ಗದಗ(ಮೇ.31): ರಾಜ್ಯಾದ್ಯಂತ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲಿಯೇ ಗದಗ ಜಿಲ್ಲೆಯ ಜನತೆಯಲ್ಲಿಯೂ ಆತಂಕ ದಿನೇ ದಿನೇ ಹೆಚ್ಚುತ್ತಲೇ ಇದ್ದು, ಯಾವಾಗ ಒಮ್ಮೆಲೇ ಸೋಂಕಿತರ ಸಂಖ್ಯೆ ಹೆಚ್ಚಾದರೆ ಹೇಗೆ ಎನ್ನುವ ಭಯವೂ ಶುರುವಾಗಿದೆ.

ಏ. 7ರಂದು ಜಿಲ್ಲೆಯ ಮೊಟ್ಟ ಮೊದಲ ಪ್ರಕರಣ ಗದಗ ನಗರದ ರಂಗನವಾಡಿ ಪ್ರದೇಶದಲ್ಲಿ ಪತ್ತೆಯಾಗಿತ್ತು, ಪತ್ತೆಯಾದ 2 ದಿನಕ್ಕೆ ಏ. 9ರಂದು ಸೋಂಕಿತೆ (ಪಿ-166) 80 ವರ್ಷದ ವೃದ್ಧೆ ಸಾವನ್ನಪ್ಪಿದ್ದರು. ಅಂದಿನಿಂದ ಇಂದಿನ ವರೆಗೂ ವೃದ್ಧೆಯ ಸೋಂಕಿನ ಮೂಲ ಪತ್ತೆಯಾಗದೇ ಸೋಂಕು ವ್ಯಾಪಿಸಿದ್ದು ಕೂಡ ಎಲ್ಲರಲ್ಲಿಯೂ ಆತಂಕಕ್ಕೆ ಕಾರಣವಾಗಿದೆ.

ಕೊರೋನಾ ಪ್ರಯೋಗಕ್ಕೆ ನನ್ನ ದೇಹ ಬಳಸಿ: ಪ್ರಧಾನಿಗೆ ಯುವಕನ ಪತ್ರ

ಜಿಲ್ಲೆಯ ಕೊರೋನಾ ಹಿಸ್ಟರಿ:

ಜಿಲ್ಲೆಯ ಮೊದಲ ಕೊರೋನಾ ಪ್ರಕರಣಕ್ಕೆ ಯಾವುದೇ ಟ್ರಾವೆಲ್‌ ಹಿಸ್ಟರಿ ಇಲ್ಲದೇ ಇದ್ದರೂ ನಿಗೂಢವಾಗಿ ವಕ್ಕರಿಸಿತ್ತು. ಇದಾದ 8 ದಿನಗಳ ಕಾಲ ಯಾವುದೇ ಪ್ರಕರಣಗಳು ವರದಿಯಾಗಿರಲಿಲ್ಲ, ನಂತರ (ಪಿ-304), 59 ವರ್ಷದ ಮೃತಪಟ್ಟವೃದ್ಧೆಯ ಸಂಪರ್ಕದಿಂದಾಗಿ ಸೋಂಕು ಖಚಿತವಾಗಿತ್ತು.

ಇದಾದ ನಂತರ (ಪಿ-304), 59 ವರ್ಷದ ಮಹಿಳೆಗೆ, (ಪಿ-370), 42 ವರ್ಷದ ವ್ಯಕ್ತಿಗೂ ಅಜ್ಜಿಯ ಸಂಪರ್ಕದಿಂದಲೇ ಸೋಂಕು ದೃಢಪಟ್ಟಿತ್ತು. ಇದಾದ ನಾಲ್ಕು ದಿನಗಳ ನಂತರ ಮತ್ತೆ ಅದೇ ರಂಗನವಾಡಾ ಭಾಗದ (ಪಿ-396), 24 ವರ್ಷದ ಯುವಕ.(ಪಿ-370), 42 ವರ್ಷದ ಯುವಕನಿಗೂ ಸೋಂಕು ದೃಢಪಟ್ಟಿತ್ತು. ಇವರೆಲ್ಲರು ಒಂದೇ ಪ್ರದೇಶದ ನಿವಾಸಿಗಳಾಗಿದ್ದರು. ಇದಾದ 8 ದಿನಗಳ ಕಾಲ ಯಾವುದೇ ಸೋಂಕಿನ ಪ್ರಕರಣಗಳು ವರದಿಯಾಗಿರಲಿಲ್ಲ. ಆದರೆ, ರಂಗನವಾಡಾದಿಂದ ಪಕ್ಕದ ಗಂಜಿಬಸವೇಶ್ವರ ಓಣಿಯಲ್ಲಿ ಕೂಡಾ ಯಾವುದೇ ಟ್ರಾವೆಲ್‌ ಹಿಸ್ಟರಿ ಇಲ್ಲದೇ ಇರುವ 75 ವರ್ಷದ ವೃದ್ಧ (ಪಿ-514) ಸೋಂಕು ಖಚಿತವಾಗಿ ಜಿಲ್ಲೆಯಾದ್ಯಂತ ದೊಡ್ಡ ಆತಂಕಕ್ಕೆ ಕಾರಣವಾಗಿದ್ದಲ್ಲದೇ ಸದ್ಯ ಅಲ್ಲಿಂದಲೇ 15ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಜಿಲ್ಲೆಯಲ್ಲಿ ಒಟ್ಟು 35 ಪ್ರಕರಣಗಳು ಇದುವರೆಗೂ ಖಚಿತಪಟ್ಟಿದ್ದು ಅವುಗಳಲ್ಲಿ ಅಂತರ ರಾಜ್ಯದಿಂದ ಬಂದವರಲ್ಲಿ 15 ಜನರಿಗೆ ಪಾಸಿಟಿವ್‌, ಇನ್ನು ಗದಗನ ರಂಗನವಾಡಾ ಭಾಗದಿಂದ 4, ಗಂಜೀ ಬಸವೇಶ್ವರ ಓಣಿಯಿಂದ 16 ಕೇಸ್‌ಗಳು ಪತ್ತೆಯಾಗಿವೆ. ಅನ್ಯ ಜಿಲ್ಲೆಗಳಿಗೆ ಹೋಲಿಕೆ ಮಾಡಿದಲ್ಲಿ ಗದಗ ಜಿಲ್ಲೆಯಲ್ಲಿ ಹೊರ ರಾಜ್ಯಗಳಿಗಿಂತ ಜಿಲ್ಲೆಯಲ್ಲಿ ಯಾವುದೇ ಮೂಲವಿಲ್ಲದೇ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡಿದೆ ಎನ್ನುವುದಕ್ಕೆ ಪತ್ತೆಯಾಗಿರುವ ಪ್ರಕರಣಗಳೇ ಪ್ರಮುಖ ಸಾಕ್ಷಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೊರೋನಾ ಆತಂಕ ದಿನೇ ದಿನೇ ಹೆಚ್ಚುತ್ತಲೇ ಇದೆ.

ಜಿಲ್ಲೆಯಲ್ಲಿ ಇದುವರೆಗೂ ಪತ್ತೆಯಾಗಿರುವ ಒಟ್ಟು 35 ಪ್ರಕರಣಗಳಲ್ಲಿ 21 ಪುರುಷರು, 7 ಮಹಿಳೆಯರು ಹಾಗೂ 7 ಅಪ್ರಾಪ್ತರಲ್ಲಿ ಕೊರೋನಾ ಪಾಸಿಟಿವ್‌ ಕಾಣಿಸಿಕೊಂಡಿದೆ. ಇವರಲ್ಲಿ ಮೊದಲು ಸೋಂಕು ಕಾಣಿಸಿಕೊಂಡ ವೃದ್ಧೆ ಮೃತಪಟ್ಟಿದ್ದಾರೆ. 12 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರೆ, ಇನ್ನುಳಿದ 22 (ಜನ) ಆಕ್ಟೀವ್‌ ಕೊರೋನಾ ಸೋಂಕಿತರಿಗೆ ಗದಗ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಹಾರಾಷ್ಟ್ರ : 04
ಗುಜರಾತ್‌ : 07
ರಾಜ್ಯಸ್ಥಾನ : 02
ತಮಿಳುನಾಡ : 01
ಛತ್ತಿಸ್‌ಗಡ್‌ : 01
ಒಟ್ಟು 15