ಗದಗ ಜಿಲ್ಲೆಯಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಅಭಾವ ತೀವ್ರಗೊಂಡಿದ್ದು, ಪ್ರಮುಖ ಬಂಕ್‌ಗಳು 'ನೋ ಸ್ಟಾಕ್' ಬೋರ್ಡ್ ಹಾಕಿವೆ. ಮುಂಗಾರು ಹಂಗಾಮಿನ ಹೊತ್ತಲ್ಲಿ ಡೀಸೆಲ್‌ಗಾಗಿ ರೈತರು ಪರದಾಡುತ್ತಿದ್ದು, ಹುಬ್ಬಳ್ಳಿ ಡಿಪೋದಿಂದ ಸರಬರಾಜು ಸ್ಥಗಿತಗೊಂಡಿರುವುದೇ ಈ ಬಿಕ್ಕಟ್ಟಿಗೆ ಕಾರಣ ಎನ್ನಲಾಗಿದೆ. ಈ ಸಮಸ್ಯೆಯು ನಗರದಿಂದ ಗ್ರಾಮೀಣ ಭಾಗಕ್ಕೂ ವ್ಯಾಪಿಸಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಗದಗ: ಗದಗ ಜಿಲ್ಲೆಯಾದ್ಯಂತ ಇಂಧನ ಅಭಾವ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಾರ್ವಜನಿಕರು ಹಾಗೂ ರೈತರು ಪೆಟ್ರೋಲ್ ಮತ್ತು ಡೀಸೆಲ್‌ಗಾಗಿ ತೀವ್ರ ಪರದಾಡುವಂತಾಗಿದೆ. ಒಂದು ಕಡೆ ದಿನೇ ದಿನೆ ಏರಿಕೆಯಾಗುತ್ತಿರುವ ಇಂಧನ ಬೆಲೆಯಿಂದ ಕಂಗಾಲಾಗಿದ್ದ ಜನರಿಗೆ, ಇದೀಗ ಜಿಲ್ಲೆಯ ಪ್ರಮುಖ ಪೆಟ್ರೋಲ್ ಬಂಕ್‌ಗಳು ಇಂಧನವಿಲ್ಲದೆ ಬಂದ್ ಆಗುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಜಿಲ್ಲೆಯಾದ್ಯಂತ ‘ನೋ ಸ್ಟಾಕ್’ (No Stock) ಶಾಕ್ ಎದುರಾಗಿದ್ದು, ವಾಹನ ಸವಾರರು ತೈಲಕ್ಕಾಗಿ ಅಲೆದಾಡುತ್ತಿದ್ದಾರೆ.

Add Asianetnews Kannada as a Preferred SourcegooglePreferred

ಗಜೇಂದ್ರಗಡದಲ್ಲಿ ಡೀಸೆಲ್ ಭೀತಿ: ಕ್ಯಾನ್ ಹಿಡಿದು ಮುಗಿಬಿದ್ದ ರೈತರು

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲೂ ಡೀಸೆಲ್ ಪಡೆಯಲು ಗ್ರಾಹಕರು ಮುಗಿಬಿದ್ದಿದ್ದಾರೆ. ಮಳೆಗಾಲದ ಮುನ್ನ ಮುಂಗಾರು ಹಂಗಾಮಿಗೆ ಜಮೀನು ಹದಗೊಳಿಸಲು ಟ್ರ್ಯಾಕ್ಟರ್‌ಗಳಿಗೆ ಡೀಸೆಲ್ ಸಂಗ್ರಹಿಸಿಟ್ಟುಕೊಳ್ಳಲು ರೈತರು ಮುಂದಾಗಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಡೀಸೆಲ್ ಸಂಪೂರ್ಣ ಖಾಲಿಯಾಗಲಿದೆ ಎಂಬ ಭೀಕರ ವದಂತಿ ಹರಡಿರುವ ಹಿನ್ನೆಲೆಯಲ್ಲಿ, ಗಜೇಂದ್ರಗಡ ಪಟ್ಟಣದ ಸುತ್ತಮುತ್ತಲಿನ ರಾಜೂರು, ಕಾಲಕಾಲೇಶ್ವರ ಸೇರಿದಂತೆ ಹಲವು ಹಳ್ಳಿಗಳ ರೈತರು ಟ್ರ್ಯಾಕ್ಟರ್‌ಗಳನ್ನು ಬಿಟ್ಟು ಕೇವಲ ಪ್ಲಾಸ್ಟಿಕ್ ಕ್ಯಾನ್‌ಗಳನ್ನು ಹಿಡಿದುಕೊಂಡು ಪೆಟ್ರೋಲ್ ಬಂಕ್‌ಗಳ ಮುಂದೆ ಜಮಾಯಿಸಿದ್ದಾರೆ.

ಗಜೇಂದ್ರಗಡ ಪಟ್ಟಣದಲ್ಲಿರುವ ಒಟ್ಟು 8 ಪೆಟ್ರೋಲ್ ಬಂಕ್‌ಗಳ ಪೈಕಿ ಸದ್ಯಕ್ಕೆ ಕೇವಲ 2 ಬಂಕ್‌ಗಳಲ್ಲಿ ಮಾತ್ರ ಅಲ್ಪಸ್ವಲ್ಪ ಇಂಧನ ಲಭ್ಯವಿದ್ದು, ಅಲ್ಲಿ ಕಿಲೋಮೀಟರ್‌ ಗಟ್ಟಲೆ ಸಾಲು ಕಂಡುಬಂದಿದೆ. ವಿಶೇಷವಾಗಿ ಕುಷ್ಟಗಿ ರಸ್ತೆಯ ರಾಯಬಾಗಿ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ರೈತರು ಕ್ಯಾನ್‌ಗಳ ಸಮೇತ ಸರದಿಸಾಲಿನಲ್ಲಿ ನಿಂತಿರುವುದು ಪರಿಸ್ಥಿತಿಯ ಗಂಭೀರತೆಗೆ ಕೈಗನ್ನಡಿಯಾಗಿದೆ.

ನಗರದ ಪ್ರಮುಖ ವೃತ್ತಗಳ ಬಂಕ್‌ಗಳು ಬಂದ್

ಕಳೆದ ಮೂರು ದಿನಗಳಿಂದಲೇ ಜಿಲ್ಲೆಯ ಕೆಲವು ಭಾಗಗಳಲ್ಲಿ ಕಾಣಿಸಿಕೊಂಡಿದ್ದ ಇಂಧನ ಕೊರತೆ, ಇದೀಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. ಗದಗ ನಗರದ ಅತ್ಯಂತ ಜನದಟ್ಟಣೆಯ ಪ್ರಮುಖ ವೃತ್ತಗಳಲ್ಲಿರುವ ಮೂರು ಪ್ರಮುಖ ಪೆಟ್ರೋಲ್ ಬಂಕ್‌ಗಳು ಸಂಪೂರ್ಣವಾಗಿ ಖಾಲಿಯಾಗಿವೆ. ನಗರದ ಮುಳಗುಂದ ನಾಕಾ, ಹಳೆಯ ಡಿಸಿ ಆಫೀಸ್ ಸರ್ಕಲ್ ಹಾಗೂ ಹೊಸ ಬಸ್ ನಿಲ್ದಾಣದ ಬಳಿ ಇರುವ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಸಂಪೂರ್ಣ ಖಾಲಿಯಾಗಿದೆ. ತೈಲ ಮುಗಿದ ಕಾರಣ ಬಂಕ್ ಸಿಬ್ಬಂದಿ ಮುಂಭಾಗದಲ್ಲೇ ‘ನೋ ಸ್ಟಾಕ್’ ಬೋರ್ಡ್ ತೂಗುಹಾಕಿದ್ದು, ಸವಾರರನ್ನು ವಾಪಸ್ ಕಳುಹಿಸುತ್ತಿದ್ದಾರೆ.

ಹುಬ್ಬಳ್ಳಿ ಡಿಪೋದಿಂದ ಸರಬರಾಜು ಸ್ಥಗಿತ?

ವಿಶ್ವಾಸಾರ್ಹ ಮೂಲಗಳ ಪ್ರಕಾರ, ಹುಬ್ಬಳ್ಳಿಯ ಮುಖ್ಯ ತೈಲ ಡಿಪೋದಿಂದ ಗದಗ ಜಿಲ್ಲೆಗೆ ಬರಬೇಕಾಗಿದ್ದ ಪೆಟ್ರೋಲ್ ಮತ್ತು ಡೀಸೆಲ್ ಸರಕು ಸಾಗಣೆ (ಸ್ಟಾಕ್) ಸಕಾಲಕ್ಕೆ ತಲುಪದ ಹಿನ್ನೆಲೆಯಲ್ಲಿ ಈ ತೀವ್ರ ಅಭಾವ ಸೃಷ್ಟಿಯಾಗಿದೆ ಎನ್ನಲಾಗಿದೆ. ಗದಗ ನಗರ ಮಾತ್ರವಲ್ಲದೆ, ಜಿಲ್ಲೆಯ ಪ್ರಮುಖ ಸಂಪರ್ಕ ರಸ್ತೆಗಳಾದ ಹುಬ್ಬಳ್ಳಿ ರಸ್ತೆ, ಕೊಪ್ಪಳ ರಸ್ತೆ ಹಾಗೂ ಬಾಗಲಕೋಟೆ ರಸ್ತೆಗೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿಯ ಬಂಕ್‌ಗಳಲ್ಲಿಯೂ ಇದೇ ಸಮಸ್ಯೆ ಎದುರಾಗಿದೆ. ಇದರಿಂದಾಗಿ ದೂರದ ಊರುಗಳಿಗೆ ಸಂಚರಿಸುವ ಲಾರಿ, ಬಸ್ ಹಾಗೂ ಅಗತ್ಯ ವಸ್ತುಗಳ ಸರಕು ಸಾಗಣೆ ವಾಹನಗಳ ಚಾಲಕರು ರಸ್ತೆಯಲ್ಲೇ ನಿಲ್ಲುವಂತಾಗಿದ್ದು, ಕಂಗಾಲಾಗಿದ್ದಾರೆ.

ಗ್ರಾಮೀಣ ಭಾಗಕ್ಕೂ ವ್ಯಾಪಿಸಿದ ಇಂಧನ ಗಂಡಾಂತರ

ಈ ಇಂಧನ ಅಭಾವದ ಬಿಸಿ ಕೇವಲ ನಗರ ಪ್ರದೇಶಕ್ಕಷ್ಟೇ ಸೀಮಿತವಾಗಿರದೆ, ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರಗಳಾದ ಶಿರಹಟ್ಟಿ, ಬೆಳ್ಳಟ್ಟಿ, ರೋಣ ಹಾಗೂ ನರಗುಂದ ಭಾಗಗಳಿಗೂ ವ್ಯಾಪಿಸಿದೆ. ಗ್ರಾಮೀಣ ಭಾಗದ ಸಾರ್ವಜನಿಕರು ತಾಲೂಕು ಕೇಂದ್ರಗಳಿಗೆ ಅಲೆಯುತ್ತಿದ್ದಾರೆ. ಕೃಷಿ ಚಟುವಟಿಕೆಗಳ ವೇಗ ಪಡೆದುಕೊಳ್ಳುವ ಈ ಪ್ರಮುಖ ಅವಧಿಯಲ್ಲೇ ಡೀಸೆಲ್ ಸಿಗದೆ ಇರುವುದು ರೈತರ ಆತಂಕವನ್ನು ದುಪ್ಪಟ್ಟು ಮಾಡಿದೆ.

ಸತತ ಮೂರು ದಿನಗಳಿಂದ ತೈಲ ಅಭಾವ ತಲೆದೋರಿರುವುದು ಮತ್ತು ಬಂಕ್‌ಗಳ ಮುಂದೆ ಸಾಲು ಸಾಲಾಗಿ ‘ನೋ ಸ್ಟಾಕ್’ ಬೋರ್ಡ್‌ಗಳು ಕಾಣಿಸುತ್ತಿರುವುದರಿಂದ ಸಾರ್ವಜನಿಕರಲ್ಲಿ ಮುಂದಿನ ದಿನಗಳಲ್ಲಿ ಇಂಧನ ಸಂಪೂರ್ಣ ಕೈಕೊಡಲಿದೆಯೇ ಎಂಬ ಭೀತಿ ಆವರಿಸಿದೆ. ಹೀಗಾಗಿ, ಸಿಕ್ಕ ಸಿಕ್ಕ ಬಂಕ್‌ಗಳ ಮುಂದೆ ಸವಾರರು ಗಂಟೆಗಟ್ಟಲೆ ಕ್ಯೂ ನಿಲ್ಲುತ್ತಿದ್ದಾರೆ. ಜಿಲ್ಲಾಡಳಿತ, ಸಂಬಂಧಪಟ್ಟ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಹಾಗೂ ತೈಲ ಕಂಪನಿಗಳು ತಕ್ಷಣವೇ ಮಧ್ಯಪ್ರವೇಶಿಸಿ ತೈಲ ಸರಬರಾಜನ್ನು ಸುಗಮಗೊಳಿಸಬೇಕೆಂದು ಸಾರ್ವಜನಿಕರು ಮತ್ತು ರೈತ ಸಂಘಟನೆಗಳು ತೀವ್ರ ಆಗ್ರಹ ಮಾಡಿವೆ.