ದಾವಣಗೆರೆ(ಮೇ.09): ಕೋವಿಡ್‌-19 ವೈರಸ್‌ ಸೋಂಕಿನ ವಿರುದ್ಧ ಹಗಲಿರುಳೆನ್ನದೇ ಹೋರಾಡುತ್ತಿರುವ ಜಿಲ್ಲೆಯ ವೈದ್ಯರು, ಶುಶ್ರೂಷಕರು, ಆರೋಗ್ಯ ಸಿಬ್ಬಂದಿಗೆ ಜಿಲ್ಲಾಡಳಿತ, ಮಹಾನಗರ ಪಾಲಿಕೆಯಿಂದ ಪುಷ್ಪ ವೃಷ್ಟಿಸುರಿಸುವ ಜೊತೆಗೆ ಚಪ್ಪಾಳೆ ತಟ್ಟುವ ಮೂಲಕ ಈ ಎಲ್ಲರ ಸೇವೆಗೆ ಕೃತಜ್ಞತಾ ಗೌರವ ಸಮರ್ಪಿಸಲಾಯಿತು.

ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಶುಕ್ರವಾರ ಕೊರೋನಾ ವಾರಿಯ​ರ್‍ಸ್ಗೆ ಪುಷ್ಪ ವೃಷ್ಟಿಸಲ್ಲಿಸಿ, ಗೌರವ ಸಮರ್ಪಿಸಿ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ, ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಆರೋಗ್ಯ ಸಿಬ್ಬಂದಿಗೆ ಗೌರವ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು. 2 ತಿಂಗಳಿನಿಂದಲೂ ಹಗಲಿರುಳೆನ್ನದೇ ಕೆಲಸ ಮಾಡುತ್ತಿರುವವರಿಗೆ ಬಲ, ಚೈತನ್ಯ ತುಂಬಲು ಈ ಗೌರವ ಸಲ್ಲಿಸುತ್ತಿದ್ದೇವೆ. ಎಲ್ಲರೂ ತಮ್ಮ ಜವಾಬ್ದಾರಿ, ಕರ್ತವ್ಯ ಅಚ್ಚುಕಟ್ಟಾಗಿ ಶ್ರದ್ಧೆಯಿಂದ ನಿರ್ವಹಿಸುತ್ತಿದ್ದೀರಿ. ಎಂತಹ ಪರಿಸ್ಥಿತಿ ಬಂದರೂ ನಾವು ನಿಭಾಯಿಸುತ್ತೇವೆ, ನಾವೂ ನಿಮ್ಮೊಂದಿಗೇ ಇದ್ದೇವೆ. ಯಾರೂ ಧೃತಿಗೆಡಬೇಡಿ ಎಂದು ತಿಳಿಸಿದರು.

ಕೊರೋನಾ ಎಂಬ ಯುದ್ಧವನ್ನು ನಮ್ಮೆಲ್ಲಾ ಪರಿಣಿತ ವೈದ್ಯರು, ಶುಶ್ರೂಷಕರು, ಸಹಾಯಕರು ಹೀಗೆ ಎಲ್ಲ ಅಧಿಕಾರಿ, ಸಿಬ್ಬಂದಿ ಗೆಲ್ಲುತ್ತೇವೆಂಬ ವಿಶ್ವಾಸವಿದೆ. ಈ ಹಿನ್ನೆಲೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇವೆ. ವಿಶೇಷವಾಗಿ ಉತ್ಸಾಹಿ ಮೇಯರ್‌ ಸಿಕ್ಕಿದ್ದು, ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ಸವಾಲಿನ ದಿನಗಳನ್ನು ಅತ್ಯಂತ ಕ್ರಿಯಾಶೀಲವಾಗಿ ಓಡಾಡಿ, ಜನರಲ್ಲಿ ಆತ್ಮವಿಶ್ವಾಸ ತುಂಬುವ ಮೂಲಕ ನಾವೆಲ್ಲರೂ ಕೊರೋನಾ ಎದುರಿಸೋಣ ಎಂದು ಕರೆ ನೀಡಿದರು.

ದಾವಣಗೆರೆಯಲ್ಲಿ ಮತ್ತೆ 14 ಪಾಸಿಟಿವ್‌ ಕೇಸ್‌, 257 ವರದಿ ಬಾಕಿ: ಜಿಲ್ಲಾಧಿಕಾರಿ

ಈವರೆಗೆ ಇದ್ದ ಕಾಲವೇ ಬೇರೆ, ಈಗಿನ ದಿನಗಳೇ ಬೇರೆ ಎಂಬುದನ್ನು ಎಲ್ಲರೂ ಅರಿಯಬೇಕು. ಈಗಿನ ಪರಿಸ್ಥಿತಿಯಲ್ಲಿ ಎಲ್ಲರೂ ತಮ್ಮ ಸಾಮರ್ಥ್ಯ ತೋರಿಸಿ, ನಮ್ಮೆಲ್ಲರ ಜೊತೆಗೆ ಇರುತ್ತಾರೆ ಎಂಬ ವಿಶ್ವಾಸ ನಮಗಿದೆ. ನಾವೂ ನಿಮ್ಮ ಜೊತೆಗೆ ಕೈ ಜೋಡಿಸುತ್ತೇವೆ ಎಂಬುದಾಗಿ ಮೇಯರ್‌ ಅಜಯಕುಮಾರ ತಿಳಿಸಿದರು.

ಮೇಯರ್‌ ಬಿ.ಜಿ.ಅಜಯಕುಮಾರ ಮಾತನಾಡಿ, ಡಿಸಿ, ಎಸ್‌ಪಿ ಎಲ್ಲ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿದಿನ ಸಭೆ ನಡೆಸಿ, ಒಂದು ಹಂತದಲ್ಲಿ ಕೊರೋನಾ ಓಡಿಸಿದ್ದರು. ಆದರೆ, ಯಾವ ಸಂದರ್ಭದಲ್ಲಿ ಎಡವಿದೆವೋ ದುರಾದೃಷ್ಟಕ್ಕೋ, ನಮ್ಮ ಅದೃಷ್ಟಸರಿ ಇರಲಿಲ್ಲವೋ ಮತ್ತೆ ವೈರಸ್‌ ಹಾವಳಿ ಹೆಚ್ಚುತ್ತಿದೆ. ವೈರಸ್‌ ನಿಯಂತ್ರಣ, ನಿರ್ಮೂಲನೆಯ ಈ ಯುದ್ಧಕ್ಕೆ ನಾವೂ ಸನ್ನದ್ಧರಾಗಿದ್ದೇವೆ ಎಂದರು.

ಮಹಾಭಾರತದಲ್ಲಿ ಕೌರವರ ಸಂಹಾರಕ್ಕೆ ಶ್ರೀಕೃಷ್ಣನು ಅರ್ಜುನನ ಸಾರಥಿಯಾದಂತೆ ದೇಶದಲ್ಲಿ ಕೊರೋನಾ ವೈರಸ್‌ ವಿರುದ್ಧ ಲಕ್ಷಾಂತರ ವೈದ್ಯರು, ಶುಶ್ರೂಷಕರು, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಪೊಲೀಸರು, ಅಧಿಕಾರಿ, ಸಿಬ್ಬಂದಿ ಸಾರಥಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದೊಂದು ಸವಾಲು ಸ್ವೀಕರಿಸಿ, ಕೊರೋನ ಮುಕ್ತಗೊಳಿಸುವ ಮೂಲಕ ನಗರ, ಜಿಲ್ಲೆ ಮಾದರಿಯಾಗಿಸೋಣ ಎಂದು ಮನವಿ ಮಾಡಿದರು.