ಕೊಪ್ಪಳದಲ್ಲಿ ಸಹಸ್ರಾರು ಅಸ್ತಮಾ ರೋಗಿಗಳಿಗೆ ಉಚಿತ ಔಷಧಿ

*  ನೆರೆಯ ಆಂಧ್ರ, ತಮಿಳನಾಡು, ಮಹಾರಾಷ್ಟ್ರದಿಂದ ಬಂದಿದ್ದ ಅಸ್ತಮಾ ರೋಗಿಗಳು
*  ಕೊಪ್ಪಳ ತಾಲೂಕಿನ ಕುಟುಗನಳ್ಳಿ ಗ್ರಾಮದಲ್ಲಿ ಔಷಧಿ ಹಸ್ತಾಂತರ
*  ಔಷಧಿ ವಿತರಣೆ ಮಾಡುವ ಅಶೋಕ ಕುಲಕರ್ಣಿ
 

Free Medicine for Asthma Patients in Koppal grg

ಕೊಪ್ಪಳ(ಜೂ.09):  ತಾಲೂಕಿನ ಕುಟುಗನಳ್ಳಿ ಗ್ರಾಮದಲ್ಲಿ ಸಹಸ್ರಾರು ಅಸ್ತಮಾ ರೋಗಿಗಳಿಗೆ ಉಚಿತ ಔಷಧಿ ಬುಧವಾರ ಸಂಜೆ ವಿತರಿಸಲಾಯಿತು. ಔಷಧಿ ಪಡೆಯಲು ನೆರೆಯ ಆಂಧ್ರ, ತಮಿಳನಾಡು ಹಾಗು ಮಹಾರಾಷ್ಟ್ರದಿಂದಲೂ ಅಪಾರ ಜನರು ಆಗಮಿಸಿದ್ದರು. ಅಶೋಕ ಕುಲಕರ್ಣಿ ಎನ್ನುವವರು ಔಷಧಿ ವಿತರಣೆ ಮಾಡುತ್ತಾರೆ. ಅವರ ಕುಟುಂಬದವರು ತಲೆತಲಾಂತರದಿಂದ ಔಷಧಿ ವಿತರಿಸುತ್ತಾ ಬಂದಿದ್ದು, ಈಗಲೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಸಾವಿರಾರು ಸಂಖ್ಯೆಯಲ್ಲಿ ಮಧ್ಯಾಹ್ನದಿಂದಲೇ ಕುಟುಗನಳ್ಳಿ ಗ್ರಾಮಕ್ಕೆ ಆಗಮಿಸಿದ ಅಸ್ತಮಾ ರೋಗಿಗಳು ನಿಗದಿ ಮಾಡಿದ್ದ ಗ್ರಾಮದ ಜಾಗೆಯಲ್ಲಿ ಸೇರಿದ್ದರು. ಮಧ್ಯಾಹ್ನ 12 ಗಂಟೆಯಿಂದ ಇವರಿಗೆ ಔಷಧಿ ವಿತರಿಸಲಾಯಿತು. ಹೀಗೆ ವಿತರಿಸಿದ್ದ ಔಷಧಿಯನ್ನು ಮೃಗಶಿರ ಮಳೆ ಮುಗಿಯುವುದರೊಳಗೆ ತೆಗೆದುಕೊಳ್ಳಬೇಕು.

Dakshina kannada ಅಶಕ್ತರಿಗೆ ಶಾಶ್ವತ ಉಚಿತ ಔಷಧಿ ವಿತರಣೆ

ರೋಗ ನಿವಾರಣೆ ನಂಬಿಕೆ:

ಇಲ್ಲಿ ಕೊಡುವ ಔಷಧಿ ಸ್ವೀಕಾರ ಮಾಡುವುದರಿಂದ ಅಸ್ತಮಾ ರೋಗ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಜನರಲ್ಲಿದೆ. ಸತತವಾಗಿ ಮೂರು ವರ್ಷ ಔಷಧಿ ಸ್ವೀಕರಿಸಬೇಕು. ಒಂದಿಷ್ಟುಆಹಾರ ಪಥ್ಯಗಳ ಸೂಚನೆ ನೀಡಲಾಗುತ್ತದೆ. ಅವುಗಳನ್ನು ಪಾಲನೆ ಮಾಡಬೇಕು. ಹೀಗೆ ಬಂದು ಔಷಧಿಯನ್ನು ಸ್ವೀಕಾರ ಮಾಡಿದ ಮಹಾರಾಷ್ಟ್ರದ ಶಿವರಾಜ ಗುಣಮುಖವಾಗಿದೆ ಎನ್ನುತ್ತಾನೆ.

ನಮ್ಮ ಮನೆಯವರೆಲ್ಲರಿಗೂ ಅಸ್ತಮಾ ಸಮಸ್ಯೆ ಇದೆ. ಇಲ್ಲಿ ಬಂದು ಔಷಧಿ ತೆಗೆದುಕೊಂಡು ಹೋದ ಮೇಲೆ ಗುಣಮುಖವಾಗಿರುವುದರಿಂದ ಇಲ್ಲಿಗೆ ಬಂದು ಔಷಧಿ ತೆಗೆದುಕೊಂಡು ಹೋಗುತ್ತೇನೆ ಎನ್ನುತ್ತಾನೆ.

ಇದೊಂದು ಸೇವೆ

ಅಸ್ತಮಾ ರೋಗಿಗಳಿಗೆ ಔಷಧಿ ನೀಡುವುದು ಒಂದು ಸೇವೆಯಾಗಿದೆ. ಇದಕ್ಕಾಗಿ ನಾವು ಹಣ ಪಡೆಯುವುದಿಲ್ಲ. ಕುಟುಂಬದ ಹಿರಿಯರು ಮಾಡಿಕೊಂಡು ಬಂದಿರುವುದನ್ನು ಮುಂದುವರೆಸುತ್ತೇವೆ. ಹತ್ತಾರು ವರ್ಷಗಳ ಹಳೆಯ ಬೆಲ್ಲದಲ್ಲಿ ಇದನ್ನು ತಯಾರು ಮಾಡಲಾಗುತ್ತದೆ. ಒಂದಿಷ್ಟು ಔಷಧಿಯ ಗುಣಗಳನ್ನು ಸೇರಿಸಿ ಸಿದ್ಧ ಮಾಡಿದ ಗುಳಿಗೆಯನ್ನು ನೀಡಲಾಗುತ್ತದೆ. ಗುಣಮುಖರಾಗುತ್ತಾರೆ ಎನ್ನುವುದೇ ನಮಗೆ ಸಂತೋಷದ ಸಂಗತಿ ಎನ್ನುತ್ತಾರೆ ಅಶೋಕ ಕುಲಕರ್ಣಿ.

110 ಅಸ್ತಮಾ ರೋಗಿಗಳಿಗೆ ಉಚಿತ ಔಷಧಿ ವಿತರಣೆ

ಕನಕಗಿರಿ:  ಬುಧವಾರ ಮೃಗಶಿರ ಮಳೆ ಕೂಡುವ ಸಮಯದಲ್ಲಿ ಪಟ್ಟಣದ ಸುವರ್ಣಗಿರಿ ಸಂಸ್ಥಾನ ವಿರಕ್ತ ಮಠದಲ್ಲಿ 110 ಅಸ್ತಮಾ ರೋಗಿಗಳಿಗೆ ಉಚಿತ ಔಷಧಿ ವಿತರಿಸಲಾಯಿತು. ಈ ಕುರಿತು ಡಾ. ಚನ್ನಮಲ್ಲಶ್ರೀ ಮಾತನಾಡಿ, ಕೊರೋನಾ ಹಿನ್ನೆಲೆ ಕಳೆದ ವರ್ಷ ಅಸ್ತಮಾ ರೋಗಿಗಳಿಗೆ ಔಷಧಿ ವಿತರಿಸಲಾಗಿರಲಿಲ್ಲ. ಈ ಬಾರಿ ಅಸ್ತಮಾ ರೋಗಿಗಳಿಗೆ ಶ್ರೀಮಠದಿಂದ ಔಷಧಿ ವಿತರಿಸಲಾಗಿದೆ ಎಂದರು.

30 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ: ಸಚಿವ ಹಾಲಪ್ಪ ಆಚಾರ್‌

ಡಾ. ಬಸವರಾಜ ಹಿರೇಮಠ ಮಾತನಾಡಿ, ಅಸ್ತಮಾ ದೊಡ್ಡ ರೋಗವಲ್ಲ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಮಾತ್ರ ರೋಗ ನಿಯಂತ್ರಣವಾಗಲಿದೆ. ಮೃಗಶಿರ ಮಳೆ ಕೂಡುವ ಸಮಯದಲ್ಲಿ ಔಷಧಿ ತೆಗೆದುಕೊಂಡ ಬಹುತೇಕ ರೋಗಿಗಳು ಅಸ್ತಮಾದಿಂದ ಗುಣಮುಖರಾಗಿದ್ದಾರೆ ಎಂದರು.

ಗದಗ, ಬಾಗಲಕೋಟೆ, ಕೊಪ್ಪಳ, ರಾಯಚೂರು ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ರೋಗಿಗಳು ಆಗಮಿಸಿದ್ದರು. ಇನ್ನೂ ಕಾರ್ಯಕ್ರಮದ ನಂತರ ಭಕ್ತರ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಘಟಪ್ರಭಾದ ಡಾ. ಮಲ್ಲಿಕಾರ್ಜುನ ಸ್ವಾಮಿಗಳು, ನರಗುಂದದ ಶಿವಕುಮಾರ ಶ್ರೀ, ಹುಕ್ಕೇರಿಯ ಶಿವಬಸವ ಶ್ರೀ ಮತ್ತು ತೇಲಸಂಗದ ವೀರೇಶ ದೇವರು ಸಾನ್ನಿಧ್ಯ ವಹಿಸಿದ್ದರು. ಚಂದ್ರಶೇಖರಯ್ಯ ಗಂಗಾಧರಮಠ, ಶಿಕ್ಷಕ ಶಿವರೆಡ್ಡಿ, ವೀರೇಶ ಬಳಿಗೇರ ಹಾಗೂ ಮಠದ ಭಕ್ತರು ಇತರರು ಇದ್ದರು.
 

Latest Videos
Follow Us:
Download App:
  • android
  • ios