ಬೆಂಗಳೂರು [ಮಾ.05]:  ಗಾಂಜಾ ಮಾರಾಟದ ದಂಧೆಯಲ್ಲಿ ತೊಡಗಿದ್ದ ಮಹಿಳೆ ಸೇರಿದಂತೆ ಆರು ಮಂದಿಯನ್ನು ಬಂಧಿಸಿ 23 ಲಕ್ಷ ರು. ಮೌಲ್ಯದ ಮಾದಕ ವಸ್ತುವನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.

ಆಂಧ್ರಪ್ರದೇಶದ ಸವರ ಕವಿತಾ, ಧನುರಾಜ್‌, ಮತ್ಯಾರಾಜ್‌, ಉಪ್ಪಲಪಟ್ಟಿಎನ್‌.ಸುಬ್ಬಾರೆಡ್ಡಿ, ಅಶೋಕನಗರದ ಗೌರವ್‌ ಹಾಗೂ ಹುಳಿಮಾವು ಮಹಮದ್‌ ಅಮ್ಜದ್‌ ಶಂಷಾದ್‌ ಬಂಧಿತರಾಗಿದ್ದು, ಆರೋಪಿಗಳಿಂದ 43 ಕೆ.ಜಿ.ಗಾಂಜಾ, ಆರು ಮೊಬೈಲ್‌ ಹಾಗೂ 20 ಸಾವಿರ ರು. ನಗದು ಸೇರಿದಂತೆ 23 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ತಂಗಿ ಜತೆಗೂ ಅಫೇರ್... ಹೆಂಡತಿ ತವರಿಗೆ ಹೋದಾಗ! ಒಂದು ವೈರಲ್ ಪೋಟೋ ಕತೆ...

ಆಂಧ್ರಪ್ರದೇಶದಿಂದ ಗಾಂಜಾ ತಂದು ಆರೋಪಿಗಳು ಪ್ರತ್ಯೇಕವಾಗಿ ತಂಡ ರಚಿಸಿಕೊಂಡು ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಂಧ್ರದ ವೈಜಾಕ್‌ನಿಂದ ಬಸ್ಸಿನಲ್ಲಿ ಗಾಂಜಾವನ್ನು ಆರೋಪಿಗಳು ತರುತ್ತಿದ್ದರು. ಬಳಿಕ ಸಣ್ಣ ಸಣ್ಣ ಪೊಟ್ಟಣಗಳಿಗೆ ಗಾಂಜಾವನ್ನು ತುಂಬಿ ವಿದ್ಯಾರ್ಥಿಗಳು, ಐಟಿ-ಬಿಟಿ ಉದ್ಯೋಗಿಗಳು ಸೇರಿದಂತೆ ಇತರರಿಗೆ ದುಬಾರಿ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.