ಮೂಡಿಗೆರೆ (ಫೆ.17):  ಕಾಫಿ ಬೆಳೆಗಾರರ ಬೇಡಿಕೆಗನುಗುಣವಾಗಿ 10 ಎಚ್‌.ಪಿ. ಪಂಪ್‌ ಸೆಟ್‌ಗಳಿಗೆ ಉಚಿತ ವಿದ್ಯುತ್‌ ಜೊತೆಗೆ ನಿರಂತರ 3 ಫೇಸ್‌ ವಿದ್ಯುತ್‌ ಪೂರೈಕೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಒಪ್ಪಿಗೆ ನೀಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವಥ್‌ ನಾರಾಯಣ್‌ ಹೇಳಿದರು.

ಹಳಸೆ ಗ್ರಾಮದಲ್ಲಿ ನಿರ್ಮಿಸಿರುವ ನೂತನ ಅತಿಥಿ ಗೃಹವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಸಣ್ಣ ಕೈಗಾರಿಕೆಗಳಿಗೆ ಶೇ.5 ಬಡ್ಡಿದರದಲ್ಲಿ ಸಾಲ ನೀಡಿದಂತೆ ಕಾಫಿ ಬೆಳೆಗಾರರಿಗೂ ಶೇ.5 ಬಡ್ಡಿ ದರದಲ್ಲಿ ಬ್ಯಾಂಕ್‌ ಮೂಲಕ ಸಾಲ ನೀಡಲಾಗುವುದು. ಕಾಫಿ ಬೆಳೆಯುವ ಗ್ರಾಮಗಳಲ್ಲಿ ಇಂಟರ್‌ನೆಟ್‌ ಸೌಲಭ್ಯ ಲಭ್ಯವಿರುವಂತೆ ಆಧುನಿಕ ತಂತ್ರಜ್ಞಾನ ವ್ಯವಸ್ಥೆ ಮಾಡಲಾಗುವುದು. ಶಿಕ್ಷಣ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುವುದು. ಕೌಶಲ್ಯಅಭಿವೃದ್ಧಿ ಯೋಜನೆ ಮೂಲಕ ತಾಲೂಕಿನ ಜನ್ನಾಪುರ ಗ್ರಾಮದ ಹೊಯ್ಸಳ ವಿದ್ಯಾಪೀಠದ 15 ಎಕರೆ ಜಾಗದಲ್ಲಿ ಸ್ಕಿಲ್‌ ಪಾರ್ಕ್ ನಿರ್ಮಿಸಿ ಸ್ಥಳೀಯರಿಗೆ ಉದ್ಯೋಗ ದೊರಕುವಂತೆ ಮಾಡಲಾಗುವುದು ಎಂದು ತಿಳಿಸಿದರು.

ರಾಜ್ಯದ ಜನರಿಗೆ ಶಾಕ್, ಸದ್ದಿಲ್ಲದೆ ಮತ್ತೆ ವಿದ್ಯುತ್‌ ದುಬಾರಿ: ಜನ ಕಂಗಾಲು! ...

ರಾಜ್ಯದಲ್ಲಿ ವಿವಿಧ ಕೈಗಾರಿಕೆ ಮೂಲಕ ಬಂಡವಾಳದ ಮೂಲ ಉದ್ಯಮ ಸ್ಥಾಪಿಸಿ ಮುಂದಿನ ಒಂದು ವರ್ಷದಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿಸಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಜನ ಗುಣಮಟ್ಟದ ಮೌಲ್ಯಾಧಾರಿತ ಜೀವನ ನಡೆಸುವಂತಾಗಲು ಸರ್ಕಾರದ ಮಟ್ಟದಲ್ಲಿ ಎಲ್ಲಾ ರೀತಿಯ ಪ್ರೋತ್ಸಾಹ ದೊರಕಿಸಿ ಕೊಡಲು ಮುಂದಾಗಿರುವುದಾಗಿ ತಿಳಿಸಿದರು.

ವಿಧಾನಪರಿಷತ್‌ ಉಪ ಸಭಾಪತಿ ಎಂ.ಕೆ ಪ್ರಾಣೇಶ್‌ ಮಾತನಾಡಿ, ಬೆಳೆಗಾರರು ತೋಟಕ್ಕೆ ನೀರು ಹಾಯಿಸುವ 10 ಎಚ್‌.ಪಿ. ಪಂಪ್‌ ಸೆಟ್‌ ವರೆಗೆ ಉಚಿತ ವಿದ್ಯುತ್‌ ಪೂರೈಕೆ ಮಾಡಬೇಕು. ಕೌಶಲ್ಯಾಭಿವೃದ್ಧಿ ಯೋಜನೆಯಲ್ಲಿ ಜನ್ನಾಪುರದಲ್ಲಿ ಸ್ಕಿಲ್‌ ಪಾರ್ಕ್ ನಿರ್ಮಾಣ ಮಾಡಬೇಕು. ಕಾಫಿ ಬೆಳೆಗಾರರು ಎದುರಿಸುತ್ತಿರುವ ಕಾಡು ಪ್ರಾಣಿ ಹಾವಳಿ ತಡೆಗಟ್ಟುವ ಜೊತೆಗೆ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಪ್ರತಿವರ್ಷ ಡಿಸೆಂಬರ್‌ನಿಂದ 6 ತಿಂಗಳು ರೈತರು ತಮ್ಮ ಬೆಳೆ ಕಟಾವು ಮಾಡುವ ಕಾಲವಾಗಿದೆ. ಈ ವೇಳೆ ನಿರಂತರ 3 ಫೇಸ್‌ ವಿದ್ಯುತ್‌ ಒದಗಿಸಬೇಕು. 25 ಲಕ್ಷ ಕಾರ್ಮಿಕರ ಬದುಕು ಕಾಫಿ ತೋಟದಲ್ಲಿದೆ. ಅವರಿಗೆ ಜೀವನ ನಡೆಸಲು ಅನುಕೂಲವಾಗಬೇಕಾದರೆ ಬೆಳೆಗಾರರು ಸಂಕಷ್ಟದಿಂದ ಪಾರಾಗಬೇಕಾಗಿದೆ ಎಂದರು.

ಡಿ.ಬಿ.ಜಯಪ್ರಕಾಶ್‌ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಬಿ.ಬಿ.ನಿಂಗಯ್ಯ, ವಿಧಾನ ಪರಿಷತ್‌ ಮಾಜಿ ಸದಸ್ಯ ಎಸ್‌.ವಿ.ಮಂಜುನಾಥ್‌, ತಾಲೂಕು ಬೆಳಗಾರರ ಸಂಘದ ಅಧ್ಯಕ್ಷ ಬಿ.ಆರ್‌.ಬಾಲಕೃಷ್ಣ, ಕಾಫಿ ಬೆಳೆಗಾರರಾದ ಹಳಸೆ ಶಿವಣ್ಣ, ದಿನೇಶ್‌ ದೇವವೃಂದ, ದೀಪಕ್‌ ಉಪಸ್ಥಿತರಿದ್ದರು.