ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮದಡಿ ಜಿಲ್ಲೆಯಲ್ಲಿ ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟಪಂಗಡಗಳಿಗೆ ರೂಪಿಸಿರುವ ಮಹತ್ವಾಕಾಂಕ್ಷಿ ಗಂಗಾ ಕಲ್ಯಾಣ ಯೋಜನೆಯನ್ನು ಹೇಳೋರು ಕೇಳೋರಿಲ್ಲದೇ ಹಳ್ಳ ಹಿಡಿದಿದೆ.

 ಕಾಗತಿ ನಾಗರಾಜಪ್ಪ.

 ಚಿಕ್ಕಬಳ್ಳಾಪುರ (ಅ.14): ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮದಡಿ ಜಿಲ್ಲೆಯಲ್ಲಿ ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟಪಂಗಡಗಳಿಗೆ ರೂಪಿಸಿರುವ ಮಹತ್ವಾಕಾಂಕ್ಷಿ ಗಂಗಾ ಕಲ್ಯಾಣ ಯೋಜನೆಯನ್ನು ಹೇಳೋರು ಕೇಳೋರಿಲ್ಲದೇ ಹಳ್ಳ ಹಿಡಿದಿದೆ.

ಹೌದು, ಜಿಲ್ಲೆಗೆ (Chikkaballapura) ಕಳೆದ 5 ವರ್ಷಗಳಲ್ಲಿ 573 ಕೊಳವೆ ಬಾವಿಗಳು ಮಂಜೂರಾಗಿದ್ದರೂ ಇಲ್ಲಿವರೆಗೂ ಬರೀ 350 ಕೊಳವೆ ಬಾವಿಗಳು (Borewell) ಮಾತ್ರ ಕೊರೆದಿದ್ದು, ಇನ್ನೂ 223 ಕೊಳವೆಬಾವಿ ಕೊರೆಯುವುದು ಬಾಕಿ ಇದ್ದರೆ ಕಳೆದ 2019 ರಿಂದ 21ರ ವರೆಗೂ ಅಂದರೆ ಎರಡು ವರ್ಷದಲ್ಲಿ ಒಂದು ಕೊಳವೆಬಾವಿ ಕೂಡ ಕೊರೆಯದಿರುವುದು ಬೆಳಕಿಗೆ ಬಂದಿದೆ.

ಎಸ್‌ಸಿ/ಎಸ್ಟಿ ಜನಾಂಗಗಳಿಗೆ ಸರ್ಕಾರ ಗಂಗಾ ಕಲ್ಯಾಣ ಯೋಜನೆ ಮೂಲಕ ಸ್ವಂತ ಜಮೀನಿರುವ ಸಣ್ಣ, ಅತಿ ಸಣ್ಣ ರೈತರಿಗೆ ಕೊಳವೆಬಾವಿ ಕೊರೆಸಿಕೊಳ್ಳಲು ಅವಕಾಶ ನೀಡಿದೆ. ಪ್ರತಿ ಕೊಳವೆಬಾವಿಗೆ ಸರ್ಕಾರ ಲಕ್ಷಾಂತರ ರು. ವೆಚ್ಚ ಮಾಡುತ್ತದೆ. ಆದರೆ ಜಿಲ್ಲೆಯಲ್ಲಿ ಮಾತ್ರ ಈ ಯೋಜನೆ ಅನುಷ್ಟಾನ ಹಳ್ಳ ಹಿಡಿದಿದ್ದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಜಿಲ್ಲೆಯ ಶಾಸಕರು, ಸಂಸದರು, ಚುನಾಯಿತ ಜನಪ್ರತಿನಿಧಿಗಳು ಈ ಬಗ್ಗೆ ಹೇಳಿದರೂ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧಿಕಾರಿಗಳು ಮಾತ್ರ ಯಾರಿಗೂ ಕ್ಯಾರೆ ಎನ್ನದೇ ಯೋಜನೆ ಅನುಷ್ಠಾನದಲ್ಲಿ ವಿಳಂಬ ತೋರುತ್ತಿರುವುದಂತೂ ಎದ್ದು ಕಾಣುತ್ತಿದೆ. ಕಳೆದ 5 ವರ್ಷಗಳಲ್ಲಿ ಕೊರೆಯ ಬೇಕಿದ್ದ 573 ಕೊಳವೆಬಾವಿಗಳಲ್ಲಿ ಬರೀ 350 ಕೊಳವೆಬಾವಿಗಳಷ್ಟೇ ಕೊರೆಸಿದ್ದು ಇನ್ನೂ 223 ಕೊಳವೆಬಾವಿ ಕೊರೆಸಲು ಸಾಧ್ಯವಾಗಿಲ್ಲ. 2016-17 ರಲ್ಲಿ ಒಟ್ಟು ಕೊರೆಸ ಬೇಕಾದ 172 ಬಾವಿಗಳÜಲ್ಲಿ 139 ಕೊಳವೆಬಾವಿ ಕೊರೆದಿದ್ದು ಇನ್ನೂ 33 ಬಾಕಿ ಇದೆ. 2018ರಲ್ಲಿ ಮಂಜೂರಾಗಿದ್ದು 198 ಅದರಲ್ಲಿ ಬರೀ 122 ಮಾತ್ರ ಕೊರೆದಿದ್ದು ಇನ್ನೂ 76 ಕೊಳವೆಬಾವಿಗಳು ಬಾಕಿ ಇವೆ. ಕಳೆದ ಎರಡು ವರ್ಷಗಳಿಂದ ಅಂದರೆ 2020-21ರಲ್ಲಿ ಜಿಲ್ಲೆಗೆ ಮಂಜೂರಾದ 94 ಕೊಳವೆ ಬಾವಿಗಳ ಪೈಕಿ ಇಲ್ಲಿವರೆಗೂ ಒಂದು ಕೊಳವೆಬಾವಿ ಕೂಡ ಕೊರೆದಿಲ್ಲ.

ಪಂಪ್‌ ಮೋಟಾರ್‌ ಕೊಟ್ಟಿಲ್ಲ:

ವಿಪರ್ಯಾಸದ ಸಂಗತಿಯೆಂದರೆ 2016-17ರಲ್ಲಿ ಜಿಲ್ಲೆಯಲ್ಲಿ ಕೊರೆದಿರುವ ಕೊಳವೆಬಾವಿಗಳಿಗೆ ಈವರೆಗೂ ಪಂಪ್‌ ಮೋಟಾರ್‌ ಕೊಡದೆ ನಿಗಮದ ಅಧಿಕಾರಿಗಳು ಫಲಾನುಭವಿಗಳಿಗೆ ಇಲ್ಲಸಲ್ಲದ ಸಬೂಬು ಹೇಳುತ್ತಿದ್ದು, ಕೆಲವೊಂದು ಕೊಳವೆಬಾವಿಗಳಿಗೆ ವಿದ್ಯುತ್‌ ಸಂಪರ್ಕವೂ ಸಿಕ್ಕಿಲ್ಲ.

ಸಚಿವ ಸುಧಾಕರ್‌ ಆಕ್ರೋಶ:

ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿಯೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧಿಕಾರಿಗಳ ವಿರುದ್ಧ ಆಕ್ರೋಶ

ವ್ಯಕ್ತಪಡಿಸಿದ್ದರು. ಫಲಾನುಭವಿಗಳಿಗೆ ವಿಳಂಬ ಮಾಡದೇ ಕೊಳವೆಬಾವಿ ಕೊರೆಸಿ ವಿದ್ಯುತ್‌ ಸಂಪರ್ಕ, ಪಂಪ್‌ ಮೋಟಾರ್‌ ನೀಡುವಂತೆಯೂ ಸೂಚಿಸಿದ್ದರು. ಆದರೆ ಇಲ್ಲಿವರೆಗೂ ಸಮರ್ಪಕವಾಗಿ ಗಂಗಾ ಕಲ್ಯಾಣ ಯೋಜನೆ ಅನುಷ್ಠಾನದಲ್ಲಿ ನಿಗಮದ ಅಧಿಕಾರಿಗಳು ವಿಫಲವಾಗಿರುವುದು ಎದ್ದು ಕಾಣುತ್ತಿದ್ದು, ನಿಗಮದ ಅಧಿಕಾರಿಗಳಿಗೆ ಫಲಾನುಭವಿಗಳು ಹಿಡಿಶಾಪ ಹಾಕುತ್ತಿದ್ದಾರೆ.

ಜಿಲ್ಲೆಯಲ್ಲಿ ಗಂಗಾ ಕಲ್ಯಾಣ ಯೋಜನೆ ಪ್ರಗತಿ

ತಾಲೂಕು ಗುರಿ ಸಾಧನೆ ಬಾಕಿ

2016-17 172 139 33

2017-18 198 122 76

2018-19 109 89 20

2019-20 60 00 60

2020-21 34 00 34

ಜಿಲ್ಲೆಯಲ್ಲಿ ಹಳಿ ತಪ್ಪಿದ ಗಂಗಾ ಕಲ್ಯಾಣ ಯೋಜನೆ

ಯೋಜನೆಯಡಿ 5 ವರ್ಷಗಳಲ್ಲಿ ಮಂಜೂರಾದ 573 ಕೊಳವೆಬಾವಿಗಳ ಪೈಕಿ ಕೊರೆದಿದ್ದು ಬರೀ 223

ಬಹುತೇಕ ಕೊಳವೆಬಾವಿಗಳಿಗೆ ಸಿಕ್ಕಿಲ್ಲ ವಿದ್ಯುತ್‌ ಸಂಪರ್ಕ

ನಿಗಮದಲ್ಲಿ ಮಿತಿ ಮೀರಿದ ಭ್ರಷ್ಟಾಚಾರಕ್ಕೆ ಫಲಾನುಭವಿಗಳು ಸುಸ್ತು

ಕೊಳವೆಬಾವಿ ಕೊರೆದರೂ ಪಂಪ್‌ ಮೋಟಾರ್‌ ವಿತರಿಸಿಲ್ಲ

2020-21ರಲ್ಲಿ ಒಂದೂಕೊಳವೆಬಾವಿ ಕೊರೆದಿಲ್ಲ