ಗದಗ ಜಿಲ್ಲೆಯ ರೋಣದಲ್ಲಿ, ಲೋಕಾಯುಕ್ತ ದಾಳಿಯಿಂದ ಉಂಟಾದ ಮಾನಸಿಕ ಒತ್ತಡಕ್ಕೆ ಸಿಲುಕಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮಕ್ತುಂಹುಸೇನ ಕರಡಿಗುಡ್ಡ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ದಾಳಿ, ಅಮಾನತು ಮತ್ತು ವರ್ಗಾವಣೆಯಿಂದ ಖಿನ್ನತೆಗೆ ಒಳಗಾಗಿದ್ದರು. ಇದೀಗ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ
ಗದಗ (ಏ.30): ಜಿಲ್ಲೆಯ ರೋಣ ಪಟ್ಟಣದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಲೋಕಾಯುಕ್ತ ದಾಳಿಯ ಬಳಿಕ ಉಂಟಾದ ಮಾನಸಿಕ ಒತ್ತಡಕ್ಕೆ ಸಿಲುಕಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರು (PDO) ಆತ್ಮ*ಹತ್ಯೆಗೆ ಶರಣಾಗಿದ್ದಾರೆ. ರೋಣ ತಾಲೂಕಿನ ಅಸೂಟಿ ಹಾಗೂ ಕೊತಬಾಳ ಗ್ರಾಮದ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಕ್ತುಂಹುಸೇನ ಕರಡಿಗುಡ್ಡ (46) ಅವರು ನೇಣು ಬಿಗಿದುಕೊಂಡು ಜೀವನ ಅಂತ್ಯಗೊಳಿಸಿದ ದುರ್ದೈವಿ.
ಘಟನೆಯ ವಿವರ:
ಮೂಲತಃ ಧಾರವಾಡ ಜಿಲ್ಲೆಯವರಾದ ಮಕ್ತುಂಹುಸೇನ ಕರಡಿಗುಡ್ಡ ಅವರು ರೋಣ ಪಟ್ಟಣದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಕಳೆದ ಮಂಗಳವಾರ ರಾತ್ರಿ ಇವರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಸತತ ಎರಡು ದಿನಗಳಿಂದ ಇವರು ಪತ್ನಿಯ ಕರೆಗೆ ಸ್ಪಂದಿಸಿರಲಿಲ್ಲ. ಪತಿ ಫೋನ್ ಸ್ವೀಕರಿಸದ ಕಾರಣ ಗಾಬರಿಗೊಂಡ ಪತ್ನಿ, ಬಾಡಿಗೆ ಮನೆಯ ಮಾಲೀಕರಿಗೆ ಕರೆ ಮಾಡಿ ವಿಚಾರಿಸುವಂತೆ ವಿನಂತಿಸಿದ್ದಾರೆ. ಮನೆಯ ಮಾಲೀಕರು ಹೋಗಿ ನೋಡಿದಾಗ ಸಾವಿನ ಕರುಣಾಜನಕ ದೃಶ್ಯ ಬೆಳಕಿಗೆ ಬಂದಿದೆ.
ಆತ್ಮ*ಹತ್ಯೆಗೆ ಕಾರಣವೇನು?
ಪಿಡಿಒ ಮಕ್ತುಂಹುಸೇನ ಅವರ ಜೀವನದಲ್ಲಿ ಕಳೆದ 2 ವರ್ಷಗಳಿಂದ ನೆಮ್ಮದಿ ಇರಲಿಲ್ಲ ಎನ್ನಲಾಗಿದೆ. 2022-23ನೇ ಸಾಲಿನಲ್ಲಿ ಇವರ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ದಾಳಿಯ ನಂತರ ಇಲಾಖೆಯು ಇವರನ್ನು ಅಮಾನತುಗೊಳಿಸಿತ್ತು. ದೀರ್ಘಕಾಲದ ಅಮಾನತ್ತಿನ ಬಳಿಕ ಇವರನ್ನು ಗದಗ ಜಿಲ್ಲೆಗೆ ನಿಯೋಜನೆ ಮಾಡಲಾಗಿತ್ತು. ಕಳೆದ ತಿಂಗಳಷ್ಟೇ ಇವರು ಕೊತಬಾಳ ಪಂಚಾಯತಿಯ ಪಿಡಿಒ ಆಗಿ ಅಧಿಕಾರ ವಹಿಸಿಕೊಂಡಿದ್ದರು.
ಲೋಕಾಯುಕ್ತ ದಾಳಿ, ಕೆಲಸದಿಂದ ಅಮಾನತುಗೊಂಡಿದ್ದು ಹಾಗೂ ನಂತರದ ವರ್ಗಾವಣೆಯ ಪ್ರಕ್ರಿಯೆಗಳು ಇವರನ್ನು ಮಾನಸಿಕವಾಗಿ ಜರ್ಜರಿತಗೊಳಿಸಿದ್ದವು ಎಂದು ಹೇಳಲಾಗುತ್ತಿದೆ. ಸಮಾಜದಲ್ಲಿ ಗೌರವ ಕಳೆದುಕೊಂಡೆ ಎಂಬ ಕೊರಗು ಹಾಗೂ ಇಲಾಖಾ ತನಿಖೆಗಳ ಭೀತಿಯಿಂದ ಮಕ್ತುಂಹುಸೇನ ಅವರು ತೀವ್ರ ಖಿನ್ನತೆಗೆ ಒಳಗಾಗಿದ್ದರು. ಈ ಮಾನಸಿಕ ಕುಸಿತವೇ ಅವರು ಇಂತಹದೊಂದು ತೀವ್ರ ನಿರ್ಧಾರ ತೆಗೆದುಕೊಳ್ಳಲು ಪ್ರೇರೇಪಿಸಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ಸ್ಥಳಕ್ಕೆ ಪೊಲೀಸರ ಭೇಟಿ:
ಘಟನೆ ತಿಳಿದ ತಕ್ಷಣ ರೋಣ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಲೋಕಾಯುಕ್ತ ದಾಳಿಯಿಂದ ಆರಂಭವಾದ ಕಾನೂನು ಹೋರಾಟ ಮತ್ತು ಮಾನಸಿಕ ಸಂಘರ್ಷವು ಅಂತಿಮವಾಗಿ ಅಧಿಕಾರಿಯೊಬ್ಬರ ಸಾವಿನಲ್ಲಿ ಅಂತ್ಯಗೊಂಡಿರುವುದು ಪಂಚಾಯತ್ ರಾಜ್ ಇಲಾಖೆಯಲ್ಲಿ ವಿಷಾದ ಮೂಡಿಸಿದೆ.
ಬದುಕು ಕಟ್ಟಿಕೊಳ್ಳಬೇಕಾದ ಅಧಿಕಾರಿಯೊಬ್ಬರು ಆತುರದ ನಿರ್ಧಾರಕ್ಕೆ ಬಲಿಯಾಗಿರುವುದು ಅವರ ಕುಟುಂಬವನ್ನು ಅನಾಥವಾಗಿಸಿದೆ. ಈ ಘಟನೆಯು ಸರ್ಕಾರಿ ಅಧಿಕಾರಿಗಳ ಮೇಲಿರುವ ಕೆಲಸದ ಒತ್ತಡ ಮತ್ತು ಭ್ರಷ್ಟಾಚಾರದ ಆರೋಪಗಳು ಎದುರಾದಾಗ ಅವರು ಅನುಭವಿಸುವ ಮಾನಸಿಕ ಹಿಂಸೆಯತ್ತ ಬೆಳಕು ಚೆಲ್ಲಿದೆ.


