ಸಿನಿಮೀಯ ಮಾದರಿ ಗಂಗಾವತಿ ನಗರಸಭೆ ಸದಸ್ಯನ ಅಪಹರಣ..!
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ರಣರಂಗ| ಹಳಿಯಾಳದಲ್ಲಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡ ಅಪಹರಣಕಾರರು| ಹೊಟೇಲ್‌ನಲ್ಲಿದ್ದ ಮನೋಹರಸ್ವಾಮಿ ಮುಖಕ್ಕೆ ಮಬ್ಬು ಬರುವ ಪುಡಿ ಸಿಂಪರಣೆ, ಮೂವರ ಬಂಧನ|
ಗಂಗಾವತಿ(ಅ.31): ಇಲ್ಲಿಯ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಈಗ ಹೊಸ ತಿರುವು ಪಡೆದಿದ್ದು, ರಣರಂಗವಾಗಿ ಪರಿವರ್ತನೆಗೊಂಡಿದೆ. ನ. 2ರಂದು ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯನ ಅಪಹರಣ ಸೇರಿದಂತೆ ತೆರೆಮರೆ ಕಸರತ್ತು ನಡೆದಿದೆ. ಕಳೆದ ಒಂದು ವಾರದ ಹಿಂದೆ ಬಿಜೆಪಿ ಸದಸ್ಯೆಯೊಬ್ಬರನ್ನು ಕಾಂಗ್ರೆಸ್‌ನವರು ಅಪಹರಿಸಿದ್ದಾರೆಂಬ ಕಾರಣಕ್ಕೆ ಈಗ ಕಾಂಗ್ರೆಸ್ ಸದಸ್ಯರೊಬ್ಬರನ್ನು ಅಪಹರಿಸಿದ ಘಟನೆ ನಡೆದಿದೆ.
ಈಗಾಗಲೇ ಕಾಂಗ್ರೆಸ್ ಆಡಳಿತದ ಚುಕ್ಕಾಣಿ ಹಿಡಿಯಲು ತಮಗೆ ಬೇಕಾದ 19 ಸ್ಥಾನಗಳ ಸದಸ್ಯರ ಬಲಾಬಲಕ್ಕೆ ಸಿದ್ಧಪಡಿಸಿಕೊಂಡಿದ್ದ ಬೆನ್ನ ಹಿಂದೆಯೇ ಈಗ ಕಾಂಗ್ರೆಸ್ ಸದಸ್ಯರಾಗಿರುವ ಮನೋಹರಸ್ವಾಮಿ ಅವರನ್ನು ಗುರುವಾರ ರಾತ್ರಿ ಸಿನಿಮೀಯ ಮಾದರಿಯಲ್ಲಿ ಅಪಹರಿಸಲಾಗಿದೆ. ನಗರದ ಕೊಪ್ಪಳ ರಸ್ತೆಯ ಹೊಟೇಲ್ ಒಂದರಲ್ಲಿ ರಾತ್ರಿ ಊಟಕ್ಕೆ ತೆರಳಿದ್ದ ಮನೋಹರಸ್ವಾಮಿ ಅವರನ್ನು ಹಿಂಬಾಲಿಸಿದ 9ಕ್ಕೂ ಹೆಚ್ಚು ಯುವಕರು ಹೊಟೇಲ್‌ಗೆ ತೆರಳಿ ಮುಖಕ್ಕೆ ಮಬ್ಬು ಬರುವ ಪುಡಿಯನ್ನು ಹಾಕಿ ಇನೋವಾ (ನಂ.ಕೆ.ಎ.04 ಎಂ.ಡಬ್ಲೂ. 6187) ಕಾರಿನಲ್ಲಿ ಅಪಹರಿಸಿದ್ದಾರೆ. ಎರಡು ಕಾರುಗಳಿದ್ದು, ಒಂದು ಕಾರಿನಲ್ಲಿ ಕೇವಲ ನಾಲ್ಕು ಜನರಿದ್ದರೆ ಇನ್ನೊಂದು ಕಾರಿನಲ್ಲಿ 7 ಜನರಿದ್ದರು ಎಂದು ಅಪಹರಣಕ್ಕೆ ಒಳಗಾಗಿರುವ ಮನೋಹರಸ್ವಾಮಿ ತಿಳಿಸಿದ್ದಾರೆ. ಇರಕಲ್‌ಗಡಾ ಬಳಿ ತಮಗೆ ಎಚ್ಚರಿಕೆಯಾಗಿದ್ದು, ಆ ಸಂದರ್ಭದಲ್ಲಿ ಕಾರನ್ನು ಬದಲಾಯಿಸಿದರು ಎಂದು ತಿಳಿಸಿದ್ದಾರೆ.
ಕೊಪ್ಪಳ: ಪತಿಗೆ ಸಿಗದ ನಗರಸಭೆ ಅಧ್ಯಕ್ಷ ಪಟ್ಟ, ಪತ್ನಿಗೆ ದಕ್ಕಿತು!
ಮೂತ್ರ ವಿಸರ್ಜನೆಗೆ ತೆರಳಿ ತಪ್ಪಿಸಿಕೊಂಡೆ
ಹಳಿಯಾಳ ಪಟ್ಟಣದಲ್ಲಿ ಪೊಲೀಸ್ ಠಾಣೆ 100 ಮೀಟರ್ ಅಂತರದಲ್ಲಿ ಮೂತ್ರ ವಿಸರ್ಜನೆಗೆ ತೆರಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಅಷ್ಟರಲ್ಲಿ ಅಪಹರಣಕಾರರು ತಮ್ಮನ್ನು ಹಿಗ್ಗಾ ಮುಗ್ಗಾ ಥಳಿಸಿದರು ಎಂದು ಮನೋಹರಸ್ವಾಮಿ ತಿಳಿಸಿದ್ದಾರೆ. ಅದೇ ಸಮಯಕ್ಕೆ ಪೊಲೀಸರು ಗಸ್ತು ಮುಗಿಸಿ ಠಾಣೆಗೆ ಬರುತ್ತಿದ್ದ ಸಂದರ್ಭದಲ್ಲಿ ತಾವು ಚೀರಾಟ ಮಾಡಿದ್ದರಿಂದ ಪೊಲೀಸರು ತಮ್ಮನ್ನು ರಕ್ಷಿಸಿದರು ಎಂದು ತಿಳಿಸಿದ್ದಾರೆ. ಈಗ ಮನೋಹರಸ್ವಾಮಿ ಅವರನ್ನು ಅಪಹರಿಸಿದ್ದ ರಾಕೇಶ ಅಡೆವಪ್ಪ ನಾಯಕ, ಬಸವರಾಜ ಮಲ್ಲಪ್ಪ ಉಪ್ಪಾರ ಗುಂಡೂರು, ಶರಣಬಸಪ್ಪ ಮರಕುಂಬಿ ಲಿಂಗರಾಜ್ ಕ್ಯಾಂಪ್ ಇವರನ್ನು ಬಂಧಿಸಲಾಗಿದ್ದು, ರವಿ ಲಿಂಗರಾಜ್ ಕ್ಯಾಂಪ್ ಇವರು ಪರಾರಿಯಾಗಿದ್ದಾರೆ.
ರಣರಂಗವಾಗುತ್ತಿರುವ ಚುನಾವಣೆ
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದ್ದು, ರಣರಂಗವಾಗಿ ಪರಿಣಮಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಲು ತೆರೆಮರೆ ಕಸರತ್ತು ನಡೆಸುತ್ತಿರುವುದು ಒಂದಡೆಯಾಗಿದ್ದರೆ, ಈಗ ಎರಡು ಪಕ್ಷಗಳಲ್ಲಿ ಸದಸ್ಯರ ಅಪಹರಣ ಸದಸ್ಯರ ಕುಟುಂಬಗಳಲ್ಲಿ ಭಯ ಉಂಟು ಮಾಡಿದೆ. ಪ್ರಸ್ತುತ ನಗರಸಭೆಯ ಒಟ್ಟು 35 ಸದಸ್ಯರಿದ್ದು, ಕಾಂಗ್ರೆಸ್ 17, ಬಿಜೆಪಿ 14 ಮತ್ತು ಜೆಡಿಎಸ್ 2, ಪಕ್ಷೇತರ 2 ಸದಸ್ಯರಿದ್ದಾರೆ. ಆದರೆ ಕಾಂಗ್ರೆಸ್ 1 ಜೆಡಿಎಸ್ ಮತ್ತು 1 ಬಿಜೆಪಿ ಸದಸ್ಯರ ಬಲದೊಂದಿಗೆ 19 ಸ್ಥಾನಹೊಂದಿದೆ. ಬಿಜೆಪಿ ತನ್ನ 14 ಸ್ಥಾನಗಳ ಬಲದೊಂದಿಗೆ, 2 ಪಕ್ಷೇತರರು, ಒಂದು ಜೆಡಿಎಸ್, ಸಂಸದರು ಮತ್ತು ಶಾಸಕರ ಬಲದಿಂದ 19 ಬಲಾಬಲ ಇದೆ. ಆದರೆ ಬಿಜೆಪಿ ಸದಸ್ಯರು ಮತ್ತು ಕಾಂಗ್ರೆಸ್ ಸದಸ್ಯರ ಅಪಹರಣದಿಂದ ಈಗ ಯಾವ ತಿರುವು ಪಡೆಯುತ್ತಿದೆ ಎನ್ನುವುದಕ್ಕೆ ಕಾಯಬೇಕಾಗಿದೆ.