ಕೊಪ್ಪಳ: ಕೊರೋನಾದಿಂದ ಅನಾಥ ಮಕ್ಕಳ ಹೊಣೆ ಹೊರಲು ಮುಂದಾದ ಗಡ್ಡಿಮಠ ಶ್ರೀ
* ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಗಡ್ಡಿ ಮಠದ ಶ್ರೀಗಳಿಂದ ಘೋಷಣೆ
* ಕೋವಿಡ್ ತಂದೆ, ತಾಯಿ ಪಾಲಕರನ್ನು ಕಳೆದುಕೊಂಡಿರುವ ಅನಾಥ ಮಕ್ಕಳಿಗಾಗಿ ಯೋಜನೆ
* ಅನಾಥ ಮಕ್ಕಳ ಇಡೀ ಜೀವನದ ಶಿಕ್ಷಣ, ಪಠ್ಯಪುಸ್ತಕ ಜವಾಬ್ದಾರಿ
ಕೊಪ್ಪಳ(ಮೇ.31): ಕೋವಿಡ್‌ನಿಂದಾಗಿ ಪಾಲಕರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ಶಿಕ್ಷಣದ ಹೊರೆ ಹೊರಲು ಗಂಗಾವತಿ ತಾಲೂಕಿನ ಗಡ್ಡಿಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿ ತೀರ್ಮಾನಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ತಂದೆ, ತಾಯಿ ಅಥವಾ ಪಾಲಕರು ತೀರಿಕೊಂಡು ಅನಾಥವಾಗಿರುವ ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಹೀಗಾಗಿ, ಕಲ್ಯಾಣ ಕರ್ನಾಟಕ ಭಾಗದ ಅಷ್ಟು ಅನಾಥ ಮಕ್ಕಳ ಶೈಕ್ಷಣಿಕ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದಾರೆ. ಅವರ ಜೀವನಪೂರ್ತಿ ಅವರು ಪಡೆಯುವ ಶಿಕ್ಷಣ, ಪಠ್ಯದ ಜವಾಬ್ದಾರಿಯನ್ನು ನಿಭಾಯಿಸುವುದಾಗಿ ತಿಳಿಸಿದ್ದಾರೆ.
ಇದೊಂದು ಜಗತ್ತಿಗೆ ಬಂದಿರುವ ಸಂಕಷ್ಟವಾಗಿದೆ. ಹೀಗಾಗಿ, ಇದನ್ನು ನಿಭಾಯಿಸಲು ಎಲ್ಲರೂ ಶ್ರಮಿಸಬೇಕಾಗಿದೆ. ತುರ್ತು ಆರೋಗ್ಯ ಪರಿಸ್ಥಿತಿ ಎದುರಾಗಿದ್ದು, ಮಾರಕ ಕಾಯಿಲೆಯಿಂದ ಅದೆಷ್ಟೋ ಮಕ್ಕಳು ಅನಾಥವಾಗುತ್ತಿದ್ದಾರೆ. ಅವರು ಮಾಡದ ತಪ್ಪಿಗೆ ಅನಾಥವಾಗುತ್ತಿದ್ದು, ಅವರ ರಕ್ಷಣೆ ಮಾಡುವ ಬಯಕೆ ಗಡ್ಡಿ ಮಠದ್ದಾಗಿದೆ. ಹೀಗಾಗಿ, ಕೋವಿಡ್‌ನಿಂದಾಗಿ ಮೃತಪಟ್ಟು ಅನಾಥವಾಗಿರುವ ಮಕ್ಕಳ ಹೊಣೆಯನ್ನು ಹೊರಲು ಗಡ್ಡಿ ಶ್ರೀಮಠ ನಿರ್ಧರಿಸಿದೆ.
ಉಕ್ಕಿದ ಹಾಲು ಉತ್ಪಾದನೆ, ಒಕ್ಕೂಟಗಳು ಇಕ್ಕಟ್ಟಿನಲ್ಲಿ
ಅಂಥ ಮಕ್ಕಳು ಏನೇ ಓದಿದರೂ ಅದರ ಶೈಕ್ಷಣಿಕ ವೆಚ್ಚವನ್ನು ಭರಿಸಲು ಸಿದ್ಧವಿದ್ದೇವೆ. ಕಾರಣ ಈ ರೀತಿ ಅನಾಥವಾಗಿರುವ ಮಕ್ಕಳ ಸಂಬಂಧಿಕರು ಆದರೂ ಸರಿ ಅಥವಾ ಯಾರೇ ಮಾಹಿತಿ ನೀಡಿದರೆ ಅವರನ್ನು ಸಂಪರ್ಕಿಸಿ, ಅವರಿಗೆ ಶೈಕ್ಷಣಿಕ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9742304717 ಸಂಪರ್ಕಿಸಬಹುದು.
ಇದೊಂದು ಜಗತ್ತಿಗೆ ಬಂದಿರುವ ದೊಡ್ಡ ಕಂಟಕವಾಗಿದೆ. ಇಂಥ ಸಂದರ್ಭದಲ್ಲಿ ಮಾಡದ ತಪ್ಪಿಗೆ ಅನಾಥವಾಗಿರುವ ಮಕ್ಕಳ ಶೈಕ್ಷಣಿಕ ಹೊರೆಯನ್ನು ಹೊರಲು ಗಡ್ಡಿ ಶ್ರೀಮಠ ಮುಂದಾಗಿದೆ. ಕಾರಣ ಇದರ ಸದುಪಯೋಗವನ್ನು ಕಲ್ಯಾಣ ಕರ್ನಾಟಕ ಭಾಗದವರು ಪಡೆಯಲು ವಿನಂತಿ ಎಂದು ಗಡ್ಡಿಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.