Assembly Election : ಚಿಂತಾಮಣಿ, ಬಾಗೇಪಲ್ಲಿ ಅಭ್ಯರ್ಥಿ ಗೊಂದಲ ಇಲ್ಲ
ಜಿಲ್ಲೆಯ ಚಿಂತಾಮಣಿ ಹಾಗೂ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಬಗ್ಗೆ ಯಾವುದೇ ರೀತಿಯ ಗೊಂದಲಗಳಿಲ್ಲ. ಆದರೆ ಅಂತಿಮ ತೀರ್ಮಾನ ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಹೇಳಿದರು.
ಚಿಕ್ಕಬಳ್ಳಾಪುರ/ ಚಿಂತಾಮಣಿ ( ಡಿ. 15) : ಜಿಲ್ಲೆಯ ಚಿಂತಾಮಣಿ ಹಾಗೂ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಬಗ್ಗೆ ಯಾವುದೇ ರೀತಿಯ ಗೊಂದಲಗಳಿಲ್ಲ. ಆದರೆ ಅಂತಿಮ ತೀರ್ಮಾನ ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಹೇಳಿದರು.
ಜಿಲ್ಲೆಯ ಚಿಂತಾಮಣಿ ನಗರದ ಹೊರ ವಲಯದ ಬುರಮಾಕಲಹಳ್ಳಿಯ ಸಂಜೀವ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಪಕ್ಷ ಸಂಘಟನೆಗಾಗಿ ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಹೈಕಮಾಂಡ್ ಯಾರಿಗೆ ಟಿಕೆಟ್ (Ticket) ನೀಡುತ್ತೆ ಅವರ ಪರ ನಾವು ಕೆಲಸ ಮಾಡಲು ಸಿದ್ಧರಿದ್ದೇವೆಂದರು.
ದೇಶ ಮೊದಲು, ನಂತರ ಪಕ್ಷ
ಮೊದಲು ದೇಶ (Country) ನಂತರ ಪಕ್ಷ. ದೇಶಕ್ಕಾಗಿ ಕಾರ್ಯಕರ್ತರು ದುಡಿಯಬೇಕು. ದೇಶಕ್ಕೆ ದುಡಿದರೆ ಪಕ್ಷಕ್ಕೆ ದುಡಿದಂತಾಗುತ್ತದೆ ಎಂದು ಹೇಳಿದ ಅವರು ಕಾರ್ಯಕರ್ತರು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡಿರುವ ಕೆಲಸಗಳ ಬಗ್ಗೆ ಜನರಿಗೆ ತಿಳಿಸಬೇಕೆಂದು . ಕೇಂದ್ರ ಮತ್ತು ರಾಜ್ಯದಲ್ಲಿ ಬದಲಾವಣೆ ಆಗಿದೆ. ಅದೇ ರೀತಿ ಕೊಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕೂಡ ಬಿಜೆಪಿ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಬೇಕೆಂದರು.
ಜಿಲ್ಲಾ ಉಪಾಧ್ಯಕ್ಷ ಮಾಡಿಕೆರೆ ಡಾ.ಅರುಣ್ ಬಾಬು ಮಾತನಾಡಿ, ಚಿಂತಾಮಣಿ ಕ್ಷೇತ್ರದಲ್ಲಿ ನಾಲ್ಕು ಜನ ಆಕಾಂಕ್ಷಿಗಳು ಇದ್ದಾರೆ ಅದರಲ್ಲಿ ಯಾರೇ ಅಭ್ಯರ್ಥಿಯಾಗಲಿ ಅವರ ಹಿಂದೆ ಕೆಲಸ ಮಾಡೋದು ನಮ್ಮ ಗುರಿ ಎಂದರು.
ಬೂತ್ ಮಟ್ಟದಿಂದ ಪಕ್ಷ ಸಂಘಟಿಸಿ
ಚಿಂತಾಮಣಿ ನಗರ ಮಂಡಳಿಯ ಅಧ್ಯಕ್ಷ ಮಹೇಶ್ ಬೈ ಮಾತನಾಡಿ ಪಕ್ಷ ಸಂಘಟನೆಗೆ ಶಿಸ್ತಿನ ಹಾಗೆ ಕೆಲಸ ಮಾಡಿ ಬೂತ್ ಮಟ್ಟದಿಂದ ಪಕ್ಷವನ್ನು ಗಟ್ಟಿಪಡಿಸಬೇಕು ಎಂದು ಹೇಳಿದರು. ವಕೀಲ ನಾ,ಶಂಕರ್ ಮಾತನಾಡಿ, ಪಕ್ಷ ಸಂಘಟನೆಗಾಗಿ ಎಲ್ಲಾ ಕಾರ್ಯಕರ್ತರು ಒಟ್ಟುಗೂಡಿ ಕೆಲಸ ಮಾಡಬೇಕೆಂದು ಕಿವಿಮಾತು ಹೇಳಿದ ಅವರು ಪಕ್ಷದ ಅಭ್ಯರ್ಥಿ ಬಗ್ಗೆ ಗೊಂದಲ ಬೇಡ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಯಾರಿಗೆ ಅಭ್ಯರ್ಥಿ ಮಾಡುತ್ತೋ ಅವರ ಪರವಾಗಿ ಕೆಲಸ ಮಾಡಲು ನಾವು ನಿಲ್ಲಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ವೆಂಕಟಶಿವಾರೆಡ್ಡಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ ರಾಜ್ , ಗ್ರಾಮಂತರ ಮಂಡಳ ಅಧ್ಯಕ್ಷ ಬಟ್ಲಹಳ್ಳಿ ಶಿವಾರೆಡ್ಡಿ , ಬಿಜೆಪಿ ಮುಖಂಡರಾದ ಕೆ ವಿ ಸತ್ಯನಾರಾಯಣ ರೆಡ್ಡಿ , ಎಂ ಆರ್ ಬಾಬು , ನಾರಾಯಣ ರೆಡ್ಡಿ , ಸೇರಿದಂತೆ ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಬಿಜೆಪಿಗೆ ಬಿಸಿ ತುಪ್ಪವಾದ ಜನಾರ್ದನ ರೆಡ್ಡಿ
ಬೆಂಗಳೂರು(ಡಿ.14): ಸುದೀರ್ಘ ವನವಾಸದ ನಂತರ ಸಕ್ರಿಯ ರಾಜಕಾರಣಕ್ಕೆ ಮರಳಲು ತವಕಿಸುತ್ತಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ನಡೆ ಆಡಳಿತಾರೂಢ ಬಿಜೆಪಿ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ರೆಡ್ಡಿ ಅವರು ಸದ್ಯ ಪಕ್ಷದಲ್ಲಿದ್ದರೂ ಅದು ನಾಮ್ ಕಾ ವಾಸ್ತೆ ಮಾತ್ರ ಎನ್ನುವಂತಾಗಿದೆ. ಅವರಿಗೆ ಯಾವುದೇ ಜವಾಬ್ದಾರಿ ಇಲ್ಲ. ಅವರ ಮಾತಿಗೂ ಮನ್ನಣೆ ಇಲ್ಲ. ಹೀಗಾಗಿಯೇ ಮತ್ತೆ ಸಕ್ರಿಯ ರಾಜಕಾರಣಕ್ಕೆ ಹಿಂದಿರುಗುವ ಮೂಲಕ ತಮ್ಮ ಮೊದಲಿನ ಪ್ರಭಾವ ಪಡೆಯಲು ಮುಂದಾಗಿದ್ದಾರೆ. ಅದಕ್ಕಾಗಿ ಬಳ್ಳಾರಿಗೆ ಅಂಟಿಕೊಂಡಿರುವ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮನೆ ಮಾಡಿ ಓಡಾಟ ಆರಂಭಿಸುವ ಮೂಲಕ ತಮ್ಮ ಕಾರ್ಯಾಚರಣೆಗೆ ನಾಂದಿ ಹಾಡಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವುದಾದರೊಂದು ಕ್ಷೇತ್ರದಿಂದ ಕಣಕ್ಕಿಳಿಯುವ ಮೂಲಕ ಮತ್ತೆ ಚುನಾವಣಾ ರಾಜಕಾರಣಕ್ಕೆ ಧುಮುಕುವ ಕಸರತ್ತು ನಡೆಸಿರುವ ರೆಡ್ಡಿ ಅವರು ಬಿಜೆಪಿಯಿಂದ ಅವಕಾಶ ಸಿಗದಿದ್ದಲ್ಲಿ ಪ್ರತ್ಯೇಕ ರಾಜಕೀಯ ಪಕ್ಷ ಸ್ಥಾಪಿಸಲು ಸಿದ್ಧತೆಯನ್ನೂ ನಡೆಸಿದ್ದಾರೆ. ಇದಕ್ಕೆ ಪೂರಕವಾಗಿ ಬಳ್ಳಾರಿ, ಕೊಪ್ಪಳ, ಗದಗ, ರಾಯಚೂರು, ಯಾದಗಿರಿ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿನ ತಮ್ಮ ಬೆಂಬಲಿಗರನ್ನು ಕರೆದು ಮಾತುಕತೆ ಆರಂಭಿಸಿರುವುದು ಆ ಭಾಗದ ಬಿಜೆಪಿ ಪಾಳೆಯದಲ್ಲಿ ಆತಂಕ ಮೂಡಿಸಿದೆ.
Koppal: ಜನಾರ್ಧನ ರೆಡ್ಡಿಯಿಂದ 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ' ಸ್ಥಾಪನೆ?
ಕೊಟ್ರೂ ಕಷ್ಟ, ಬಿಟ್ಟರೂ ಕಷ್ಟ:
ಸದ್ಯದ ಪರಿಸ್ಥಿತಿಯಲ್ಲಿ ಮುಂದಿನ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಿದರೂ ಕಷ್ಟ, ಬಿಟ್ಟರೂ ಕಷ್ಟ ಎನ್ನುವಂತಾಗಿದೆ. ಟಿಕೆಟ್ ನೀಡಿದಲ್ಲಿ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಪಕ್ಷ ಇದನ್ನೇ ಗುರಿಯಾಗಿಸಿಕೊಂಡು ಬಿಜೆಪಿ ವಿರುದ್ಧ ಚುನಾವಣಾ ಪ್ರಚಾರ ನಡೆಸಲಿದೆ. ಹೆಚ್ಚೂ ಕಡಮೆ ಮರೆತು ಹೋಗಿದ್ದ ಗಣಿ ಅಕ್ರಮವನ್ನೇ ಮತ್ತೆ ಕೆದಕುವ ಪ್ರಯತ್ನ ನಡೆಸಲಿದೆ. ರೆಡ್ಡಿ ವಿರುದ್ಧದ ಅನೇಕ ಪ್ರಕರಣಗಳು ನ್ಯಾಯಾಲಯದ ವಿಚಾರಣೆ ಹಂತದಲ್ಲಿವೆ. ತಮ್ಮ ವಿರುದ್ಧದ ಆರೋಪಗಳಿಂದ ರೆಡ್ಡಿ ಪೂರ್ಣ ಪ್ರಮಾಣದಲ್ಲಿ ಮುಕ್ತರಾಗಿಲ್ಲ. ಇದು ಸಹಜವಾಗಿಯೇ ತಮಗೆ ಮುಳುವಾಗಬಹುದು ಎಂಬ ಆತಂಕ ಪಕ್ಷದಲ್ಲಿದೆ.