Asianet Suvarna News Asianet Suvarna News

ಪ್ರೌಢಶಾಲೆಗೆ ಕೊಳವೆ ಬಾವಿ ಕೊರೆಸಿ ಮೋಟಾರ್ ಅಳವಡಿಸಿದ ಜಿ.ಡಿ. ಹರೀಶ್ ಗೌಡ

ದಶಕಗಳಿಂದ ನೀರಿನ ಕೊರತೆಯಿಂದ ಬಳಲುತ್ತಿದ್ದ ಹೆಣ್ಣುಮಕ್ಕಳ ಸರ್ಕಾರಿ ಪ್ರೌಢಶಾಲೆಗೆ ಕೊಳವೆಬಾವಿ ಕೊರೆಸಿ ಮೋಟಾರ್ ಅಳವಡಿಸಿ ನೀರು ಪೂರೈಸುವ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಂಪನ್ಮೂಲ ಕೈಪಿಡಿ ವಿತರಿಸುವ ಮೂಲಕ ಶಾಸಕ ಜಿ.ಡಿ. ಹರೀಶ್ ಗೌಡ ತಮ್ಮ 37ನೇ ವರ್ಷದ ಹುಟ್ಟುಹಬ್ವವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.

G.D Harish Gowda Contributes Bore well and installed  motor in the high school  snr
Author
First Published Feb 1, 2024, 11:52 AM IST

  ಹುಣಸೂರು :  ದಶಕಗಳಿಂದ ನೀರಿನ ಕೊರತೆಯಿಂದ ಬಳಲುತ್ತಿದ್ದ ಹೆಣ್ಣುಮಕ್ಕಳ ಸರ್ಕಾರಿ ಪ್ರೌಢಶಾಲೆಗೆ ಕೊಳವೆಬಾವಿ ಕೊರೆಸಿ ಮೋಟಾರ್ ಅಳವಡಿಸಿ ನೀರು ಪೂರೈಸುವ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಂಪನ್ಮೂಲ ಕೈಪಿಡಿ ವಿತರಿಸುವ ಮೂಲಕ ಶಾಸಕ ಜಿ.ಡಿ. ಹರೀಶ್ ಗೌಡ ತಮ್ಮ 37ನೇ ವರ್ಷದ ಹುಟ್ಟುಹಬ್ವವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.

ಪಟ್ಟಣದ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಕಟ್ಟಡಕ್ಕೆ ಶಾಸಕರ ವೈಯಕ್ತಿಕ ಆರ್ಥಿಕ ನೆರವಿನಡಿ ಎರಡು ದಿನಗಳ ಹಿಂದೆ ಕೊಳವೆಬಾವಿ ಕೊರೆಸಿ ಮೋಟಾರ್ ಅಳವಡಿಸಿ ನೀರು ಪೂರೈಕೆಗೆ ಬುಧವಾರ ಚಾಲನೆ ನೀಡಿದರು. ಮತ್ತು ವಿದ್ಯಾರ್ಥಿನಿಯರಿಗೆ 320 ಪುಟಗಳ ಸಂಪನ್ಮೂಲ ಕೈಪಿಡಿಯನ್ನು ವಿತರಿಸಿದರು.

ಈ ವೇಳೆ ಶಾಲೆಯಲ್ಲಿ ಹುಟ್ಟುಹಬ್ಬ ಆಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನ್ನ ಹುಟ್ಟುಹಬ್ಬದ ಆಚರಣೆಯ ಆಂಗವಾಗಿ ಕೊಳವೆಬಾವಿ ಕೊರೆಸಲಿಲ್ಲ. ಶಾಲೆಯಲ್ಲಿ ಕಳೆದ 10 ವರ್ಷಗಳಿಂದ ಈ ಸಮಸ್ಯೆ ಕಾಡುತ್ತಿದೆ ಎಂಬ ವಿಷಯ 2 ತಿಂಗಳ ಹಿಂದೆ ತಿಳಿಯಿತು. ಹಾಗಾಗಿ ಕೊಳವೆಬಾವಿ ಕೊರೆಯಿಸಿ ನೀರಿನ ಸಮಸ್ಯೆ ಪರಿಹರಿಸಬೇಕೆಂದು ಉದ್ದೇಶಿಸಿದ್ದೆ. ಅದು ಕಾಕತಾಳೀಯವಾಗಿ ಇಂದು ಪೂರ್ಣಗೊಂಡಿದೆ. ನಾನು ಶಾಸಕನಾಗಿ ಆಯ್ಕೆಯಾದ ನಂತರ ಮೊದಲ ಸಭೆ ನಡೆಸಿದ್ದೇ ಶಿಕ್ಷಣ ಇಲಾಖೆಯದ್ದು. ನನ್ನ ಅಧಿಕಾರಾವಧಿಯಲ್ಲಿ ಶಿಕ್ಷಣ, ಆರೋಗ್ಯ ನೀರಾವರಿ ಮತ್ತು ರೈತರ ಸಮಸ್ಯೆಗಳ ಕುರಿತು ಆದ್ಯತೆ ನೀಡಲಿದ್ದೇನೆ ಎಂದಿದ್ದೆ. ಅದರಂತೆ ಈ ಶಾಲೆಯ ಬಹುವರ್ಷಗಳ ಸಮಸ್ಯೆ ಪರಿಹಾರವಾಗಿರುವುದು ನನಗೆ ಸಂತಸ ತಂದಿದೆ ಎಂದರು.

ತಾಲೂಕಿನಲ್ಲಿ ಶಾಲಾ ಕಾಲೇಜುಗಳಿಗೆ ಮೂಲಸೌಕರ್ಯದ ಕೊರತೆ ಕಾಡುತ್ತಿರುವುದು ಒಂದೆಡೆಯಾದರೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಕುರಿತು ಸಮಗ್ರ ತರಬೇತಿ ಅವಶ್ಯಕವಿದೆ. ತಾಲೂಕಿನ ನುರಿತ ಶಿಕ್ಷಕರಿಂದ ಕೇವಲ ಪಾಸಿಂಗ್ ಪ್ಯಾಕೇಜ್ ಮಾತ್ರವಲ್ಲದೇ ಎಲ್ಲ ವಿಧದಲ್ಲೂ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲು ಪರಿಪೂರ್ವಾಗಿ ಸಜ್ಜಾಗಲು ಅವಶ್ಯಕ ಸಂಪನ್ಮೂಲ ಕೈಪಿಡಿ ಸಿದ್ಧಪಡಿಸಲಾಗಿದೆ. ಇಲಾಖೆ ತಾಲೂಕಿನ 70 ಪ್ರೌಢಶಾಲೆಗಳಿಗೆ ತಲಾ ಒಂದರಂತೆ ಪುಸ್ತಕ ಹಂಚಲು ತೀರ್ಮಾನಿಸಿತ್ತು. ಅದರಿಂದ ಪ್ರಯೋಜನವಿಲ್ಲವೆಂದು ಭಾವಿಸಿ ತಾಲೂಕಿನ ಎಲ್ಲ 4,300 ವಿದ್ಯಾರ್ಥಿಗಳಿಗೂ ಉಚಿತವಾಗಿ ಪುಸ್ತಕ ವಿತರಿಸಲು ಕ್ರಮವಹಿಸಿದ್ದೇನೆ. ಮುಂದಿನ ದಿನಗಳಲ್ಲಿ ನಮ್ಮ ತಾಲೂಕು ಶಿಕ್ಷಣಕ್ಷೇತ್ರದಲ್ಲಿ ರಾಜ್ಯಕ್ಕೆ ಮಾದರಿಯಾಗಬೇಕೆನ್ನುವುದೇ ನನ್ನ ಅಭಿಲಾಷೆಯಾಗಿದೆ. ಶಿಕ್ಷಕರು ತಮ್ಮ ಮಕ್ಕಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳ ಕುರಿತು ಹೆಚ್ಚಿನ ಆಸ್ಥೆ ಬೆಳೆಯುವಂತೆ ಮಾಡಬೇಕು. ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಎದುರಿಸಲು ಅಗತ್ಯ ನೈತಿಕಸ್ಥೈರ್ಯ, ಆತ್ಮವಿಶ್ವಾಸ ಮತ್ತು ಜೀವನವನ್ನು ಎದುರಿಸುವ ಪರಿಪಕ್ವತೆಯನ್ನು ಬೆಳೆಸಬೇಕೆಂದು ಸೂಚಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ರೇವಣ್ಣ ಮಾತನಾಡಿ, 10 ರಿಂದ 15 ವರ್ಷಗಳಿಂದ ಕಾಡುತ್ತಿದ್ದ ನೀರಿನ ಸಮಸ್ಯೆಯನ್ನು ಶಾಸಕರು ಸ್ವಂತ ಆಸಕ್ತಿ ವಹಿಸಿ ಪರಿಹರಿಸಿದ್ದಾರೆ. ಅಲ್ಲದೇ ಈ ಬಾರಿಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ 10 ಲಕ್ಷ ರು.ಗಳಿಗೂ ಅಧಿಕ ವೆಚ್ಚದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುತ್ತಿರುವ ತಾಲೂಕಿನ ಎಲ್ಲ ಶಾಲೆಗಳ 4,300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೈಪಿಡಿಯನ್ನು ಉಚಿತವಾಗಿ ವಿತರಿಸಿದ್ದಾರೆ. ಶಿಕ್ಷಣದ ಕುರಿತಾಗಿನ ಶಾಸಕರ ಕಾಳಜಿಗೆ ಜ್ವಲಂತ ಉದಾಹರಣೆಯಾಗಿದೆ. ಇಲಾಖೆ ಎಂದಿಗೂ ಶಾಸಕರಿಗೆ ಋಣಿಯಾಗಿದೆ ಎಂದರು.

ಶಾಲೆಯ ಉಪಪ್ರಾಂಶುಪಾಲೆ ಗೀತಾ, ಮುಖಂಡರಾದ ಶ್ರೀಧರ್, ಸತೀಶ್ ಪಾಪಣ್ಣ, ಎಸ್.ಡಿಎಂಸಿ ಅಧ್ಯಕ್ಷೆ ರಜನಿ, ಸತ್ಯಪ್ಪ, ಶ್ರೀನಿವಾಸ್, ನಗರಸಭಾ ಸದಸ್ಯರಾದ ಕೃಷ್ಣರಾಜ ಗುಪ್ತ, ಶರವಣ ಇದ್ದರು.

ಮುಗಿಲುಮುಟ್ಟಿದ ಅಭಿಮಾನಿಗಳ ಹರ್ಷ..

ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಲು ಶಾಸಕ ಜಿ.ಡಿ. ಹರೀಶ್ಗೌಡ ತಮ್ಮ ಅಭಿಮಾನಿಗಳಿಗೆ ಸೂಚಿಸಿದ್ದರು. ಅದರಂತೆ ಪಕ್ಷದ ಕಾರ್ಯತರು ಬುಧವಾರ ಬೆಳಗಿನಿಂದಲೇ ಪಟ್ಟಮದ ಗಣೇಶನ ಗುಡಿ ಬೀದಿಯ ಗಣಪತಿ ದೇವಾಲಯ, ಕನ್ನಿಕಾ ಪರಿಮೇಶ್ವರಿ, ಮುತ್ತುಮಾರಮ್ಮ ದೇವಾಲಯ, ಮಾಕಾಳಮ್ಮ, ಶ್ರೀ ಆಂಜಯೇಸ್ವಾಮಿ ದೇವಾಲಯ ಹೀಗೆ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ ಶಾಸಕರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಾರ್ವಜನಿಕ ಆಸ್ಪತೆಯಲ್ಲಿ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.

ಮೈಸೂರಿನ ಚಾಮುಂಡಿಬೆಟ್ಟಕ್ಕೆ ಸಕುಟುಂಬ ಸಮೇತ ಭೇಟಿ ದೇವಿಯ ದರ್ಶನ ಪಡೆದ ನಂತರ ಹುಣಸೂರಿಗೆ ಆಗಮಿಸಿದ ಶಾಸಕ ಜಿ.ಡಿ. ಹರೀಶ್ ಗೌಡ ಹುಣಸೂರು ಹೆಬ್ಬಾಗಿಲಿನಲ್ಲಿರುವ ಅರಸು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆ ವಿದ್ಯಾರ್ಥಿನಿಯರು ಶಾಸಕರ ಮೇಲೆ ಹೂಮಳೆಯನ್ನು ಸುರಿಸಿ ಸಂಭ್ರಮಿಸಿದರು. ಕುಟ್ಟಿ ಜಿಮ್ ಸಂಸ್ಥೆ ವತಿಯಿಂದ ಪಟ್ಟಣದ ಬಸ್ ನಿಲ್ದಾಣದ ಮುಂಭಾಗ ಸಾರ್ವಜನಿಕರಿಗೆ ಕೇಸರಿ ಬಾತ್ ಹಂಚಿ ಸಂಭ್ರಮಿಸಿದರು. ಮಧ್ಯಾಹ್ನದ ನಂತರ ಶಾಸಕರ ಮನೆಯ ಬಳಿ ಅಳವಡಿಸಿದ್ದ ಪೆಂಡಾಲ್ನಲ್ಲಿ ಸಾರ್ವಜನಿಕರಿಗೆ ಶುಭಾಷಯ ತಿಳಿಸಲು ಅವಕಾಶ ಕಲ್ಪಿಸಲಾಗಿತ್ತು. ಅಭಿಮಾನಿಗಳ ಉತ್ಸಾಹ ಮುಗಿಲು ಮುಟ್ಟಿತ್ತು. ಶಾಸಕರನ್ನು ಎಳೆದಾಡಿಕೊಂಡೇ ಹಾರ ತುರಾಯಿಗಳನ್ನು ಹಾಕುವ ಮೂಲಕ ಅಭಿಮಾನಿಗಳು ಸಂಭ್ರಮಿಸಿದರು.

ತಾಲೂಕಿನಲ್ಲಿ ಭೀಕರ ಬರಗಾಲ ಆವರಿಸಿರುವ ಹಿನ್ನೆಲೆ ಅಭಿಮಾನಿಗಳು ಹುಟ್ಟುಹಬ್ಬದ ಅಂಗವಾಗಿ ಕೇಕ್ ಕಟ್ ಮಾಡಲು ಕೇಕ್ ತಂದಾಗ ನಿರಾಕರಿಸಿದ ಶಾಸಕ ಸಂಭ್ರಮದ ಹುಟ್ಟುಹಬ್ಬ ಆಚರಣೆ ಬೇಡ. ಜನತೆ ಸಂಕಷ್ಟದಲ್ಲಿದ್ದು, ಸರಳವಾಗಿ ಆಚರಿಸಿರೆಂದು ತಿಳಿಹೇಳಿ ಕಳುಹಿಸಿದರು.

Follow Us:
Download App:
  • android
  • ios