Asianet Suvarna News Asianet Suvarna News

ಈ ಹೋಟೆಲ್‌ ಗ್ರಾಹಕರಿಗೆಲ್ಲ ಉಚಿತ ಉಪಹಾರ!

ಈ ಹೋಟೆಲ್‌ನಲ್ಲಿ ಉಚಿತವಾಗಿ ಊಟ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಏನಿದರ ವಿಶೇಷ..?

Free Meal to People For Kannada Rajyotsava in This Mudabidri Hotel snr
Author
Bengaluru, First Published Nov 2, 2020, 3:35 PM IST

ವರದಿ : ಗಣೇಶ ಕಾಮತ್‌

 ಮೂಡುಬಿದಿರೆ (ನ.02):  ಕನ್ನಡಾಭಿಮಾನ ಹೀಗೆಯೇ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಮಂಗಳೂರು-ಮೂಡುಬಿದಿರೆ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಮಿಜಾರಿನ ಹೋಟೆಲ್‌ ಮಾಲೀಕರೋರ್ವರು ರಾಜ್ಯೋತ್ಸವದ ದಿನ ತನ್ನ ಹೊಟೆಲ್‌ಗೆ ಬಂದ ಗ್ರಾಹಕರಿಗೆಲ್ಲ ಉಚಿತ ಉಪಹಾರ ನೀಡಿ ಸಂಭ್ರಮಿಸಿದ್ದಾರೆ.

ಮಿಜಾರಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬಳಿ ಶ್ರೀ ಕೃಷ್ಣ ಎಂಬ ಹೆಸರಿನ ಹೊಟೇಲ್‌ ನಡೆಸುತ್ತಿರುವ ಅಮ್ಮಿಯಣ್ಣ ಎಂದೇ ಜನಪ್ರಿಯರಾದ ರಘುವೀರ, ಭಾನುವಾರ ತನ್ನ ಹೊಟೇಲ್‌ಗೆ ಬಂದ ಗ್ರಾಹಕರಿಗೆ ಹೊಟ್ಟೆತುಂಬುವಂತೆ ಉಪಚರಿಸಿ, ‘ಕ್ಷಮಿಸಿ ಇಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಉಚಿತ ಸೇವೆ’ ಎಂದು ಅವರೆಲ್ಲರನ್ನೂ ಅಚ್ಚರಿಗೆ ಕೆಡವಿದ್ದಾರೆ.

ಈ ವರ್ಷ ರಜತ ಸಂಭ್ರಮದಲ್ಲಿರುವ ತನ್ನ ಹೊಟೇಲ್‌ನಲ್ಲಿ ಕಳೆದ ಐದಾರು ವರ್ಷಗಳಿಂದ ಕನ್ನಡ ರಾಜ್ಯೋತ್ಸವದಂದು ಮಧ್ಯಾಹ್ನ 1 ಗಂಟೆ ವರೆಗೂ ಉಚಿತ ಉಪಹಾರ ಸೇವೆ ನಡೆಸುತ್ತಾರೆ. ಅಮ್ಮಿಯಣ್ಣನ ಈ ನಿಲುವಿಗೆ ಊರ, ಪರವೂರ ಗ್ರಾಹಕರು ಮನಸೋತಿದ್ದಾರೆ. ಸ್ವತಃ ಮಂಗಳೂರು ಉತ್ತರ ಶಾಸಕ ಭರತ್‌ ಶೆಟ್ಟಿ, ಈ ಕನ್ನಡಾಭಿಮಾನಿಯ ಸೇವೆಯ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ. ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌ ತನ್ನ ಹೋಟೆಲ್‌ನ ಕಾಯಂ ಗಿರಾಕಿ. ಊರಿನವರ ಬೆಂಬಲವೇ ತನ್ನನ್ನು ಬೆಳೆಸಿದೆ ಎನ್ನುತ್ತಾರೆ ಅಮ್ಮಿಯಣ್ಣ.

ಆರೋಗ್ಯಕರ ಸಸ್ಯ ಬೆಳೆಯಲು ಅವಧಿ ಮೀರಿದ ಹಾಲು: ಬಳಸೋದು ಹೇಗೆ..? ..

ಹೆದ್ದಾರಿ ಪಕ್ಕದ ಪುಟ್ಟಗ್ರಾಮ ಮಿಜಾರಿಗೆ ಒಂದೇ ಎಂಬಂತಿರುವ ಈ ಹೋಟೆಲ್‌ನಲ್ಲಿ ಬಾಣಸಿಗ, ಸಪ್ಲೈಯರ್‌, ಕ್ಯಾಶಿಯರ್‌, ಕ್ಲೀನರ್‌ ಎಲ್ಲ ಪಾತ್ರಗಳ ನಿರ್ವಹಣೆ ಮಾಡುವುದು ಅಮ್ಮಿಯಣ್ಣ ಒಬ್ಬರೇ! ಕಷ್ಟಗಳ ನಡುವೆಯೇ ಬದುಕು ಅರಳಿಸಿಕೊಂಡು ಬಾಲ್ಯದಲ್ಲಿ ಮಂಡ್ಯದ ಹೊಟೇಲ್‌ ಒಂದರಲ್ಲಿ ಕಾರ್ಮಿಕನಾಗಿ ದುಡಿದು ಜೀವನ ಪಾಠ ಕಲಿತವರು. ಕಷ್ಟಗಳ ನಡುವೆಯೂ ದಣಿವರಿಯದೇ ದುಡಿದು ಮಕ್ಕಳಿಬ್ಬರಿಗೂ ಉನ್ನತ ಶಿಕ್ಷಣ ನೀಡಿರುವ ಅಮ್ಮಿಯಣ್ಣ, ಕಳೆದ ಲಾಕ್‌ಡೌನ್‌ ಸಮಯದಲ್ಲಿ ಸಹಾಯಕ್ಕೆ ಮುಂದಾದವರಿಂದಲೂ ಏನನ್ನೂ ಸ್ವೀಕರಿಸದ ಸ್ವಾಭಿಮಾನಿ. ಹಾಗೆಂದು ಸಂಕಷ್ಟದಲ್ಲಿರುವವರನ್ನು ಕಂಡಾಗ ಯಾವುದೇ ಪ್ರಚಾರ ಬಯಸದೇ ಕೈಲಾದಷ್ಟುಕೊಟ್ಟು ಬಂದ ಮಹಾನುಭಾವ.

Follow Us:
Download App:
  • android
  • ios