ನಗರದ ಮಧ್ಯಭಾಗದಲ್ಲಿರುವ ಓಬೇರಾಯನ ಕಾಲದ ಹಳೆ ಪ್ರವಾಸಿ ಮಂದಿರ ಅಧೋಗತಿಯತ್ತ ಸಾಗಿದೆ. ಸುಮಾರು 60 ವರ್ಷಗಳ ಹಳೆಯ ಪ್ರವಾಸಿ ಮಂದಿರಕ್ಕೆ ಮುಕ್ತಿ ಇಲ್ಲದಂತಾಗಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ..

ರಾಮಮೂರ್ತಿ ನವಲಿ

Add Asianetnews Kannada as a Preferred SourcegooglePreferred

ಗಂಗಾವತಿ (ಮೇ.25): ನಗರದ ಮಧ್ಯಭಾಗದಲ್ಲಿರುವ ಓಬೇರಾಯನ ಕಾಲದ ಹಳೆ ಪ್ರವಾಸಿ ಮಂದಿರ ಅಧೋಗತಿಯತ್ತ ಸಾಗಿದೆ. ಸುಮಾರು 60 ವರ್ಷಗಳ ಹಳೆಯ ಪ್ರವಾಸಿ ಮಂದಿರಕ್ಕೆ ಮುಕ್ತಿ ಇಲ್ಲದಂತಾಗಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವ ಪ್ರವಾಸಿ ಮಂದಿರ ಸುಮಾರು ಒಂದೂವರೆ ಎಕರೆ ಪ್ರದೇಶ ಹೊಂದಿದೆ. ಈ ಪ್ರದೇಶದಲ್ಲಿ ಎರಡು ಕಟ್ಟಡ ಹೊಂದಿದ್ದು, ಈಗ ಇದರ ಸುತ್ತಲಿನ ಪ್ರದೇಶ ಗುಜರಿ ವಾಹನಗಳ ನಿಲುಗಡೆ ಹಾಗೂ ಮದ್ಯಪಾನ ಮಾಡುವವರ ತಾಣವಾಗಿ ಮಾರ್ಪಟ್ಟಿದೆ.

ಈ ಹಿಂದೆ ಕೊಪ್ಪಳ ಜಿಲ್ಲೆಯಲ್ಲಿಯೇ ಅತ್ಯುತ್ತಮ ಪ್ರವಾಸಿ ಮಂದಿರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಸ್ಥಳಕ್ಕೆ ರಾಜ್ಯಪಾಲರು, ಮುಖ್ಯಮಂತ್ರಿ, ಸಚಿವರು, ಹಿರಿಯ ಅಧಿಕಾರಿಗಳು ವಾಸ್ತವ್ಯ ಮಾಡಿದ್ದ ಉದಾಹರಣೆಗಳಿವೆ. ಆದರೆ ಈಗ ಈ ಪ್ರವಾಸಿ ಮಂದಿರಕ್ಕೆ ಯಾರೂ ಬರದಂತಾಗಿದೆ.

ಗುಜರಿ ವಾಹನಗಳ ತಾಣ: ಗಂಗಾವತಿ ನಗರದಲ್ಲಿರುವ ಯಾವುದೇ ಇಲಾಖೆಯ ವಾಹನ ಕೆಟ್ಟು ನಿಂತರೆ ಈ ಹಳೆ ಪ್ರವಾಸಿ ಮಂದಿರದಲ್ಲಿ ನಿಲ್ಲಿಸಿ ಹೋಗುತ್ತಾರೆ. ಲೋಕೋಪಯೋಗಿ ಇಲಾಖೆ ಮತ್ತು ನಗರಸಭೆ ಕೆಲವು ವಾಹನ ಹಲವಾರು ವರ್ಷಗಳಿಂದ ನಿಂತಿದ್ದು ಈಗ ಗುಜರಿ ವಾಹನಗಳ ತಾಣವಾಗಿದೆ. ಕೆಲವರು ಕೆಟ್ಟ ವಾಹನಗಳ ಯಂತ್ರ ಸೇರಿದಂತೆ ಉಪಕರಣ ಕಳ್ಳತನವಾಗಿರುವ ಆರೋಪ ಕೇಳಿಬರುತ್ತಿವೆ.

ತ್ಯಾಜ್ಯ ವಸ್ತುಗಳ ಸಂಗ್ರಹ

ನಗರಸಭೆಯ ಕೆಟ್ಟ ವಾಹನದಲ್ಲಿ ದಿನ ನಿತ್ಯ ತ್ಯಾಜ್ಯ ತುಂಬಿ ಸಾಗಾಟ ಮಾಡುತ್ತಿದ್ದಾರೆ. ಪ್ರವಾಸಿ ಮಂದಿರದ ಹೊರ ಭಾಗದಲ್ಲಿ ಹೋಟೆಲ್, ಉದ್ಯಾನ, ಸ್ನಾತಕೋತ್ತರ ಕೇಂದ್ರ ಇದ್ದು, ದಿನ ನಿತ್ಯ ತ್ಯಾಜ್ಯಗಳ ದುರ್ವಾಸನೆ ಅನುಭವಿಸುವ ಪರಿಸ್ಥಿತಿ ಜನರಿಗೆ ಒದಗಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಉತ್ತಮ ಪ್ರವಾಸಿ ಮಂದಿರ ನಿರ್ಮಾಣ ಮಾಡಿದರೆ ಬರುವ ಗಣ್ಯರು ಹಾಗೂ ಅತಿಥಿಗಳಿಗೆ ಸೌಲಭ್ಯ ಕಲ್ಪಿಸಿದಂತಾಗುತ್ತದೆ.

ಲೋಕೋಪಯೋಗಿ ಇಲಾಖೆ ಮತ್ತು ಖಾಸಗಿ ಸಹಭಾಗಿತ್ವದಲ್ಲಿ 3 ಸ್ಟಾರ್ ಹೊಟೇಲ್ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತುತ ಪ್ರವಾಸಿ ಮಂದಿರ ಹಾಳು ಬಿದ್ದಿದ್ದು, ಹಲವಾರು ಭಾರಿ ವಿವಿಧ ಇಲಾಖೆಗಳಿಗೆ ಗುಜರಿ ವಾಹನ ತೆರವುಗೊಳಿಸುವಂತೆ ಸೂಚಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಎಇಇ ವಿಶ್ವನಾಥ ತಿಳಿಸಿದ್ದಾರೆ.

ಗಂಗಾವತಿಯ ಹಳೆಯ ಪ್ರವಾಸಿ ಮಂದಿರ ಆವರಣದಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಯುತ್ತಿವೆ. ಗುಜರಿ ವಾಹನ ಸೇರಿದಂತೆ ನಗರಸಭೆಯ ತ್ಯಾಜ್ಯ ಸಂಗ್ರಹ ಮಾಡುತ್ತಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಹೇರೂರು ಜಿಪಂ ಮಾಜಿ ಉಪಾಧ್ಯಕ್ಷ ವಿರೂಪಾಕ್ಷಗೌಡ ಹೇರೂರು ತಿಳಿಸಿದ್ದಾರೆ.