ಸಾಧನೆಗೆ ಆಸಕ್ತಿಯೇ ಕಾರಣ: ಗವಿಸಿದ್ದೇಶ್ವರ ಶ್ರೀ
* ಜ್ಞಾನಬಂಧು ಪದವಿಪೂರ್ವ ಮಹಾವಿದ್ಯಾಲಯ ಶುರು
* ವಿದ್ಯಾರ್ಥಿ ವಸತಿ ನಿಲಯ ಕಟ್ಟಡ ಉದ್ಘಾಟಿಸಿದ ಶ್ರೀಗಳು
* ಅಧ್ಯಕ್ಷ ದಾನಪ್ಪ ಕವಲೂರು ಅವರ ಕಾರ್ಯತತ್ಪರತೆ ಶ್ಲಾಘನೆ
ಕೊಪ್ಪಳ(ಜು.29): ಮನುಷ್ಯನ ಸಾಧನೆಗೆ ಆಸಕ್ತಿಯೇ ಮೂಲಕಾರಣ ಎಂದು ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದ್ದಾರೆ.
ಅವರು ಭಾಗ್ಯನಗರ ಪಟ್ಟಣದ ಜ್ಞಾನ ಬಂಧು ಪದವಿಪೂರ್ವ ಮಹಾವಿದ್ಯಾಲಯ ಹಾಗೂ ನೂತನವಾಗಿ ನಿರ್ಮಾಣಗೊಂಡ ವಿದ್ಯಾರ್ಥಿ ವಸತಿ ನಿಲಯದ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಮನುಷ್ಯ ಏನಾದರೊಂದು ಸಾಧನೆಗೈಯಲು ಅವನಲ್ಲಿನ ಆಸಕ್ತಿ, ಶ್ರದ್ಧೆ ಹಾಗೂ ಪರಿಶ್ರಮಗಳೇ ಕಾರಣ ಎಂದು ಹೇಳಿದರು. ಜ್ಞಾನ ಬಂಧು ಪ.ಪೂ. ಮಹಾವಿದ್ಯಾಲಯದ ಅಧ್ಯಕ್ಷ ದಾನಪ್ಪ ಕವಲೂರು ಅವರ ಕಾರ್ಯತತ್ಪರತೆಯನ್ನು ಶ್ಲಾಘಿಸಿದರು.
ಖ್ಯಾತ ವಾಣಿಜ್ಯೋದ್ಯಮಿ ಶ್ರೀನಿವಾಸ ಗುಪ್ತಾ ಮಾತನಾಡಿ, ಶಿಕ್ಷಣ ಸಂಸ್ಥೆಯ ಅಧ್ಯಕ್ಷರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿ, ನೂತನವಾಗಿ ಆರಂಭಗೊಂಡ ಜ್ಞಾನಬಂಧು ಪ.ಪೂ. ಮಹಾವಿದ್ಯಾಲಯ ತನ್ನ ಶೈಕ್ಷಣಿಕ ಧ್ಯೇಯೋದ್ದೇಶಗಳನ್ನು ಸಾಧಿಸಿ, ಉನ್ನತ ಮಟ್ಟಕ್ಕೆ ಬೆಳೆಯಲಿ. ಭವಿಷ್ಯದಲ್ಲಿ ಪ್ರಮುಖ ಶಿಕ್ಷಣ ಕೇಂದ್ರವಾಗಿ ಹೊರಹೊಮ್ಮಲಿ ಎಂದು ಆಶಿಸಿದರು.
ಪ.ಪೂ. ಮಹಾವಿದ್ಯಾಲಯದ ಪ್ರಾಂಶುಪಾಲ ವಿಶ್ವನಾಥ ಜಿ.ಎಸ್. ಅವರು ತಮ್ಮ ಸೇವಾನುಭವದ ಕುರಿತು ಸಂಕ್ಷಿಪ್ತವಾಗಿ ವಿವರಿಸಿ, ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನಗೈಯುವ ಭರವಸೆ ನೀಡಿದರು. ಹಳೆಯ ವಿದ್ಯಾರ್ಥಿನಿ ವೈದ್ಯೆ ಡಾ. ಅನುರಾಧ ಅವರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಕೆಲವು ಸಲಹೆಗಳನ್ನು ನೀಡಿದರು.
ಕೊಪ್ಪಳ: 'ಗವಿಮಠ ಶ್ರೀಗಳ ಕಾರ್ಯ ರಾಜ್ಯಕ್ಕೆ ಮಾದರಿ'
ಅಧ್ಯಕ್ಷತೆ ವಹಿಸಿದ್ದ ದಾನಪ್ಪ ಕವಲೂರು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಪ್ರಾರಂಭಿಸಿರುವ ಜ್ಞಾನಬಂಧು ಪ.ಪೂ. ಮಹಾವಿದ್ಯಾಲಯದ ಕುರಿತು ತಮ್ಮ ಆಶೋತ್ತರಗಳನ್ನು ವಿವರಿಸಿ, ಪ್ರಸ್ತುತ ದಿನಮಾನಗಳಿಗೆ ತಕ್ಕಂತೆ ಮಕ್ಕಳಿಗೆ ಬೇಕಾದ ಪೂರಕ ಶಿಕ್ಷಣ ಹಾಗೂ ಆಧುನಿಕ ವ್ಯವಸ್ಥೆಗಳನ್ನೊಳಗೊಂಡ ಸುಸಜ್ಜಿತ ಕಾಲೇಜಿನ ಕಟ್ಟಡ ಹಾಗೂ ಅನುಭವಿ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಲ್ಲದೆ, ಕಾಲೇಜಿಗೆ ದಾಖಲಾಗುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಹಾಗೂ ಪಾಲಕರ-ಪೋಷಕರ ನಿರೀಕ್ಷೆಗಳನ್ನು ತಪ್ಪದೆ ಈಡೇರಿಸುವ ಕುರಿತು ಭರವಸೆ ನೀಡಿದರು.
ಕಾಲೇಜು ಸುಂದರ ಹಾಗೂ ಹಚ್ಚಹಸಿರಾದ ವಾತಾವರಣ ಹೊಂದಿದ್ದು, ವಿಶಾಲವಾದ ಕಟ್ಟಡದೊಂದಿಗೆ ಸುಸಜ್ಜಿತ ಪ್ರಯೋಗಾಲಯಗಳನ್ನು ಒಳಗೊಂಡಿದೆ. ಪ್ರಸಕ್ತ ಸಾಲಿನಲ್ಲಿ ಕಾಲೇಜು ವಿಜ್ಞಾನ ಹಾಗೂ ವಾಣಿಜ್ಯ ಸಂಯೋಜನೆಗಳನ್ನು ಆರಂಭಿಸಿದೆ. ಜತೆಗೆ ಅನುಭವಿ ಬೋಧಕರಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನೂ ಸಹ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಸತಿ ನಿಲಯದ ಸೌಲಭ್ಯವಿದೆ ಮತ್ತು ಸಾರಿಗೆ ವ್ಯವಸ್ಥೆ ಕೂಡಾ ಲಭ್ಯವಿದೆ. ಕಾಲೇಜಿನಲ್ಲಿ ಪಠ್ಯದ ಜತೆ ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡಲಾಗುವುದು ಎಂದರು.
ಪ್ರಸ್ತುತ ದಿನಮಾನಗಳಲ್ಲಿ ಮಕ್ಕಳಿಗೆ ಬೇಕಾದ ಪೂರಕ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಪ್ರೋತ್ಸಾಹ ಕಲ್ಪಿಸಲಾಗುವುದು ಎಂದು ಅಧ್ಯಕ್ಷ ದಾನಪ್ಪ ಜಿ. ಕವಲೂರು ತಿಳಿಸಿದ್ದಾರೆ.
ವಿಜ್ಞಾನ ಕಲಿಯಲು ವಿಜ್ಞಾನವನ್ನು ಅಳವಡಿಸಿಕೊಳ್ಳುವುದು ಮುಖ್ಯ. ನಮ್ಮ ಕಾಲೇಜಿನಲ್ಲಿ ದಿನನಿತ್ಯದ ಚಟುವಟಿಕೆಯಿಂದ ವಿಜ್ಞಾನವನ್ನು ಸರಳವಾದ ರೀತಿಯಲ್ಲಿ ವಿಶಿಷ್ಟವಾಗಿ ಬೋಧಿಸಲಾಗುವುದು ಎಂದು ಪ್ರಾಂಶುಪಾಲ ವಿಶ್ವನಾಥ ಜಿ.ಎಸ್. ಹೇಳಿದ್ದಾರೆ.