ಗದಗ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ: ಕಾಂಗ್ರೆಸ್‌ನಲ್ಲಿ ಲೆಕ್ಕಾಚಾರ ಶುರು..!
ಕೊನೆಯ ಅವಧಿಗೆ ಕೊಣ್ಣೂರು ಕ್ಷೇತ್ರದಿಂದ ಆಯ್ಕೆಯಾಗಿರುವ ರಾಜುಗೌಡ ಕೆಂಚನಗೌಡ್ರ ಹಾಗೂ ಹಿರೇವಡ್ಡಟ್ಟಿ ಕ್ಷೇತ್ರದಿಂದ ಆಯ್ಕೆಯಾಗಿ ಈಶ್ವರಪ್ಪ ನಾಡಗೌಡ್ರ ನಡುವೆ ನೇರ ಪೈಪೋಟಿ| ಗದಗ ಜಿಲ್ಲಾ ಕಾಂಗ್ರೆಸ್ ಯಾವ ಜಾತಿಯ ಒತ್ತಡಕ್ಕೆ ಮಣಿಯುತ್ತದೆ ಎನ್ನುವುದೇ ಆಯ್ಕೆಯ ನಂತರ ಖಚಿತ|
ಶಿವಕುಮಾರ ಕುಷ್ಟಗಿ
ಗದಗ(ಜೂ.12): ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆಯಾಗಿದ್ದು ಜೂನ್ 19 ಕ್ಕೆ ನೂತನ ಅಧ್ಯಕ್ಷರ ಚುನಾವಣೆ ನಿಗದಿಯಾಗಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಪಕ್ಷದ ವರಿಷ್ಠರು ಸೇರಿದಂತೆ ಸ್ಥಾನ ಹಿಡಿಯಲು ಇನ್ನಿಲ್ಲದಂತೆ ಲಾಬಿ ನಡೆಸುತ್ತಿದ್ದು ಗದಗ ಜಿಲ್ಲಾ ಕಾಂಗ್ರೆಸ್‌ನಲ್ಲಿ ರಾಜಕೀಯ ಲೆಕ್ಕಾಚಾರ ಬಿರುಸಾಗಿ ನಡೆಯುತ್ತಿವೆ.
ಕೊಣ್ಣೂರ, ಹಿರೇವಡ್ಡಟ್ಟಿ ನಡುವೆ ಪೈಪೋಟಿ.
ಕೊನೆಯ ಅವಧಿಗೆ ಕೊಣ್ಣೂರು ಕ್ಷೇತ್ರದಿಂದ ಆಯ್ಕೆಯಾಗಿರುವ ರಾಜುಗೌಡ ಕೆಂಚನಗೌಡ್ರ ಹಾಗೂ ಹಿರೇವಡ್ಡಟ್ಟಿ ಕ್ಷೇತ್ರದಿಂದ ಆಯ್ಕೆಯಾಗಿ ಈಶ್ವರಪ್ಪ ನಾಡಗೌಡ್ರ ಅವರ ನಡುವೆ ನೇರ ಪೈಪೋಟಿ ಏರ್ಪಟ್ಟಿದ್ದು ಪಕ್ಷದ ವರಿಷ್ಠರು ಈಗಾಗಲೇ ಜಿಪಂನಲ್ಲಿ ಹುದ್ದೆ ಸಿಗದೇ ಇರುವವರಿಗೆ ಈ ಬಾರಿ ಅವಕಾಶ ನೀಡುವ ಚಿಂತನೆಯಲ್ಲಿದ್ದಾರೆ.
ಜಾತಿ ಲೆಕ್ಕಾಚಾರ
ಆಯ್ಕೆಯಾಗುವುದು ಕೊನೆಯ ಅವಧಿಗೆ ಆಗಿರುವ ಹಿನ್ನೆಯಲ್ಲಿ ಮುಂದೆ ಜಿಪಂ, ತಾಪಂ ಚುನಾವಣೆ ಎದುರಿಸಬೇಕಾಗಿರುವ ಹಿನ್ನೆಲೆಯಲ್ಲಿ ಕೊನೆಯ ಅವಧಿಯಲ್ಲಿ ಪ್ರಬಲ ಸಮುದಾಯದಿಂದ ಬಂದವರಿಗೆ ಮಣೆ ಹಾಕುವ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸಿದ್ದು ಅಂತಿಮವಾಗಿ ಅದೃಷ್ಟ ಇಬ್ಬರಲ್ಲಿ ಯಾರತ್ತ ಬೇಕಾದರೂ ವಾಲಬಹುದು.
'ಪ್ರಧಾನಿ ನರೇಂದ್ರ ಮೋದಿ ವಿಶ್ವದ ನೆಚ್ಚಿನ ನಾಯಕ'
ಹೈಕಮಾಂಡ್‌ಗೆ ತಲೆ ಬಿಸಿ
ಈ ಬಾರಿಯ ಅಧ್ಯಕ್ಷರ ಆಯ್ಕೆ ಪಕ್ಷಕ್ಕೆ ದೊಡ್ಡ ಕಗ್ಗಂಟಾಗಿದೆ. ಕೊಣ್ಣೂರು ಕ್ಷೇತ್ರಕ್ಕೆ ನೀಡಿದರೆ ಈ ಹಿಂದೆ ಅಧ್ಯಕ್ಷ ಸ್ಥಾನ ಪಡೆದಿದ್ದ ಸಿದ್ಧಲಿಂಗೇಶ್ವರ ಪಾಟೀಲ ಪ್ರತಿನಿಧಿಸುವ ಲಕ್ಕುಂಡಿ ಕೂಡಾ ನರಗುಂದ ವಿಧಾನಸಭಾ ಮತ ಕ್ಷೇತ್ರದ ವ್ಯಾಪ್ತಿಗೆ ಒಳ ಪಡುವ ಹಿನ್ನೆಲೆಯಲ್ಲಿ ಮತ್ತೆ ಮತ್ತೆ ಅದೇ ಕ್ಷೇತ್ರಕ್ಕೆ ಆದ್ಯತೆ ಸಿಕ್ಕಂತಾಗುತ್ತದೆ. ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಮುಂಡರಗಿ ತಾಲೂಕಿನ ಹಮ್ಮಗಿ ಕ್ಷೇತ್ರದ ಸದಸ್ಯೆ ಶೋಭಾ ಮೇಟಿ ಹೆಸರು ಪ್ರಬಲವಾಗಿ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ರಾಜುಗೌಡ ಮತ್ತು ಶೋಭಾ ಮೇಟಿ ಒಂದೇ ಸಮುದಾಯದವರಾಗುವ ಹಿನ್ನೆಲೆಯಲ್ಲಿ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಇನ್ನು ಹಿರೇವಡ್ಡಟ್ಟಿ ಕ್ಷೇತ್ರ ಮುಂಡರಗಿ ತಾಲೂಕು ವ್ಯಾಪ್ತಿಗೆ ಬರುತ್ತದೆ ಹಾಗಾಗಿ ಅಧ್ಯಕ್ಷ ಹಿರೇವಡ್ಡಟ್ಟಿಗೆ ಉಪಾಧ್ಯಕ್ಷ ಸ್ಥಾನ ಹಮ್ಮಗಿಗೆ ನೀಡಿದರೆ ಎರಡೂ ಒಂದೇ ತಾಲೂಕಿಗೆ ಪ್ರಾಧಾನ್ಯತೆ ನೀಡಿದಂತಾಗುತ್ತದೆ ಹಾಗಾಗಿ ಪಕ್ಷದ ವರಿಷ್ಠರಿಗೂ ತಲೆಬಿಸಿಗೆ ಕಾರಣವಾಗಿದೆ.
ಒತ್ತಡಗಳು ಜೋರಾಗುತ್ತಿವಂತೆ
ಕೊಣ್ಣೂರು ಕ್ಷೇತ್ರದ ರಾಜುಗೌಡ ರಡ್ಡಿ ಸಮುದಾಯದವರಾಗಿದ್ದು ಅವರ ಪರವಾಗಿ ಗದಗ ಜಿಲ್ಲೆಯ ಎಲ್ಲಾ ಹಿರಿಯರು ಪಕ್ಕದ ಬಾಗಲಕೋಟ ಜಿಲ್ಲೆಯ ಅದೇ ಸಮುದಾಯದ ನಾಯಕರು ರಾಜುಗೌಡರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಒತ್ತಾಯಿಸುತ್ತಿದ್ದರೆ. ಈಶ್ವರಪ್ಪ ನಾಡಗೌಡ್ರ ಕುಡುವಕ್ಕಲಿಗ ಸಮುದಾಯದವರಾಗಿದ್ದು ಇವರ ಪರವಾಗಿ ಕಾಂಗ್ರೆಸ್‌ನ ಪ್ರಭಾವಿ ನಾಯಕರುಗಳು ಒಂದೆಡೆ ವಿಜಯಪುರದಿಂದ ಮತ್ತೊಂದೆಡೆ ದಾವಣಗೆರೆಯಿಂದಲೂ ಜಿಲ್ಲಾ ಕಾಂಗ್ರೆಸ್ ಮೇಲೆ ನಿರಂತರ ಒತ್ತಡ ಹಾಕುತ್ತಿದ್ದು, ಗದಗ ಜಿಲ್ಲಾ ಕಾಂಗ್ರೆಸ್ ಯಾವ ಜಾತಿಯ ಒತ್ತಡಕ್ಕೆ ಮಣಿಯುತ್ತದೆ ಎನ್ನುವುದು ಆಯ್ಕೆಯ ನಂತರ ಖಚಿತವಾಗಲಿದೆ.
ಸಧ್ಯ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿರುವ ಇಬ್ಬರು ಯುವಕರಾಗಿದ್ದು ಇಬ್ಬರಲ್ಲಿ ಯಾರಿಗೆ ಸಿಕ್ಕರೂ ಜಿಲ್ಲಾ ಯುವ ಕಾಂಗ್ರೆಸ್ ಖುಷಿ ಪಡಲಿದೆ. ಆದರೆ ಇಬ್ಬರೂ ವಿವಿಧ ಸ್ಥಾಯೀ ಸಮಿತಿಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು ಹಾಗಾಗಿ ಪಕ್ಷ ಯಾವ ಮಾನದಂಡದ ಮೇಲೆ ಈ ಬಾರಿ ಆಯ್ಕೆ ಮಾಡುತ್ತದೆ ಎನ್ನುವುದು ಮಾತ್ರ ಸಹಜವಾಗಿ ಕಾಂಗ್ರೆಸ್ ಪಡಸಾಲೆಯಲ್ಲಿಯೇ ಕುತೂಹಲಕ್ಕೆ ಕಾರಣವಾಗಿದೆ.
News In 100 Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"