ಕೊರೋನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ..!
ಕೋವಿಡ್ ಹೋರಾಡಲು ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲು ಮುಂದಾಗಿರುವ ತಿಪಟೂರಿನ ಕುಮಾರ್ ಆಸ್ಪತ್ರೆ| ವೈದ್ಯರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ| ರೋಗಿಗಳಿಗೆ ಬೆಡ್ ಸಿಗದೇ ಸಾವಿನ ಸಂಖ್ಯೆ ಕೂಡ ಗಣನೀಯವಾಗಿ ಏರುತ್ತಿದೆ| ಇಂತಹ ಕಾಲದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ: ಡಾ.ಕುಮಾರ್|
ತುಮಕೂರು(ಮೇ.01): ಒಂದು ಕಡೆ ರಾಕೇಟ್ ವೇಗದಲ್ಲಿ ಹಬ್ಬುತ್ತಿರುವ ಕೊರೋನಾಗೆ ಬೆಡ್, ಆಕ್ಸಿಜನ್ ಸಿಗದೇ ಸೋಂಕಿತರು ಪರದಾಡುತ್ತಿರುವ ಹೊತ್ತಲ್ಲಿ ಖಾಸಗಿ ಆಸ್ಪತ್ರೆಗಳು ಲಕ್ಷಾಂತರ ರು. ಹಣವನ್ನು ರೋಗಿಗಳಿಂದ ವಸೂಲಿ ಮಾಡುತ್ತಿರುವ ಬೆನ್ನಲ್ಲಿ ಇಲ್ಲೊಂದು ಖಾಸಗಿ ಆಸ್ಪತ್ರೆ ಕೋವಿಡ್ ರೋಗಿಗಳಿಗೆ ಉಚಿತ ಚಿಕಿತ್ಸೆ, ಊಟ ಎಲ್ಲವೂ ನೋಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ತುಮಕೂರು ಜಿಲ್ಲೆ ತಿಪಟೂರಿನ ಕುಮಾರ್ ಆಸ್ಪತ್ರೆಯ ಕುಮಾರ್ ಎಂಬುವರೇ ಕೋವಿಡ್ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ವೈದ್ಯೋ ನಾರಾಯಣ ಹರಿ ಎನಿಸಿದ್ದಾರೆ. ಕೊರೋನಾ ಎರಡನೇ ಅಲೆ ರಾಜ್ಯಾದ್ಯಂತ ವ್ಯಾಪಿಸುತ್ತಿದ್ದು, ಜಿಲ್ಲೆಯಲ್ಲೂ ಕೂಡ ಸೋಂಕಿತರ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಅಲ್ಲದೇ ರೋಗಿಗಳಿಗೆ ಬೆಡ್ ಸಿಗದೇ ಸಾವಿನ ಸಂಖ್ಯೆ ಕೂಡ ಗಣನೀಯವಾಗಿ ಏರುತ್ತಿದೆ. ಇಂತಹ ದುರಿತ ಕಾಲದಲ್ಲಿ ತಿಪಟೂರಿನ ಕುಮಾರ್ ಆಸ್ಪತ್ರೆಯು ಕೊರೋನಾ ರೋಗಿಗಳಿಗೆ ಅಮೃತದಂತೆ ಕಂಡು ಬರುತ್ತಿದೆ.
"
ಇರುವ 76 ರೋಗಿಗಳಿಗೂ ಚಿಕಿತ್ಸೆ ಉಚಿತ:
ತಿಪಟೂರಿನ ಹೆಸರಾಂತ ಕುಮಾರ್ ಆಸ್ಪತ್ರೆಯ ವೈದ್ಯ ಡಾ.ಶ್ರೀಧರ್ ತಮ್ಮ ಖಾಸಗಿ ಆಸ್ಪತ್ರೆಯಲ್ಲಿ ಉಚಿತವಾಗಿ ಕೊರೋನಾ ಪರೀಕ್ಷೆ ಹಾಗೂ ಉಚಿತವಾಗಿ ಚಿಕಿತ್ಸೆ ಸಹ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಸುಮಾರು 76 ಕೊರೋನಾ ರೋಗಿಗಳಿದ್ದು, ಉಚಿತವಾಗಿ ಅಷ್ಟೂರೋಗಿಗಳಿಗೆ ದಿನದ 24ಗಂಟೆ ಗಳಲ್ಲಿಯೂ ಟ್ರೀಟ್‌ಮೆಂಟ್ ಸಹ ನೀಡಲಾಗುತ್ತಿದೆ. ಅಷ್ಟೇ ಅಲ್ಲದೆ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಹಾಗೂ ಅವರ ಸಂಬಂಧಿಕರಿಗೆ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಊಟ, ರಾತ್ರಿ ಊಟವನ್ನು ಸಹ ನೀಡಲಾಗುತ್ತಿದೆ.
ಕೊರೋನಾಗೆ ತಾಯಿ ಬಲಿ: ಅಮ್ಮನ ಸಾವಿನ ಸುದ್ದಿ ಕೇಳಿ ಮಗಳೂ ಸಾವು
ಡಾ.ಶ್ರೀಧರ್ ಕಾರ್ಯಕ್ಕೆ ಮೆಚ್ಚುಗೆ
ಈ ಆಸ್ಪತ್ರೆಯಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಐಸಿಯು ರೋಗಿಗಳಿದ್ದು ನಲವತ್ತಕ್ಕೂ ಹೆಚ್ಚು ರೋಗಿಗಳಿಗೆ ಆಕ್ಸಿಜನ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ತಿಪಟೂರು ಹಾಗೂ ಸುತ್ತಮುತ್ತಲಿನ ಅರಸೀಕೆರೆ, ಚನ್ನರಾಯಪಟ್ಟಣ, ಹೊಸದುರ್ಗ, ಚಿಕ್ಕನಾಯಕನಹಳ್ಳಿ , ಹುಳಿಯಾರು, ತುರುವೇಕೆರೆ ಹಾಗೂ ಸುತ್ತಮುತ್ತಲಿನ ಮಂದಿ ಈ ಆಸ್ಪತ್ರೆಯಲ್ಲಿ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಮಾರ್ ಆಸ್ಪತ್ರೆಯ ವೈದ್ಯ ಡಾ.ಶ್ರೀಧರ್ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಇಂತಹ ಕಾಲದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ. ಮುಂದಿನ 15 ದಿವಸ ತುಂಬಾ ಕಷ್ಟಕರ ದಿವಸವಾಗಿದ್ದು, ಈ ಮಹಾಮಾರಿಯನ್ನು ಓಡಿಸಲು ನನ್ನ ಕೈ ಮೀರಿ ಕೆಲಸ ಮಾಡುತ್ತೇನೆ. ಈ ಕೆಲಸದಲ್ಲಿ ಎಲ್ಲರೂ ಒಟ್ಟಾಗಿ ಕೊರೋನಾವನ್ನು ಗೆಲ್ಲಬೇಕಾಗಿದೆ ಎಂದು ತಿಪಟೂರಿನ ಕುಮಾರ್ ಆಸ್ಪತ್ರೆ ವೈದ್ಯ ಡಾ.ಕುಮಾರ್ ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona