Bharat Jodo Yatra: ಮೊದಲ ಬಾರಿಗೆ ಮಂತ್ರಾಲಯಕ್ಕೆ ಗಾಂಧಿ ಕುಟುಂಬ ಸದಸ್ಯ ಭೇಟಿ
ನೆಹರೂ, ಇಂದಿರಾ, ರಾಜೀವ್ ಗಾಂಧಿ ಅಥವಾ ಸೋನಿಯಾ ಗಾಂಧಿ ಅವರಲ್ಲಿ ಯಾರೊಬ್ಬರೂ ಈವರೆಗೆ ಮಂತ್ರಾಲಯಕ್ಕೆ ಭೇಟಿ ನೀಡಿಲ್ಲ.
ರಾಯಚೂರು(ಅ.19): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಾಗುತ್ತಿರುವ ಐತಿಹಾಸಿಕ ಭಾರತ ಜೋಡೋ ಪಾದಯಾತ್ರೆ ನ.20ರಂದು ಆಂಧ್ರದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ಪ್ರವೇಶಿಸಲಿದೆ. ಈ ವೇಳೆ ರಾಹುಲ್ ಗಾಂಧಿ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೂ ಭೇಟಿ ನೀಡಲಿದ್ದಾರೆ. ಗಾಂಧಿ ಕುಟುಂಬದ ಕುಡಿಯೊಂದು ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾಸ್ಥಳವಾದ ಮಂತ್ರಾಲಯಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ನೆಹರೂ, ಇಂದಿರಾ, ರಾಜೀವ್ ಗಾಂಧಿ ಅಥವಾ ಸೋನಿಯಾ ಗಾಂಧಿ ಅವರಲ್ಲಿ ಯಾರೊಬ್ಬರೂ ಈವರೆಗೆ ಮಂತ್ರಾಲಯಕ್ಕೆ ಭೇಟಿ ನೀಡಿಲ್ಲ.
ಬಳ್ಳಾರಿ ಗಡಿ ದಾಟಿರುವ ಯಾತ್ರೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆಲೂರು, ಆದೋನಿ, ಎಮ್ಮಿಗನೂರು ಮುಖಾಂತರ ಮಂತ್ರಾಲಯಕ್ಕೆ ಅ.20ರ ಸಂಜೆ ಮಂತ್ರಾಲಯಕ್ಕೆ ಆಗಮಿಸಲಿದೆ. ಈ ವೇಳೆ ರಾಹುಲ್ ಗಾಂಧಿ ಅವರು ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ರಾಯರ ಮೂಲಬೃಂದಾವನದ ದರ್ಶನ ಪಡೆದು, ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರೊಂದಿಗೆ ಕೆಲಕಾಲ ಸಮಾಲೋಚನೆ ನಡೆಸಲಿದ್ದಾರೆ.
ಬಳ್ಳಾರಿಯ ಜೀನ್ಸ್ ಘಟಕಕ್ಕೆ ರಾಹುಲ್ ಗಾಂಧಿ ಭೇಟಿ
ನಂತರ ಕ್ಷೇತ್ರದ ರಾಯಚೂರು ಮುಖ್ಯರಸ್ತೆ ಮಾರ್ಗದಲ್ಲಿರುವ ಅಭಯಾಂಜನೇಯ ಮಂದಿರದ (ಶ್ರೀಮಠದ ಗೋಶಾಲೆ) ಮುಂಭಾಗದ ಪ್ರದೇಶದಲ್ಲಿ ರಾಹುಲ್ ಗಾಂಧಿ ರಾತ್ರಿ ತಂಗಲಿದ್ದಾರೆ. ಮರುದಿನ ಅಂದರೆ ಶುಕ್ರವಾರ ಬೆಳಗ್ಗೆ 6:30ಕ್ಕೆ ಎಂದಿನಂತೆ ಪಾದಯಾತ್ರೆ ಆರಂಭಿಸಿ ತುಂಗಭದ್ರಾ ಸೇತುವೆ ಮೂಲಕ ಕರ್ನಾಟಕದ ರಾಯಚೂರು ಜಿಲ್ಲೆಯನ್ನು ಪ್ರವೇಶಿಸಲಿದ್ದಾರೆ.