Asianet Suvarna News Asianet Suvarna News

ಬಾಡಿಗೆಗೆ ಲ್ಯಾಪ್‌ಟಾಪ್‌ ಪಡೆದು ಹೈಟೆಕ್‌ ಧೋಖಾ

ಬಾಡಿಗೆ ಲ್ಯಾಪ್‌ ಟಾಪ್ ಪಡೆದು ಹೈ ಟೆಕ್ ದೋಖಾ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಅರೆಸ್ಟ್ ಮಾಡಲಾಗಿದೆ. 

Gang Arrested for Sell rental laptop snr
Author
Bengaluru, First Published Dec 8, 2020, 8:23 AM IST

ಬೆಂಗಳೂರು (ಡಿ.08):   ಪ್ರತಿಷ್ಠಿತ ಸಾಫ್ಟ್‌ವೇರ್‌ ಕಂಪನಿಗಳ ಸೋಗಿನಲ್ಲಿ ಲ್ಯಾಪ್‌ಟಾಪ್‌ಗಳನ್ನು ಬಾಡಿಗೆಗೆ ಪಡೆದು ಬೇರೊಬ್ಬರಿಗೆ ಮಾರಾಟ ಮಾಡುತ್ತಿದ್ದ ಮೂವರ ಗ್ಯಾಂಗ್‌ ಬೈಯಪ್ಪನಹಳ್ಳಿ ಪೊಲೀಸರ ಬಲೆಗೆ ಬಿದ್ದಿದೆ.

ಕಮ್ಮನಹಳ್ಳಿ ನಿವಾಸಿ ಸೈಫ್‌ ಪಾಷ (25), ವೀರಣ್ಣಪಾಳ್ಯದ ಮೋಹಿನುದ್ದೀನ್‌ ಖುರೇಷಿ (26) ಮತ್ತು ಮಹಾರಾಷ್ಟ್ರ ಮೂಲದ ಪ್ರತೀಕ್‌ ನಗರ್‌ಕರ್‌ (31) ಬಂಧಿತರು. ಆರೋಪಿಗಳಿಂದ .45 ಲಕ್ಷ ಮೌಲ್ಯದ 96 ಲ್ಯಾಪ್‌ಟಾಪ್‌ ಜಪ್ತಿ ಮಾಡಲಾಗಿದೆ. ಅಶ್ವಕ್‌ ಎಂಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇಂಜಿನಿಯರಿಂಗ್‌, ಬಿ.ಕಾಂ ವ್ಯಾಸಂಗ ಮಾಡಿರುವ ಆರೋಪಿಗಳು ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗದಲ್ಲಿದ್ದರು. ಸಾಫ್ಟ್‌ವೇರ್‌ ಕಂಪನಿಗಳ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಕಚೇರಿಗಳನ್ನು ತೆರೆಯುತ್ತಿದ್ದರು. ಲ್ಯಾಪ್‌ಟಾಪ್‌ಗಳನ್ನು ಬಾಡಿಗೆಗೆ ನೀಡುವ ಕಂಪನಿಗಳನ್ನು ಸೈಫ್‌ ಪಾಷ ಸಂಪರ್ಕಿಸುತ್ತಿದ್ದ. ಕಚೇರಿಯ ಉಪಯೋಗಕ್ಕಾಗಿ ಲ್ಯಾಪ್‌ಟಾಪ್‌ ಬೇಕಾಗಿವೆ ಎಂದು ಹೇಳಿ ದುಬಾರಿ ಬೆಲೆಯ ಲ್ಯಾಪ್‌ಟಾಪ್‌ಗಳನ್ನು ಪಡೆಯುತ್ತಿದ್ದರು. ಬಳಿಕ ಏಕಾಏಕಿ ಕಚೇರಿ ಬಂದ್‌ ಮಾಡಿ ಪರಾರಿಯಾಗುತ್ತಿದ್ದರು. ಬೇರೆ ಕಡೆ ಕಚೇರಿ ತೆರೆದು, ಲ್ಯಾಪ್‌ಟಾಪ್‌ ಖರೀದಿಸಲು ಮುಂದಾಗಿರುವ ಗ್ರಾಹಕರ ಮಾಹಿತಿಯನ್ನು ಜಸ್ಟ್‌ ಡಯಲ್‌ ಮೂಲಕ ಸಂಗ್ರಹಿಸುತ್ತಿದ್ದರು. ಇವರ ಬಳಿ ಲ್ಯಾಪ್‌ಟಾಪ್‌ ಖರೀದಿಸಲು ಮುಂದಾದವರಿಗೆ, ಕಂಪನಿ ನಷ್ಟದಲ್ಲಿರುವುದರಿಂದ ಮುಚ್ಚುತ್ತಿದ್ದೇವೆ. ಹೀಗಾಗಿ, ಕಡಿಮೆ ಬೆಲೆಗೆ ಲ್ಯಾಪ್‌ಟಾಪ್‌ ಮಾರಾಟ ಮಾಡುತ್ತಿರುವುದಾಗಿ ಹೇಳಿ ವ್ಯವಹರಿಸುತ್ತಿದ್ದರು. ಇದೇ ರೀತಿ ಏಳು ಕಂಪನಿಗಳಿಗೆ ವಂಚಿಸಿದ್ದಾರೆ.

ಎಣ್ಣೆ ಅಮಲು, ತಡೆದ ಪೊಲೀಸರಿಗೆ ಎಂತೆಂಥಾ ಶಬ್ದ ಬಳಸಿದ ನಿರ್ದೇಶಕಿ

ಕಳೆದ ನ.23ರಂದು ಸಿ.ವಿ.ರಾಮನ್‌ ನಗರದ ಸಾಫ್ಟ್‌ವೇರ್‌ ಕಂಪನಿ ಬಳಿ ವ್ಯಕ್ತಿಯೊಬ್ಬ ಲ್ಯಾಪ್‌ಟಾಪ್‌ ಮಾರಾಟಕ್ಕೆ ಯತ್ನಿಸುತ್ತಿದ್ದ. ಈ ಬಗ್ಗೆ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಆರೋಪಿ ಸೈಫ್‌, 4 ಲ್ಯಾಪ್‌ಟಾಪ್‌ ಸಮೇತ ಸಿಕ್ಕಿ ಬಿದ್ದಿದ್ದ. ಕೂಡಲೇ ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ಮೋಹಿನುದ್ದೀನ್‌ ಬಗ್ಗೆ ಬಾಯ್ಬಿಟ್ಟಿದ್ದ. ವೀರಣ್ಣಪಾಳ್ಯದಲ್ಲಿರುವ ಮೋಹಿನುದ್ದೀನ್‌ ಮನೆ ಮೇಲೆ ದಾಳಿ ನಡೆಸಿದಾಗ 25 ಲ್ಯಾಪ್‌ಟಾಪ್‌ ಪತ್ತೆಯಾಗಿವೆ. ಹೈದರಾಬಾದ್‌ ಪೊಲೀಸರು ಸೈಫ್‌ನನ್ನು ಬಾಡಿ ವಾರೆಂಟ್‌ ಮೇಲೆ ವಶಕ್ಕೆ ಪಡೆದುಕೊಂಡಿದ್ದಾರೆ.

ಸೈಫ್‌ ಪಾಷ ಮತ್ತು ಅಶ್ವಕ್‌ ವಿರುದ್ಧ ಮಡಿವಾಳ, ಆರ್‌.ಟಿ.ನಗರ, ಜೆ.ಪಿ.ನಗರ, ಮಾರತ್ತಹಳ್ಳಿ, ಸಂಪಿಗೆಹಳ್ಳಿ, ಅಶೋಕನಗರ ಮತ್ತು ಹೈದರಾಬಾದ್‌ನಲ್ಲಿ ನಡೆದಿದ್ದ 7 ಪ್ರಕರಣಗಳು ಪತ್ತೆಯಾಗಿವೆ. ಮೋಹಿನುದ್ದೀನ್‌ ವಿರುದ್ಧ ಜೆ.ಪಿ.ನಗರ ಮತ್ತು ಅಶೋಕನಗರ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದರು.

Follow Us:
Download App:
  • android
  • ios