ಭಯದ ನೆರಳಲ್ಲೇ ಕಾಲಕಳೆಯುತ್ತಿರುವ ಹಾಸ್ಟೆಲ್ ವಿದ್ಯಾರ್ಥಿಗಳು!

ಗಂಗಾವತಿಯ ಎಸ್ಸಿ, ಎಸ್ಟಿ ಹಾಸ್ಟೆಲ್‌ಗಳಿಗೆ ಸೌಲಭ್ಯ ಮರೀಚಿಕೆ| ವಿದ್ಯುತ್‌ ಕಂಬಗಳ ಅಂಚಿನಲ್ಲಿರುವ ಹಾಸ್ಟೆಲ್‌| ಕಳೆದ ಎರಡು ತಿಂಗಳ ಹಿಂದೆ ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರ ವಸತಿ ನಿಲಯ ಉದ್ಘಾಟನೆ| ಸರಿಯಾದ ರೀತಿಯಲ್ಲಿ ಕಾಂಪೌಂಡ್‌ ನಿರ್ಮಿಸಿಲ್ಲ| ಮಳೆ ಬಂದರೆ ಹಾಸ್ಟೆಲ್‌ ಮುಂಭಾಗದ ಪ್ರದೇಶ ಕೆರೆಯಂತಾಗುತ್ತದೆ| ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಬೇಕಾದರೆ ಹರಸಾಹಸ ಪಡಬೇಕಿದೆ| 

Gangavti's SC,ST Hostel Faces Problems

ರಾಮಮೂರ್ತಿ ನವಲಿ

ಗಂಗಾವತಿ(ಸೆ.30): ನಗರದಲ್ಲಿರುವ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗಳ ವಿದ್ಯಾರ್ಥಿಗಳ ವಸತಿ ನಿಲಯ ಹೆಸರಿಗೇ ಮಾತ್ರ ಇದ್ದಂತಿವೆ. ಇಲ್ಲಿನ ಕೆಲವು ವಸತಿ ನಿಲಯಗಳಿಗೆ ಕಟ್ಟಡ ಇದ್ದರೆ ಇನ್ನೂ ಕೆಲವು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುವ ಈ ನಿಲಯಗಳಿಗೆ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ.

ನಗರದ ಜಯನಗರ ಬಡಾವಣೆಯಲ್ಲಿ ಕಳೆದ ಎರಡು ತಿಂಗಳ ಹಿಂದೆ ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರ ವಸತಿ ನಿಲಯ ಉದ್ಘಾಟನೆಗೊಂಡಿದೆ. ಆದರೆ, ಇದಕ್ಕೆ ಸರಿಯಾದ ರೀತಿಯಲ್ಲಿ ಕಾಂಪೌಂಡ್‌ ನಿರ್ಮಿಸಿಲ್ಲ. ಮಳೆ ಬಂದರೆ ಹಾಸ್ಟೆಲ್‌ ಮುಂಭಾಗದ ಪ್ರದೇಶ ಕೆರೆಯಂತಾಗುತ್ತದೆ. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಬೇಕಾದರೆ ಹರಸಾಹಸ ಪಡಬೇಕಿದೆ. ಸರಿಯಾದ ರೀತಿಯಲ್ಲಿ ಚರಂಡಿ ನಿರ್ಮಾಣವಾಗದ ಕಾರಣ ಹಾಸ್ಟೆಲ್‌ನ ಸ್ನಾನಗೃಹ ಮತ್ತು ಶೌಚಾಲಯದ ನೀರು ಹೊರಗೆ ಹರಿಯಲಾರಂಭಿಸಿದೆ. ಈ ವಸತಿ ನಿಲಯದಲ್ಲಿ 120ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದಾರೆ.

ವಸತಿ ನಿಲಯದಲ್ಲಿ ಸ್ಥಳದ ಅಭಾವ 

ಸತ್ಯನಾರಾಯಣ ಪೇಟೆಯಲ್ಲಿರುವ ಪರಿಶಿಷ್ಟ ವರ್ಗಗಳ ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಈ ವಸತಿ ನಿಲಯದಲ್ಲಿ ಸ್ಥಳದ ಅಭಾವ ಇದೆ. ಎಷ್ಟೋ ವಿದ್ಯಾರ್ಥಿಗಳು ಜಾಗದ ತೊಂದರೆಯನ್ನು ಅರಿತುಕೊಂಡು ವಾಪಸ್ಸಾಗಿದ್ದಾರೆ. ನಗರದ ಸಾಯಿನಗರದಲ್ಲಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿ ನಿಲಯದಲ್ಲಿ ಗುಣಮಟ್ಟದ ಆಹಾರ ನೀಡುತ್ತಿಲ್ಲ ಎಂಬ ದೂರು ಇದ್ದು, ವಿದ್ಯಾರ್ಥಿನಿಯರು ನೀರಿನ ತೊಂದರೆ ಅನುಭವಿಸುತ್ತಿದ್ದಾರೆ.

ಭಯದಲ್ಲೇ ಕಾಲಕಳೆಯುತ್ತಿರುವ ವಿದ್ಯಾರ್ಥಿಗಳು: 

ಸಾಯಿನಗರದಲ್ಲಿರುವ ಪರಿಶಿಷ್ಟ ವರ್ಗದ ವಿದ್ಯಾರ್ಥಿ ವಸತಿ ನಿಲಯ ಮೇಲಂತಸ್ತಿನಲ್ಲಿದ್ದು, 40 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯುತ್‌ ಕಂಬಗಳು ವಸತಿ ನಿಲಯದ ಪಕ್ಕದಲ್ಲೇ ಇರುವುದರಿಂದ ಭಯದಲ್ಲೇ ಕಾಲಕಳೆಯುವಂತಾಗಿದೆ. ಕಳೆದ ಎರಡು ತಿಂಗಳ ಹಿಂದೆ ಕೊಪ್ಪಳದ ವಸತಿ ನಿಲಯದಲ್ಲಿ ವಿದ್ಯುತ್‌ ಅವಘಡ ಸಂಭವಿಸಿ ಐವರು ವಿದ್ಯಾರ್ಥಿಗಳು ಮೃತಪಟ್ಟಿದ್ದರಿಂದ ಈ ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳು ದಿನ ನಿತ್ಯ ಚಿಂತೆ ಮಾಡುವಂತಾಗಿದೆ.

ಗ್ರಾಮೀಣ ಪ್ರದೇಶದಲ್ಲಿರುವ ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡಗಳಿದ್ದು, ನಗರ ಪ್ರದೇಶಗಳಲ್ಲಿರುವ ನಿಲಯಗಳಿಗೆ ಕಟ್ಟಡದ ಕೊರತೆ ಇದೆ. ಬಾಡಿಗೆ ಪಡೆದ ಕಟ್ಟಡಗಳಲ್ಲಿ ಸರಿಯಾದ ರೀತಿಯಲ್ಲಿ ಸ್ನಾನ ಗೃಹ ಮತ್ತು ಶೌಚಾಲಯಗಳ ತೊಂದರೆ ಇದೆ. ಇದರಿಂದ ವಿದ್ಯಾರ್ಥಿಗಳು ದಿನ ನಿತ್ಯ ಪರದಾಡುವ ಪ್ರಸಂಗ ಒದಗಿದೆ. ಇನ್ನಾದರೂ ಇಲಾಖೆ ಮುತುವರ್ಜಿ ವಹಿಸಿ ಸೌಲಭ್ಯ ಕಲ್ಪಿಸಿದರೆ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿದಂತಾಗುತ್ತದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಈ ಬಗ್ಗೆ ಮಾಹಿತಿ ನೀಡಿದ ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಬಿ. ಕಲ್ಲೇಶ ಅವರು, ಗಂಗಾವತಿ ಸೇರಿದಂತೆ ಕೊಪ್ಪಳ ಜಿಲ್ಲೆಯ ಬಹಳಷ್ಟು ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡಗಳಿಲ್ಲ. ಅಲ್ಲದೆ ಬಾಡಿಗೆ ಕಟ್ಟಡಗಳ ಬಳಿ ವಿದ್ಯುತ್‌ ಕಂಬಗಳು ಮತ್ತು ಪರಿವರ್ತಕಗಳಿದ್ದು, ಅವುಗಳನ್ನು ತೆರವುಗೊಳಿಸುವಂತೆ ಜೆಸ್ಕಾಂಗೆ ಪತ್ರ ಬರೆಯಲಾಗಿದೆ. ಪ್ರತಿಯೊದು ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಆದರೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅವಕಾಶ ನೀಡಲಾಗಿದೆ.

ಈ ಬಗ್ಗೆ ಮಾತನಾಡಿದ ಎಸ್‌ಎಫ್‌ಐ ಅಧ್ಯಕ್ಷ ಗ್ಯಾನೇಶ ಕಡಗದ ಅವರು, ಗಂಗಾವತಿ ಕೆಲವೊಂದು ಹಾಸ್ಟೆಲ್‌ಗಳ ಬಳಿ ವಿದ್ಯುತ್‌ ಕಂಬಳು ಮತ್ತು ಪರಿವರ್ತಕಗಳಿವೆ. ಇದರಿಂದ ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ. ಅಲ್ಲದೇ, ಮೂಲಭೂತ ಸೌಕರ್ಯಗಳು ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಈ ಸಮಸ್ಯೆಗಳನ್ನು ಪರಿಹರಿಸುವಂತೆ ಇಲಾಖೆಗೆ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ವಿದ್ಯುತ್‌ ಕಂಬಗಳು ಮತ್ತು ತಂತಿಗಳನ್ನು ತೆರುವುಗೊಳಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios