ಚಾಮರಾಜನಗರದಲ್ಲಿ ಗ್ಯಾಸ್ ಡೆಲಿವರಿ ನೀಡಲು ಬಂದ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಅತ್ಯಾ*ಚಾರಕ್ಕೆ ಯತ್ನಿಸಿದ್ದಾನೆ. ಮಹಿಳೆಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಆರೋಪಿಯನ್ನು ಬಂಧಿಸಲಾಗಿದೆ. ಈ ಘಟನೆ ಮಹಿಳೆಯರ ಸುರಕ್ಷತೆ ಬಗ್ಗೆ ಗಂಭೀರ ಚಿಂತನೆಗೆ ಎಡೆಮಾಡಿಕೊಟ್ಟಿದೆ.
ಚಾಮರಾಜನಗರ (ಮೇ 30): ಜಿಲ್ಲೆಯ ಚಾಮರಾಜನಗರ ತಾಲೂಕಿನ ಸಂತೇಮಾರಹಳ್ಳಿ ಗ್ರಾಮದಲ್ಲಿ ಗ್ಯಾಸ್ ಡೆಲಿವರಿ ನೀಡಲು ಬಂದ ವ್ಯಕ್ತಿಯೊಬ್ಬ ಮಹಿಳೆಯ ಮೇಲೆಯೇ ಬಲಾತ್ಕಾರಕ್ಕೆ ಯತ್ನಿಸಿದ ಘಟನೆ ನಡೆದಿದೆ. ಮೇ 21 ರಂದು ನಡೆದ ಈ ದುರ್ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಂತ್ರಸ್ಥೆ ಮೈಸೂರಿಗೆ ತೆರಳಲು ಸಿದ್ಧವಾಗುತ್ತಿದ್ದ ಸಂದರ್ಭ ಮಧ್ಯಾಹ್ನ 12.30ರ ವೇಳೆ ಮನೆಯ ಬಳಿ ಗ್ಯಾಸ್ಸಿನ ವಾಹನ ನಿಂತಿದೆ. ಮಹೇಶ್ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಮಾಡುವ ಮಹೇಶ್ ಎಂಬಾತ, ಮನೆ ಬಾಗಿಲು ತಟ್ಟಿದ್ದು, 'ಗ್ಯಾಸ್ ಬುಕ್ ಮಾಡದೆ ಇದ್ದರೂ ಖಾಲಿ ಸಿಲಿಂಡರ್ ಇದ್ದರೆ ತೆಗೆದುಕೊಳ್ಳಿ' ಎಂದು ಮಹಿಳೆಗೆ ತಿಳಿಸಿದ್ದಾನೆ. ಮಹಿಳೆ ಇದೇ ನಂಬಿಕೆಯೊಂದಿಗೆ ₹950 ನೀಡಿ ಸಿಲಿಂಡರ್ ಸ್ವೀಕರಿಸಿದ್ದಾಳೆ. ಬಳಿಕ, ಅಡಿಗೆ ಮನೆಯ ಫೋಟೋ ತೆಗೆದು ಅದನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕೆಂದು ಹೇಳಿ, ಮನೆಯೊಳಗೆ ಪ್ರವೇಶಿಸಿದ್ದಾನೆ. ಅಡುಗೆಮನೆಯಲ್ಲಿ ಗಾಳಿ ಬೆಳಕು ಸರಿಯಾಗಿದೆಯೇ ಎಂಬ ಕಾರಣ ನೀಡಿ ಮನೆಯೊಳಗೆ ಭೇಟಿ ನೀಡಿ ಫೋಟೋ ತೆಗೆದ ನಂತರ, ಶೀಘ್ರದಲ್ಲೇ ಮಹಿಳೆಯ ಮೇಲೆ ಬಲಾತ್ಕಾರ ಯತ್ನ ನಡೆಸಿದ್ದಾನೆ.
ಇದಕ್ಕೆ ಮಹಿಳೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಹಿಳೆಗೆ ನೀವು ಸಹಕರಿಸದೇ ಇದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಬಳಿಕ ಸಂತ್ರಸ್ಥೆಯ ಎದೆ ಹಾಗೂ ಮುಖದ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮಹಿಳೆಯರ ಸುರಕ್ಷತೆ ಬಗ್ಗೆ ಗಂಭೀರ ಚಿಂತನೆ ಅಗತ್ಯ:
ಇಂತಹ ಘಟನೆಗಳು ಗೃಹಬಳಕೆಯ ಸೇವೆಗಳ ಹೆಸರಿನಲ್ಲಿ ಮಹಿಳೆಯರ ಮೇಲೆ ಅಪಾಯಕಾರಿಯಾದ ಪರಿಸ್ಥಿತಿಗಳನ್ನು ಸೃಷ್ಟಿಸುತ್ತಿವೆ. ಗ್ಯಾಸ್ಸ್, ಇಲೆಕ್ಟ್ರಾನಿಕ್ಸ್ ಅಥವಾ ಇತರ ಸೇವೆಗಳ ಹೆಸರಿನಲ್ಲಿ ಮನೆಗೆ ಬರುವ ವ್ಯಕ್ತಿಗಳ ಬಗ್ಗೆ ಸೂಕ್ತ ಪರಿಶೀಲನೆ ಹಾಗೂ ದಾಖಲೆ ವ್ಯವಸ್ಥೆ ಇಡಬೇಕು ಎಂಬುದು ಸಾರ್ವಜನಿಕರ ಮನವಿಯಾಗಿದೆ.


