ಗದಗ, ಕೊಪ್ಪಳದಲ್ಲಿ ಯೂರಿಯಾಕ್ಕೆ ಅಂಗಡಿಗಳ ಮುಂದೆ ರೈತರ ಕ್ಯೂ!
- ಯೂರಿಯಾ ಖರೀದಿಗೆ ಮುಗಿಬಿದ್ದ ರೈತರು
- ಗದಗ, ಕೊಪ್ಪಳ ಜಿಲ್ಲೆಯ ಕೆಲವೆಡೆ ಯೂರಿಯಾ ರಸಗೊಬ್ಬರ ಕೊರತೆ
- ಬೆಳಗ್ಗೆ 6 ಗಂಟೆಯಿಂದಲೇ ರೈತರು ಗೊಬ್ಬರಕ್ಕಾಗಿ ಕ್ಯೂ
ಹುಬ್ಬಳ್ಳಿ (ಜು.10): ಕಳೆದ ಕೆಲ ದಿನಗಳಿಂದ ಉತ್ತಮ ಮಳೆ ಸುರಿಯುತ್ತಿರುವುದರಿಂದ ಗದಗ, ಕೊಪ್ಪಳ ಜಿಲ್ಲೆಯ ಕೆಲವೆಡೆ ಯೂರಿಯಾ ರಸಗೊಬ್ಬರಕ್ಕಾಗಿ ರೈತರು ಮುಗಿಬಿದ್ದಿದ್ದು, ಗೊಬ್ಬರದ ಅಭಾವ ಕಾಣಿಸಿಕೊಂಡಿದೆ. ರೈತರು ಗೊಬ್ಬರದ ಅಂಗಡಿಗಳ ಮುಂದೆ ಸಾಲು ನಿಲ್ಲುತ್ತಿದ್ದಾರೆ. ಕೊಪ್ಪಳ ತಾಲೂಕಿನ ಯಲಬುರ್ಗಾ ಮತ್ತು ಗದಗ ತಾಲೂಕಿನ ಶಿರಹಟ್ಟಿ, ಲಕ್ಷ್ಮೇಶ್ವರ ಸೇರಿ ಹಲವೆಡೆ ಯೂರಿಯಾಗಾಗಿ ರೈತರು ಸಹಕಾರ ಸಂಘ ಮತ್ತು ಕೃಷಿ ಕೇಂದ್ರಗಳ ಎದುರು ಸರತಿಯಲ್ಲಿ ಕಾಯುತ್ತಿದ್ದಾರೆ.
ಮಳೆ ಸುರಿಯುತ್ತಿರುವುದರಿಂದ ತೇವಾಂಶ ಹೆಚ್ಚಾಗಿ ಮೆಕ್ಕೆಜೋಳ ಬೆಳೆ ಹಾಳಾಗುವ ಹಾಗೂ ಕಳೆ ಹೆಚ್ಚುವ ಭೀತಿ ಹಿನ್ನೆಲೆಯಲ್ಲಿ ಯೂರಿಯಾ ಗೊಬ್ಬರ ನೀಡಿದರೆ ಬೆಳೆ ಚಿಗುರುತ್ತದೆ. ಹೀಗಾಗಿ ರೈತರು ಯೂರಿಯಾಗಾಗಿ ಮುಗಿ ಬೀಳುತ್ತಿದ್ದಾರೆ.
ಯಲಬುರ್ಗಾ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದೆ ಹಾಗೂ ಶಿರಹಟ್ಟಿತಾಲೂಕಿನ ಸಹಕಾರ ಸಂಘಗಳ ಮುಂದೆ ಬೆಳಗ್ಗೆ 6 ಗಂಟೆಯಿಂದಲೇ ರೈತರು ಗೊಬ್ಬರಕ್ಕಾಗಿ ಸಾಲು ನಿಂತಿದ್ದರು. ಪ್ರತಿಯೊಬ್ಬರಿಗೂ ತಲಾ 2 ಬ್ಯಾಗ್ ಯೂರಿಯಾ ವಿತರಿಸಿ ಪರಿಸ್ಥಿತಿ ನಿಯಂತ್ರಿಸಲಾಯಿತು. ಕೃಷಿ ಅಧಿಕಾರಿಗಳ ಹೇಳಿಕೆ ಪ್ರಕಾರ ಗೊಬ್ಬರದ ಸ್ಟಾಕ್ ಇದೆ. ಆದರೆ ತುರ್ತಾಗಿ ಗೊಬ್ಬರ ಖರೀದಿಗೆ ರೈತರು ಮುಗಿ ಬಿದ್ದಿದ್ದರಿಂದ ಪೂರೈಕೆಯಲ್ಲಿ ಗೊಂದಲ ಆಗಿದೆ ಎಂದರು.
ಕೃಷಿ ವಿವಿಗಳಲ್ಲಿ ಸಮಗ್ರ ಮಾಹಿತಿ ಸಿಗಲಿ: ಶೋಭಾ ಕರಂದ್ಲಾಜೆ
ಈಗಾಗಲೇ ಎಲ್ಲ ಪತ್ತಿನ ಸಹಕಾರ ಸಂಘದಿಂದ ಕುಕನೂರು ಹಾಗೂ ಯಲಬುರ್ಗಾ ತಾಲೂಕಿನ ರೈತರಿಗೆ ಒಟ್ಟು 800 ಟನ್ ಯೂರಿಯಾ ಗೊಬ್ಬರ ವಿತರಿಸಲಾಗಿದೆ. ಸೋಮವಾರ 300 ಟನ್ ಗೊಬ್ಬರ ಬರಲಿದೆ. ಅನ್ನದಾತರಿಗೆ ಯಾವುದೇ ತೊಂದರೆ ಆಗದಂತೆ ಗೊಬ್ಬರ ಖರೀದಿಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
-ಪ್ರಾಣೇಶ ಹಾದಿಮನಿ, ಸಹಾಯಕ ಕೃಷಿ ನಿರ್ದೇಶಕ
ಗೊಬ್ಬರಕ್ಕಾಗಿ ನಾಳೆ ರೈತ ಸಂಘದಿಂದ ಪ್ರತಿಭಟನೆ: ಪಟ್ಟಣದ ರೈತರಿಗೆ ಯೂರಿಯಾ, ಡಿಎಪಿ ರಸಗೊಬ್ಬರ ಸಮರ್ಪಕವಾಗಿ ಪೂರೈಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಜು. 11ರಂದು ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ರೈತ ಸಂಘದ ಮುಳಗುಂದ ಘಟಕದ ಸಂಘದ ಅಧ್ಯಕ್ಷ ಬಸವರಾಜ ಕರಿಗಾರ ಹೇಳಿದರು.
ರಾಮನಗರ: ಕೃಷಿ ಅಧಿಕಾರಿಗಳ ಮೈ ಚಳಿ ಬಿಡಿಸಿದ ಸಂಸದ ಡಿ.ಕೆ.ಸುರೇಶ್..!
ಶನಿವಾರ ಇಲ್ಲಿನ ಖಾಸಗಿ ಆಗ್ರೋ ಕೇಂದ್ರಗಳಿಗೆ ಮುತ್ತಿಗೆ ಹಾಕಿದ್ದ ರೈತ ಸಂಘದ ಸದಸ್ಯರು ಯೂರಿಯಾ, ಡಿಎಪಿ ತರಿಸುವಂತೆ ಮನವಿ ಕೊಟ್ಟು ಮಾತನಾಡಿದರು. ಯೂರಿಯಾ ಜತೆಗೆ ಲಿಂಕ್ ಗೊಬ್ಬರ ಕೊಡುತ್ತಿದ್ದಾರೆ, ರೈತರು ಲಿಂಕ್ ಗೊಬ್ಬರ ಖರೀದಿಸುತ್ತಿಲ್ಲ ಹೀಗಾಗಿ ನಾವು ಗೊಬ್ಬರ ತರಿಸಿಲ್ಲ ಎಂದು ಖಾಸಗಿ ಆಗ್ರೋ ಕೇಂದ್ರದವರು ಹೇಳುತ್ತಿದ್ದಾರೆ, ಹೀಗಾದರೆ ರೈತರ ಪಾಡೇನು, ದೂರದ ಊರುಗಳಿಂದ 200-300 ರು. ಹೆಚ್ಚಿಗೆ ಹಣ ಕೊಟ್ಟು ಯೂರಿಯಾ ತರುತ್ತಿದ್ದಾರೆ. ಸದ್ಯ ಕಳೆದ ಒಂದು ವಾರದಿಂದ ಸತತ ಮಳೆಯಾಗುತ್ತಿದ್ದು, ಭೂಮಿ ತೇವಾಂಶ ಹೆಚ್ಚಾಗಿದ್ದು ಬೆಳೆಗಳಿಗೆ ಹಾನಿಯಾಗುವ ಆತಂಕ ಇದೆ. ತೇವಾಂಶ ನಿಯಂತ್ರಣಕ್ಕೆ ಯೂರಿಯಾ ರಸಗೊಬ್ಬರ ಅಗತ್ಯವಾಗಿದ್ದು ಎಲ್ಲೂ ಗೊಬ್ಬರ ಸಿಗುತ್ತಿಲ್ಲ ಎಂದು ಕೃಷಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಲಿಂಕ್ ರಹಿತ ಗೊಬ್ಬರ ಒದಗಿಸುವಂತೆ ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.