ಬೆಂಗಳೂರು(ಫೆ.17): ಮಾರಣಾಂತಿಕ ಸ್ನಾಯು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಹದಿನಾಲ್ಕು ತಿಂಗಳ ಮಗುವೊಂದು ಬಹು ರಾಷ್ಟ್ರೀಯ ಔಷಧ ಕಂಪನಿ ‘ನೋವಾರ್ಟಿಸ್‌’ನ ಲಾಟರಿಯಲ್ಲಿ ಆಯ್ಕೆಯಾಗಿ ಬರೋಬ್ಬರಿ 16 ಕೋಟಿ ರು. ಮೌಲ್ಯದ ಯಶಸ್ವಿ ಜೀನ್‌ ಚಿಕಿತ್ಸೆ ಮೂಲಕ ಮರುಜೀವ ಪಡೆದುಕೊಂಡಿದೆ.

ಇಂತಹದ್ದೊಂದು ಅಪರೂಪದ ಚಿಕಿತ್ಸೆ ನಡೆದಿರುವುದು ಬೆಂಗಳೂರಿನ ಬಾಪ್ಟಿಸ್ಟ್‌ ಆಸ್ಪತ್ರೆಯಲ್ಲಿ. ಉತ್ತರ ಕನ್ನಡದ ಭಟ್ಕಳ ಪಟ್ಟಣದ ಮೊಹಮ್ಮದ್‌ ಬೆಸಿಲ್‌ ಮತ್ತು ಖಾದಿಜಾ ದಂಪತಿ ಪುತ್ರಿ ಫಾತಿಮಾ (14 ತಿಂಗಳು) ಹುಟ್ಟಿನಿಂದಲೇ ಸ್ನಾಯು ಸಂಬಂಧಿತ ಕಾಯಿಲೆಯಿಂದ ಬಳಲುತ್ತಿತ್ತು. ಈ ಕಾಯಿಲೆ ನಿವಾರಣೆಗೆ ‘ಜೊಲ್ಗೆನ್ಶಾ’ ಎಂಬ ವಿಶೇಷ ಜೀನ್‌ ಚಿಕಿತ್ಸೆಯ ಅಗತ್ಯವಿತ್ತು. ಆಗರ್ಭ ಶ್ರೀಮಂತರು ಮಾತ್ರವೇ ಇಂತಹ ಚಿಕಿತ್ಸೆ ಪಡೆಯಲು ಸಾಧ್ಯ. ಏಕೆಂದರೆ ಇದರ ವೆಚ್ಚ 16 ಕೋಟಿ ರು. (2.1 ಮಿಲಿಯನ್‌ ಯು.ಎಸ್‌.ಡಾಲರ್‌). ಆದರೆ, ಮಗುವಿನ ಅದೃಷ್ಟವೋ ಏನೋ ಸ್ವಿಡ್ಜರ್ಲೆಂಟ್‌ ಮೂಲಕದ ಬಹುರಾಷ್ಟ್ರೀಯ ಔಷಧ ಕಂಪನಿ ‘ನೋವಾರ್ಟಿಸ್‌’ನ ವಿಶೇಷ ಲಾಟರಿಯಲ್ಲಿ ಆಯ್ಕೆಯಾಗಿದೆ. ಸಂಸ್ಥೆಯು ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವವರ ಚಿಕಿತ್ಸೆಗೆ ನೆರವು ನೀಡುತ್ತಿದ್ದು, ಇದಕ್ಕೆ ಫಲಾನುಭವಿಗಳನ್ನು ಲಾಟರಿಯೆತ್ತುವ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಬಾರಿ ಲಾಟರಿ ಸದರಿ ಮಗುವಿಗೆ ಬಂದಿದೆ. ಇದರಿಂದ ಬಾಪ್ಟಿಸ್ಟ್‌ ಆಸ್ಪತ್ರೆಯ ವೈದ್ಯರು ಈ ಮಗುವಿಗೆ ಜೀನ್‌ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ದೇಹದಲ್ಲಿರುವ ಬೇಡವಾದ ಮಚ್ಚೆ ನಿವಾರಿಸಲು ಇಲ್ಲಿದೆ ಸಿಂಪಲ್ ಮನೆಮದ್ದು

ಕಳೆದ ತಿಂಗಳು ಈ ಚಿಕಿತ್ಸೆ ನಡೆಸಲಾಗಿದ್ದು, ಚಿಕಿತ್ಸೆಯ ಬಳಿಕ ಮಗು ಚೇತರಿಸಿಕೊಳ್ಳುತ್ತಿದ್ದು ಸ್ನಾಯು ಸಮಸ್ಯೆ ಕ್ರಮೇಣ ಸುಧಾರಿಸುತ್ತಿದೆ. ಸಾಮಾನ್ಯ ಮಕ್ಕಳಂತೆ ನಡೆದಾಡಲು ಇನ್ನು ಸಮಯ ಬೇಕಾಗುತ್ತದೆ ಎಂದು ಆಸ್ಪತ್ರೆಯ ನಿರ್ದೇಶಕ (ಸಿಇಒ) ನವೀನ್‌ ಥಾಮಸ್‌ ಹೇಳಿದ್ದಾರೆ.

ಸಾಮಾನ್ಯವಾಗಿ ಮಿದುಳಿನಿಂದ ಸ್ನಾಯುಗಳಿಗೆ ವಿದ್ಯುತ್‌ ಸಂಕೇತಗಳನ್ನು ನೀಡುವ ನರ ಕೋಶಗಳು ದುರ್ಬಲವಾಗುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಈ ಅಪರೂಪದ ಕಾಯಿಲೆಯ ಚಿಕಿತ್ಸೆ ಬಹಳ ದುಬಾರಿಯಾಗಿದ್ದು, ಸಾಮಾನ್ಯರು ಪಡೆಯಲು ಸಾಧ್ಯವಿಲ್ಲ. ಇದಕ್ಕೆ ಅಗತ್ಯವಾದ ‘ಜೊಲ್ಗೆನ್ಶಾ’ ಎಂಬ ಜೀನ್‌ ಚಿಕಿತ್ಸೆಗೆ 16 ಕೋಟಿ ರು. ವೆಚ್ಚವಾಗುತ್ತದೆ. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಬಾಪ್ಟಿಸ್ಟ್‌ ಆಸ್ಪತ್ರೆಯು ಈ ಅಪರೂಪದ ಚಿಕಿತ್ಸೆ ನೀಡಿದೆ ಎಂದು ಮಕ್ಕಳ ನರರೋಗ ತಜ್ಞ ಡಾ. ಆನ್‌ ಆಗ್ನೆಸ್‌ ಮ್ಯಾಥ್ಯೂ ಹೇಳಿದರು.