Asianet Suvarna News Asianet Suvarna News

ರಾಷ್ಟ್ರ ನಿರ್ಮಾಣದಲ್ಲಿ ಎಬಿವಿಪಿ ಪಾತ್ರ ಅನನ್ಯ: ದತ್ತಾತ್ರೇಯ ಹೊಸಬಾಳೆ

ಎಬಿವಿಪಿಯಲ್ಲಿ ಕೆಲಸ ಮಾಡಿದವರು ಸಮಾಜ, ದೇಶ, ಧರ್ಮಕ್ಕಾಗಿ ಏನನ್ನಾದರೂ ಕೊಡುಗೆ ನೀಡಬೇಕೆಂಬ ಮಹತ್ತರ ಗುರಿ ಇಟ್ಟುಕೊಂಡು ಜೀವಿಸುತ್ತಿದ್ದಾರೆ. ಶಿಕ್ಷಣ, ಪತ್ರಿಕೋದ್ಯಮ, ಸಾಮಾಜಿಕ ಕಾರ್ಯ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಅವರು ಕೆಲಸ ಮಾಡುತ್ತಿದ್ದಾರೆ ಎಂದ ಹೊಸಬಾಳೆ 

General Secretary of the Rashtriya Swayamsevak Sangh Dattatreya Hosabale Talks Over ABVP grg
Author
First Published Dec 20, 2022, 9:00 PM IST

ಬಾಗಲಕೋಟೆ(ಡಿ.20):  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಚಳವಳಿಗಳನ್ನು ರೂಪಿಸುವ ಕೆಲಸವನ್ನಷ್ಟೇ ಮಾಡದೇ ರಾಷ್ಟ್ರ ನಿರ್ಮಾಣದ ಮಹತ್ವದ ಕಾರ್ಯವನ್ನೂ ಮಾಡುತ್ತ ಬಂದಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು.

ನಗರದ ಬಸವೇಶ್ವರ ಎಂಜಿನಿಯರಿಂಗ್‌ ಕಾಲೇಜು ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆರ್‌ಎಸ್‌ಎಸ್‌ ಜಿಲ್ಲಾ ಸಂಘಚಾಲಕ ಡಾ.ಸಿ.ಎಸ್‌.ಪಾಟೀಲ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಎಬಿವಿಪಿಯಲ್ಲಿ ಕೆಲಸ ಮಾಡಿದವರು ಸಮಾಜ, ದೇಶ, ಧರ್ಮಕ್ಕಾಗಿ ಏನನ್ನಾದರೂ ಕೊಡುಗೆ ನೀಡಬೇಕೆಂಬ ಮಹತ್ತರ ಗುರಿ ಇಟ್ಟುಕೊಂಡು ಜೀವಿಸುತ್ತಿದ್ದಾರೆ. ಶಿಕ್ಷಣ, ಪತ್ರಿಕೋದ್ಯಮ, ಸಾಮಾಜಿಕ ಕಾರ್ಯ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಅವರು ಕೆಲಸ ಮಾಡುತ್ತಿದ್ದಾರೆ ಎಂದರು.

ಸಿದ್ದು ತಮ್ಮ ಆಡಳಿತದಲ್ಲಿ ಬೆಳಗಾವಿ ಸಮಸ್ಯೆಯನ್ನು ಏಕೆ ಬಗೆಹರಿಸಲಿಲ್ಲ?: ಸಚಿವ ಕಾರಜೋಳ

1980ರ ದಶಕದಲ್ಲಿ ಅನಂತಕುಮಾರ ಹಾಗೂ ನಾನು ಎಬಿವಿಪಿಯಲ್ಲಿ ಕೆಲಸ ಮಾಡುವಾಗ ರಾಮ ಮನಗೂಳಿ ಅವರು ಸಿ.ಎಸ್‌.ಪಾಟೀಲ ಅವರನ್ನು ಎಬಿವಿಪಿ ನಗರ ಘಟಕದ ಅಧ್ಯಕ್ಷರನ್ನಾಗಿ ಮಾಡಬಹುದು ಎಂದು ಸೂಚಿಸಿದ್ದರು. ನಂತರ ಪಾಟೀಲರ ಮನೆಗೆ ನಾವು ತೆರಳಿದಾಗ ಅಧ್ಯಾಪಕನಿಗೆ ವಿದ್ಯಾರ್ಥಿ ಸಂಘಟನೆಯಲ್ಲಿ ಏನು ಕೆಲಸ ಎಂದು ಪ್ರಶ್ನಿಸಿದರು. ಆಗ ನಾವು ಮನವರಿಕೆ ಮಾಡಿದಾಗ ಶಿಕ್ಷಕನಾದರೇನು ಜೀವನ ಪಯಂರ್‍ತ ವಿದ್ಯಾರ್ಥಿಯೇ ಎಂದು ಅವರು ಎಬಿವಿಪಿ ಸೇರ್ಪಡೆಗೊಂಡರು. ವಿದ್ಯಾರ್ಥಿ ಎಂಬ ಭಾವದಲ್ಲೇ ಅವರು ಜೀವಿಸಿದ್ದರಿಂದ ಇಂದು ಅವರು ಸಾಧಕರಾಗಿದ್ದಾರೆ ಎಂದರು.

ಸ್ಥಾನ, ಪದವಿ ಸಿಕ್ಕಾಗ ಅಹಂಕಾರವೂ ಬರುತ್ತದೆ. ಕರ್ಜೂರದ ಮರ ಉದ್ದವಾಗಿ ಬೆಳೆಯುತ್ತದೆ. ಆದರೂ ಅದು ಯಾರಿಗೂ ನೆರಳು ನೀಡುವುದಿಲ್ಲ. ಅದರ ಹಣ್ಣು ಪಡೆಯಬೇಕೆಂದರೆ ಮರ ಅತೀ ಎತ್ತರದಲ್ಲಿ ಇರುತ್ತದೆ. ಆದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ. ಫಲ ಉಳ್ಳ ಮರ ಎಂದಿಗೂ ಬಾಗಿರಬೇಕು. ಆಗ ಮಾತ್ರ ಉಳಿದವರಿಗೆ ಪ್ರಯೋಜನವಾಗುತ್ತದೆ. ಹಾಗೆಯೇ ಸಿ.ಎಸ್‌.ಪಾಟೀಲ ಸಮಾಜಕ್ಕೆ ಉಪಕಾರಿ ಆಗಿದ್ದಾರೆ ಎಂದು ಬಣ್ಣಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ಸಿ.ಎಸ್‌.ಪಾಟೀಲ, ವಿದ್ಯಾರ್ಥಿ ಪರಿಷತ್ತಿನಿಂದ ಆರಂಭಗೊಂಡ ಬದುಕು ಇಂದು ಜಿಲ್ಲಾ ಸಂಘಚಾಲಕ ಆಗುವವರೆಗೆ ಬೆಳೆದುಬಂದಿದೆ. ದಿವಂಗತ ಅನಂತಕುಮಾರ, ಪಿ.ವಿ.ಕೃಷ್ಣಭಟ್ಟರು, ದತ್ತಾತ್ರೇಯ ಹೊಸಬಾಳೆ ಅವರಂತಹ ಮಹನೀಯರಿಂದ ಪ್ರಭಾವಿತನಾಗಿ ನಾನು ಕೆಲಸ ಮಾಡಿದ್ದೇನೆ. ಸಂಘದ ಕಾರ್ಯ ನನಗೆ ತೃಪ್ತಿ ನೀಡಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬವಿವ ಸಂಘದ ಕಾರ್ಯಾಧ್ಯಕ್ಷ, ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಡಾ.ಸಿ.ಎಸ್‌.ಪಾಟೀಲ ಅವರು ಸಂಘದ ವಿಜಯಮಹಾಂತೇಶ ಶಾಲೆಯ ವಿದ್ಯಾರ್ಥಿ. ಬಸಪ್ಪಣ್ಣ ಪಲ್ಲೇದ ಅವರಂಥ ಮಹನೀಯರಿಂದ ಸಂಘ ಬೆಳೆಯಿತು. ಸಿ.ಎಸ್‌.ಪಾಟೀಲ ಅವರು ಇಲ್ಲಿಯ ವಿದ್ಯಾರ್ಥಿ ಆಗಿ, ಅಧ್ಯಾಪಕರಾಗಿ ನಂತರ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ ನಿವೃತ್ತರಾದರು. ಅವರು ತಮ್ಮ ಬುದ್ಧಿವಂತಿಕೆ ಮೇಲೆ ಬೆಳೆದು ಬಂದವರಾಗಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ನಲ್ಲಿ ಜಾತಿ ಆಧಾರಿತ ಸಿಎಂ ಆಯ್ಕೆ ಇಲ್ಲ: ಡಾ.ಜಿ.ಪರಮೇಶ್ವರ್‌

ನಿವೃತ್ತರಾದವರನ್ನು ಮರಳಿ ಕರೆತಂದು ಸಂಘದ ಕಾರ್ಯಗಳಲ್ಲಿ ನಾವು ತೊಡಗಿಸುತ್ತೇವೆ. ಅಂಥವರ ಸಮರ್ಥ ಸೇವೆ ಪಡೆಯುತ್ತ ಬವಿವ ಸಂಘ ಬೆಳೆದುಬಂದಿದೆ. ಅದರಲ್ಲಿ ಸಿ.ಎಸ್‌.ಪಾಟೀಲ ಕೂಡ ಒಬ್ಬರು ಎಂದು ಹೇಳಿದರು.
ಚರಂತಿಮಠದ ಶ್ರೀ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು, ವಿದ್ಯಾರ್ಥಿ ಪರಿಷತ್ತಿನ ಮಾಜಿ ಸದಸ್ಯ ಪಿ.ವಿ.ಕೃಷ್ಣಭಟ್‌, ನೃಪತುಂಗ ವಿವಿ ಕುಲಪತಿ ಶ್ರೀನಿವಾಸ ಬಳ್ಳಿ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಜಿ.ಎನ್‌.ಪಾಟೀಲ, ಅಭಿನಂದನಾ ಗ್ರಂಥದ ಸಂಪಾದಕ ಎಸ್‌.ಜಿ.ಕೋಟಿ, ಸ್ವಾಗತ ಸಮಿತಿ ಕಾರ್ಯದರ್ಶಿ ಜಿ.ಕೆ.ತಳವಾರ ವೇದಿಕೆಯಲ್ಲಿದ್ದರು.

ಸಂಘದ ಹಿರಿಯ ಪ್ರಚಾರಕರಾದ ವಿ.ನಾಗರಾಜ, ಉತ್ತರಪ್ರಾಂತ ಪ್ರಚಾರಕ ನರೇಂದ್ರ, ತಿಪ್ಪೇಸ್ವಾಮಿ, ವಿಧಾನ ಪರಿಷತ್‌ ಸದಸ್ಯ ಪಿ.ಎಚ್‌.ಪೂಜಾರ, ವಿಪ ಮಾಜಿ ಸದಸ್ಯರಾದ ನಾರಾಯಣಸಾ ಭಾಂಡಗೆ, ಅರುಣ ಶಹಾಪುರ ಉಪಸ್ಥಿತರಿದ್ದರು.

Follow Us:
Download App:
  • android
  • ios