Asianet Suvarna News Asianet Suvarna News

Chikkaballapura ಶೀಘ್ರವೇ ಕ್ಷೇತ್ರದ 22 ಸಾವಿರ ಕುಟುಂಬಗಳಿಗೆ ಉಚಿತ ನಿವೇಶನ: ಸಚಿವ ಡಾ.ಕೆ. ಸುಧಾಕರ್

ಮುಂದಿನ ಎರಡೂವರೆ ತಿಂಗಳಲ್ಲಿ ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದ 22 ಸಾವಿರ ವಸತಿ ರಹಿತ ಕುಟುಂಬಗಳಿಗೆ ಉಚಿತವಾಗಿ ನಿವೇಶನಗಳನ್ನು ವಿತರಿಸುವ ಮೂಲಕ ರಾಜ್ಯದಲ್ಲಿ ದಾಖಲೆಯಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಘೋಷಿಸಿದರು.

Free land for 22 thousand families of  Chikkaballapura says Minister Sudhakar gow
Author
First Published Dec 16, 2022, 6:43 PM IST

ವರದಿ: ರವಿಕುಮಾರ್ ವಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಬಳ್ಳಾಪುರ (ಡಿ.16): ಮುಂದಿನ ಎರಡೂವರೆ ತಿಂಗಳಲ್ಲಿ ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದ 22 ಸಾವಿರ ವಸತಿ ರಹಿತ ಕುಟುಂಬಗಳಿಗೆ ಉಚಿತವಾಗಿ ನಿವೇಶನಗಳನ್ನು ವಿತರಿಸುವ ಮೂಲಕ ರಾಜ್ಯದಲ್ಲಿ ದಾಖಲೆಯಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಘೋಷಿಸಿದರು. ಚಿಕ್ಕಬಳ್ಳಾಪುರ ತಾಲೂಕಿನ ದೊಡ್ಡಮರಳಿ ಗ್ರಾಮದಲ್ಲಿ ಗ್ರಾಪಂ ಕಟ್ಟಡಕ್ಕೆ ಶಿಲಾನ್ಯಾಸ, ಗೋದಾಮು ಕಟ್ಟಡದ ಉದ್ಘಾಟನೆ ಹಾಗೂ ಸ್ತ್ರೀ  ಶಕ್ತಿ ಸಂಘಗಳಿಗೆ ಬಡ್ಡಿ ರಹಿತ ಸಾಲದ ಚೆಕ್ ವಿತರಿಸಿದ ನಂತರ ಮಾತನಾಡಿದ ಅವರು, ಕೊಟ್ಟ ಮಾತಿನಂತೆ ಕೆರೆಗಳನ್ನು ತುಂಬಿಸಲಾಗಿದೆ, ರೈತರಿಗೆ ಇದರಿಂದ ಸಾಕಷ್ಟು ಅನುಕೂಲವಾಗಿದ್ದು, ರೈತರಿಗೆ ಆಸರೆಯಾಗುವ ಮತ್ತೊಂದು ಯೋಜನೆ ಎತ್ತಿನಹೊಳೆ ಮುಂದಿನ ಒಂದು ವರ್ಷದಲ್ಲಿ ಅನುಷ್ಠಾನ ಮಾಡುವುದಾಗಿ ಸಚಿವರು ಭರವಸೆ ನೀಡಿದರು.

ಎತ್ತಿನಹೊಳೆ ಅನುದಾನ 23 ಸಾವಿರ ಕೋಟಿಗೆ ಹೆಚ್ಚಳ: ಎತ್ತಿನಹೊಳೆ ಯೋಜನೆ ಅನುದಾನ ಈ ಹಿಂದೆ 13 ಸಾವಿರ ಕೋಟಿ ಇದ್ದು, ಇತ್ತೀಚಿಗೆ ನಡೆದ ಸಚಿವ ಸಂಪುಟಸಭೆಯಲ್ಲಿ ಅದನ್ನು ಪರಿಷ್ಕರಣೆ ಮಾಡಿ 23 ಸಾವಿರ ಕೋಟಿಗೆ ಏರಿಸಲಾಗಿದೆ. ಅಂದರೆ 10 ಸಾವಿರ ಕೋಟಿಗೂ ಹೆಚ್ಚು ಅನುದಾನ ಹೆಚ್ಚಳವಾಗಿದೆ. ಎತ್ತಿನಹೊಳೆ ಯೋಜನೆಯಿಂದ ಪ್ರತಿ ಕೆರೆಗೆ ಶುದ್ಧ ನೀರು ತರುವುದು ನೂರಕ್ಕೆ ನೂರು ಸತ್ಯ ಎಂದು ಸಚಿವರು ಘೋಷಿಸಿದರು.

ಪರಿಶಿಷ್ಟ ಪಂಗಡಕ್ಕೆ ಶೇ.4 ಮತ್ತು ಪರಿಶಿಷ್ಟ ಜಾತಿಯವರಿಗೆ ಶೇ.2ರಷ್ಟು ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಅಲ್ಲದೆ ಒಳ ಮೀಸಲಾತಿಗಾಗಿ ಸಂಪುಟ ಉಪ ಸಮಿತಿ ರಚನೆ ಮಾಡಲಾಗಿದ್ದು, ಇದರಲ್ಲಿ ತಾವೂ ಸದಸ್ಯರಾಗಿರುವುದು ಸಂತಸ ತಂದಿದೆ. ಸರ್ಕಾರ ಸಾಮಾಜಿಕ ನ್ಯಾಯ, ಸಮಾನತೆ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂಬುದಕ್ಕೆ ಈ ಬೆಳವಣಿಗೆಯೇ ಸಾಕ್ಷಿಯಾಗಿವೆ ಎಂದರು.

ಹೆಚ್ಚುವರಿ ವಸತಿ ತರಲಾಗಿದೆ: ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಮನೆಗಳನ್ನು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ತರಲಾಗಿದೆ. ಪ್ರತಿ ಗ್ರಾಪಂಗೆ 100 ಮನೆ ಹೆಚ್ಚುವರಿಯಾಗಿ ತರಲಾಗಿದೆ. ಪ್ರಸ್ತುತ 4,500 ಮನೆಗಳನ್ನು ಕ್ಷೇತ್ರಕ್ಕೆ ಮಂಜೂರು ಮಾಡಿದ್ದು, ಇವೆಲ್ಲವೂ ಸಾಮಾನ್ಯರಿಗೆ ವಿತರಿಸುವ ಮನೆಗಳಾಗಿವೆ. ಗ್ರಾಮೀಣ ಪ್ರದೇಶದಲ್ಲಿ 12 ಸಾವಿರ ನಿವೇಶನಗಳು ಮತ್ತು ನಗರ ಪ್ರದೇಶದಲ್ಲಿ 5 ಸಾವಿರ ನಿವೇಶನಗಳನ್ನು ಶೀಘ್ರದಲ್ಲಿಯೇ ಹಂಚಿಕೆ ಮಾಡಲಾಗುವುದು ಎಂದು ಸಚಿವರು ಹೇಳಿದರು.

ಮಂಚೇನಹಳ್ಳಿ ನೂತನ ತಾಲೂಕು ಆಗಿದ್ದು, ಈ ವ್ಯಾಪ್ತಿಯಲ್ಲಿ ಬರೋಬ್ಬರಿ 7 ಸಾವಿರ ನಿವೇಶನಗಳ ವಿತರಣೆ ಮಾಡಲಾಗುವುದು. ಮುಂದಿನ ಎರಡೂವರೆ ತಿಂಗಳಲ್ಲಿ 22 ಸಾವಿರ ಕುಟುಂಬಗಳಿಗೆ ಉಚಿತ ನಿವೇಶನ ವಿತರಿಸಲಾಗುವುದು. ಇದು ಬಡವರ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಇರುವ ಕಾಳಜಿಯಾಗಿದ್ದು, ರೈತಪರ, ಮಹಿಳಾಪರ ಮತ್ತು ವಿದ್ಯಾರ್ಥಿಪರವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದು ಸರ್ವರ ಅಭಿವೃದ್ಧಿ ಮತ್ತು ಸಮಾನತೆಗಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.

 ದೇಶದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನ:  ದೇಶದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನ ನೀಡಲಾಗಿದೆ, ಪವಿತ್ರವಾದ ಎಲ್ಲ ನದಿಗಳೂ ಮಹಿಳೆಯರ ಹೆಸರಿನಲ್ಲಿವೆ. ದೇಶದ 54ಕ್ಕೂ ಹೆಚ್ಚು ಶಕ್ತಿಪೀಠಗಳು ಪಾರ್ವತಿಯ ರೂಪದಲ್ಲಿ ಪೂಜಿಸಲಾಗುತ್ತಿದೆ. ಸಮಾಜದಲ್ಲಿ ಪುರುಷರಿಗೆ ಸಮಾನವಾಗಿ ಮಹಿಳೆಯರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವುದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಗುರಿಯಾಗಿದೆ. ಅದು ಕೇವಲ ಭಾಷಣಕ್ಕೆ ಸೀಮಿತವಾಗದೆ, ಅನುಷ್ಠಾನ ಮಾಡಲಾಗುತ್ತಿದೆ ಎಂದು ಹೇಳಿದರು.

ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಪ್ರತಿಯೊಬ್ಬರೂ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದಾರೆ, ಸರ್ಕಾರದ ಯಾವುದೇ ಯೋಜನೆಯ ಹಣ ನೇರವಾಗಿ ಖಾತೆಗೆ ವರ್ಗಾವಣೆಯಾಗುತ್ತಿದೆ, ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯಗಳು ಶೇ.80 ರಷ್ಟು ಮಂದಿಗೆ ಇರಲಿಲ್ಲ, ಪ್ರಧಾನಿಯವರು ಇದನ್ನು ಮನಗಂಡು ಸ್ವಚ್ಛ ಭಾರತ್ ಯೋಜನೆಯಡಿ ಸುಮಾರು 12 ಕೋಟಿ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ. ಇದರಿಂದ ಮಹಿಳೆಯರು ಗೌರವ, ಸ್ವಾಭಿಮಾನ ಕಾಪಾಡಿದಂತಾಗಿದೆ ಎಂದರು.

 ಉಜ್ವಲ ಯೋಜನೆ ಸಹಕಾರಿ: ಕಾಡಿನಿಂದ ಸೌದೆ ಆರಿಸಿ ತರುವ ಸಂಕಷ್ಟಕರ ಪರಿಸ್ಥಿತಿಯನ್ನು ದೂರ ಮಾಡಿ, ಉಚಿತ ಅಡುಗೆ ಅನಿಲ ನೀಡಲಾಗಿದೆ. ಉಜ್ವಲ ಯೋಜನೆಯಡಿ ಪ್ರತಿ ಮನೆಗೂ ಉಚಿತವಾಗಿ ಸಿಲಿಂಡರ್, ಸ್ಟೌವ್  ನೀಡಲಾಗಿದೆ. ಒಲೆ ಮೂಲಕ ಅಡುಗೆ ಮಾಡಿ, ಅತಿಯಾದ ಹೊಗೆ ಸೇವಿಸಿ ಅನೇಕ ಸಮಸ್ಯೆಗಳನ್ನು ಮಹಿಳೆಯರು ಎದುರಿಸುತ್ತಿದ್ದರು. ಇಂತಹ ಸಮಸ್ಯೆಗಳನ್ನು ಪ್ರಾಧಾನಿ ದೂರ ಮಾಡಿದ್ದಾರೆ ಎಂದು ವಿವರಿಸಿದರು.

Assembly Election : ಚಿಂತಾಮಣಿ, ಬಾಗೇಪಲ್ಲಿ ಅಭ್ಯರ್ಥಿ ಗೊಂದಲ ಇಲ್ಲ

ಆರ್ಥಿಕ ಚೈತನ್ಯ ತುಂಬುವ ಕೆಲಸವಾಗುತ್ತಿದೆ 
ಮಹಿಳೆಯರ ಸ್ವಾಭಿಮಾನ ಕಾಪಾಡುವುದು ಮಾತ್ರವಲ್ಲ, ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವುದು ಸರ್ಕಾರದ ಮುಖ್ಯ ಉದ್ಧೇಶವಾಗಿದೆ. ಮಹಿಳೆಯರಿಗೆ ಯಾವ ಕಸುಬಿನಲ್ಲಿ ಆಸಕ್ತಿ ಇರುವುದೋ ಗಮನಿಸಿ ಬಡ್ಡಿ ರಹಿತವಾಗಿ ಸಾಲ ನೀಡಿ, ಅಂತಹ ಕ್ಷೇತ್ರದಲ್ಲಿ ಅವರು ದುಡಿದು ಗಳಿಸುವ ಮಾರ್ಗವನ್ನು ತೋರಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.

Chikkaballapur: ಚಿಕ್ಕಬಳ್ಳಾಪುರ ಜಿಲ್ಲೆ 15ನೇ ವಾರ್ಷಿಕೋತ್ಸವ ಜ.7ರಿಂದ ಒಂದು ವಾರ ಉತ್ಸವ: ಸಚಿವ ಸುಧಾಕರ್

ಸ್ತ್ರೀ ಶಕ್ತಿ ಸಂಘಗಳು ಇನ್ನಷ್ಟು ಹೆಚ್ಚಳವಾಗಬೇಕು 
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಇನ್ನಷ್ಟು ಸ್ತೀ ಶಕ್ತಿ ಸಂಘಗಳು ರಚನೆಯಾಗಬೇಕು, ದೊಡ್ಡಮರಳಿ ಗ್ರಾಪಂ ವ್ಯಾಪ್ತಿಯ 22 ಸ್ವ ಸಹಾಯ ಸಂಘಗಳ ಒಟ್ಟು 250 ಮಹಿಳೆಯರಿಗೆ 87.15 ಲಕ್ಷ  ಬಡ್ಡಿ ರಹಿತ ಸಾಲ ವಿತರಿಸಲಾಗುತ್ತಿದೆ. ಇದರಿಂದ ಸ್ವಯಂ ಅಭಿವೃದ್ಧಿ ಹೊಂದುವ ಮೂಲಕ ಮಾದರಿಯಾಗಿ, ಸ್ವಾಭಿಮಾನದಿಂದ ಜೀವನ ನಡೆಸುವಂತೆ ಮಹಿಳೆಯರಿಗೆ ಸಚಿವರು ಕರೆ ನೀಡಿದರು.

Follow Us:
Download App:
  • android
  • ios