ರೈತರಿಗೆ ಗೋಲ್ ಮಾಲ್ ಮಾಡುವಲ್ಲಿ ಈ ಕಂಪನಿ ಮಾಲೀಕರು ನಿರತರಾಗಿದ್ದು, ನಿಯಮ ಉಲ್ಲಂಘಿಸಿ ರೈತರ ಜಮೀನು ಖರೀದಿಸಿರುವ ಬಗ್ಗೆ ದೂರುಗಳಿವೆ. ಕೂಡಲೇ ತನಿಖೆ ನಡೆಸಿ, ರೈತರಿಗೆ ಸೂಕ್ತ ನ್ಯಾಯ ಹಾಗೂ ಜಮೀನುಗಳಲ್ಲಿನ ತೋಟಗಾರಿಕೆ, ಪಂಪ್‌ಸೆಟ್ ಹಾಗೂ ಇತರೆ ಮಾರುವಳಿಯ ಕಟಾವಿಗೆ ಸೋಲಾರ್ ಕಂಪನಿಯ ಮಾಲೀಕರು ಪರಿಹಾರ ನೀಡುವಂತೆ ಒತ್ತಾಯಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಪೂಜಾರಪ್ಪ ಇಲ್ಲಿನ ರೈತರ ಜ್ವಲಂತ ಸಮಸ್ಯೆ ಹಾಗೂ ಸೋಲಾರ್‌ಗೆ ಜಮೀನು ನೀಡಿದ ರೈತರ ಪರದಾಟ ಮತ್ತು ಉದ್ಯೋಗವಿಲ್ಲದೇ ವಿದ್ಯಾವಂತ ಯುವಕರ ಸ್ಥಿತಿಗತಿಗಳ ಕುರಿತು ವಿವರಿಸಿ, ಶೀಘ್ರ ನಿವಾರಣೆಗೆ ಸರ್ಕಾರಕ್ಕೆ ಒತ್ತಾಯಿಸಿದರು.
ತಾಲೂಕು ರೈತ ಸಂಘದ ಕಾರ್ಯದರ್ಶಿ ನರಸಪ್ಪ, ಯುವ ಘಟಕದ ಕಾರ್ಯದರ್ಶಿ ಶಿವು, ನಲಿಗಾನಹಳ್ಳಿಯ ಮಂಜುನಾಥ್, ನಿಡಗಲ್ ಹೋಬಳಿ ಘಟಕದ ಅಧ್ಯಕ್ಷ ವೀರಭದ್ರಪ್ಪ, ಕೃಷ್ಣಗಿರಿ ಚಿತ್ತಯ್ಯ, ಗೋರಸ್ ಮಾವು ಸದಾಶಿವಪ್ಪ ಗುಡಪಲ್ಲಪ್ಪ, ರಾಮಾಂಜಿನಪ್ಪ, ಮುಗದಾಳಬೆಟ್ಟ ಚಿತ್ತಯ್ಯ, ರಾಮಚಂದ್ರಪ್ಪ, ಹನುಮಂತರಾಯಪ್ಪ, ಅಂಕಲಮ್ಮ, ನಾಗರಾಜ್, ಸಿದ್ದಪ್ಪ ಹನುಮಂತರಾಯಪ್ಪ, ಚಂದ್ರು, ನಾಗರಾಜಪ್ಪ ಹಾಗೂ ಇತರೆ ನೂರಾರು ಮಂದಿ ರೈತ ಸಂಘದ ಪದಾಧಿಕಾರಿಗಳಿದ್ದರು.