Asianet Suvarna News Asianet Suvarna News

25 ವರ್ಷಗಳ ಹಿಂದೆ ಮೃತಪಟ್ಟವರಿಗೆ ನಡೀತು ಪ್ರೇತಗಳ ಮದುವೆ: ವಿಶಿಷ್ಟ ವಿವಾಹಕ್ಕೆ ಸಾಕ್ಷಿಯಾದ ನೂರಾರು ಮಂದಿ..!

ಹೆಣ್ಣು ಪ್ರೇತವನ್ನು ಉಂಗುರ, ಚೈನು, ಬಳೆ ಮಾಲೆ ಇತ್ಯಾದಿಗಳೊಂದಿಗೆ ಶೃಂಗರಿಸುತ್ತಾರೆ. ಬಳಿಕ ಪರಸ್ಪರ ಜೊತೆಗೂಡಿಸಲಾಗುತ್ತದೆ. ಗೌಡ ಸಮುದಾಯದ ಕಟ್ಟುಕಟ್ಟಳೆಯ ಪ್ರಕಾರ ಶಾಸ್ತ್ರೋಕ್ತವಾಗಿ ಧಾರೆ ಎರೆದುಕೊಡಲಾಗುತ್ತದೆ. ಬಳಿಕ ಊಟೋಪಚಾರಗಳೊಂದಿಗೆ ಮದುವೆ ಮುಗಿಯುತ್ತದೆ. 

Ghosts Marriage Held at Belthangady in Dakshina Kannada grg
Author
First Published Oct 13, 2023, 9:34 AM IST

ಬೆಳ್ತಂಗಡಿ(ಅ.13):  ಇಲ್ಲಿನ ನಡ ಗ್ರಾಮದಲ್ಲಿ ಇಪ್ಪತ್ತೈದು ವರ್ಷಗಳ ಹಿಂದೆ ಮೃತಪಟ್ಟ ಎರಡು ಗಂಡು ಹಾಗೂ ಎರಡು ಹೆಣ್ಣು ಮಕ್ಕಳಿಗೆ ಮದುವೆ ನಡೆಯಿತು. ಸೋಮವಾರ ಶಿವಣ್ಣ ಗೌಡ ಅವರ ಪೌರೋಹಿತ್ಯದಲ್ಲಿ ನಡೆದ ಪ್ರೇತಗಳ ಮದುವೆಗೆ ಸುಮಾರು ನೂರಕ್ಕೂ ಹೆಚ್ಚು ಮಂದಿ ಸಾಕ್ಷಿಗಳಾಗಿದ್ದರು.

ನಡ ಗ್ರಾಮದ ಪಾದೆ ಮನೆಯಲ್ಲಿ ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಎಳೆ ಪ್ರಾಯದಲ್ಲಿ ಇಬ್ಬರು ಗಂಡು ಮಕ್ಕಳು ಅಸು ನೀಗಿದ್ದರು. ಕೆಲ ಕಾಲದ ನಂತರ ಮೂರನೇ ಗಂಡು ಮಗು ಜನಿಸಿತ್ತು. ಇದೀಗ ಆ ಗಂಡಿಗೆ ಮದುವೆ ಪ್ರಾಯ. ಮದುವೆಗೆ ಎಷ್ಟೇ ಪ್ರಯತ್ನಪಟ್ಟರೂ ಕೂಡಿ ಬರುತ್ತಿರಲಿಲ್ಲ. ಹಲವು ಕನ್ಯೆಯರನ್ನು ನೋಡಿದ್ದರೂ ಗಂಡಿಗೆ ಮದುವೆ ಭಾಗ್ಯ ಒದಗಿಬರುತ್ತಿರಲಿಲ್ಲ. ಹೀಗಿರುವಾಗ ಗಂಡಿನ ಕಡೆಯಲ್ಲಿ ಒಬ್ಬರಿಗೆ ಮೈಮೇಲೆ ದರುಶನ ಬರುವುದು ಕಂಡು ಬಂತು. ದರ್ಶನದ ಸಮಯದಲ್ಲಿ ಗಂಡಿಗೆ ಮದುವೆಯ ಯೋಗ ಬರಬೇಕಿದ್ದರೆ ಹಿಂದೆ ತೀರಿಹೋದ ಮಕ್ಕಳಿಗೆ ಮದುವೆ ಮಾಡಿಸಬೇಕು ಎಂದು ದರ್ಶನ ಬಂದವರು ಹೇಳುತ್ತಿದ್ದರು.

ವೈಷ್ಣೋದೇವಿ ಉತ್ಸವದಲ್ಲಿ ಮೊದಲ ಬಾರಿ ಯಕ್ಷಗಾನ ಪ್ರದರ್ಶನ!

ನಡೆಯಿತು ಮಾತುಕತೆ:

ಅದರಂತೆ ಹೆಣ್ಣುಗಳ ಹುಡುಕಾಟ ನಡೆಯಿತು. ಶೋಧ ವ್ಯರ್ಥವಾಗಲಿಲ್ಲ. ಶಿರ್ಲಾಲು ಎಂಬಲ್ಲಿ ನಡದಲ್ಲಿ ನಡೆದಂತೆ ಎರಡು ಹೆಣ್ಣು ಮಕ್ಕಳು ಎಳೆ ಪ್ರಾಯದಲ್ಲಿ ಅಸುನೀಗಿದ್ದರು. ಅವರಿಗೂ ಕುಟುಂಬದಲ್ಲಿ ಸಮಸ್ಯೆ ತಲೆದೋರಿತ್ತು. ಎರಡೂ ಮನೆಯವರು ಪರಸ್ಪರ ಮಾತುಕತೆ ಮಾಡಿಕೊಂಡರು. ವಿಶೇಷವೆಂದರೆ ಎರಡೂ ಕಡೆಯವರು ಗೌಡ ಸಮುದಾಯದವರೇ ಆಗಿದ್ದರು. ಒಂದೇ ಸಮುದಾಯದವರು ಪರಸ್ಪರ ಸಿಕ್ಕಿದರೆ ಮಾತ್ರ ಎರಡು ಕುಟುಂಬಗಳಲ್ಲಿನ ಸಮಸ್ಯೆಗಳಿಗೆ ಪೂರ್ಣ ವಿರಾಮ ಸಿಗುತ್ತಿತ್ತು. ಆದರೆ ಸಗೋತ್ರ (ಬರಿ)ವಾಗಿರಬಾರದು. ಹೀಗೆ ಎಲ್ಲವೂ ಸಸೂತ್ರವಾಗಿಯೇ ಇದ್ದುದರಿಂದ ಸೋಮವಾರ ಎರಡು ಜೋಡಿ ಪ್ರೇತಾತ್ಮಗಳಿಗೆ ಶಿವಣ್ಣ ಗೌಡ ಮದುವೆ ಮಾಡಿಸಿದರು. ಶಿವಣ್ಣ ಇವರು ಇದೇ ತರಹದ ಈ ಹಿಂದೆ ಸುಮಾರು ೧೪ ಮದುವೆಗಳನ್ನು ಮಾಡಿಸಿದ್ದರು.

ಈ ರೀತಿ ಇದೆ ಪ್ರೇತಗಳ ಮದುವೆ:

ಅಡಕೆ ಹಿಂಗಾರಕ್ಕೆ ಪ್ರೇತಗಳನ್ನು ಆಹ್ವಾನಿಸಲಾಗುತ್ತದೆ. ಬಳಿಕ ನಾಲ್ಕೂ ಹಿಂಗಾರಗಳನ್ನು ಒಂದೆಡೆ ಇಟ್ಟು ನಿಶ್ಚಿತಾರ್ಥ ನೆರವೇರಿಸಲಾಗುತ್ತದೆ. ಕೆಲ ದಿನಗಳ ಬಳಿಕ ಮದರಂಗಿ ಶಾಸ್ತ್ರ ನಡೆಸಲಾಗುತ್ತದೆ. ನಂತರ ಶುಭ ಮೂಹೂರ್ತದಲ್ಲಿ ನಾಲ್ಕೂ ಹಿಂಗಾರಗಳಿಗೆ ಮದುವೆಯಲ್ಲಿರುವಂತೆ ಅಲಂಕಾರಗಳನ್ನು ಮಾಡಲಾಗುತ್ತದೆ. ಹೆಣ್ಣು ಪ್ರೇತವನ್ನು ಉಂಗುರ, ಚೈನು, ಬಳೆ ಮಾಲೆ ಇತ್ಯಾದಿಗಳೊಂದಿಗೆ ಶೃಂಗರಿಸುತ್ತಾರೆ. ಬಳಿಕ ಪರಸ್ಪರ ಜೊತೆಗೂಡಿಸಲಾಗುತ್ತದೆ. ಗೌಡ ಸಮುದಾಯದ ಕಟ್ಟುಕಟ್ಟಳೆಯ ಪ್ರಕಾರ ಶಾಸ್ತ್ರೋಕ್ತವಾಗಿ ಧಾರೆ ಎರೆದುಕೊಡಲಾಗುತ್ತದೆ. ಬಳಿಕ ಊಟೋಪಚಾರಗಳೊಂದಿಗೆ ಮದುವೆ ಮುಗಿಯುತ್ತದೆ. ಶೃಂಗಾರಕ್ಕೆ ಉಪಯೋಗಿಸಿದ ವಸ್ತುಗಳನ್ನು ಕಲಶದಲ್ಲಿ ಹಾಕಿಡಲಾಗುತ್ತದೆ.

Follow Us:
Download App:
  • android
  • ios