ದೇಶದ ಬೆನ್ನೆಲುಬಾಗಿರುವ ರೈತರ ವಾಹನಗಳಿಗೆ ಸರ್ಕಾರವೇ ಉಚಿತವಾಗಿ ನೋಂದಣಿ, ವಿಮೆ, ಡಿಎಲ್‌ ಮಾಡಿಸಿಕೊಡಬೇಕು ಎಂದು ವಕೀಲ ಮುಷ್ತಾಕ್‌ ಅಹಮ್ಮದ್‌ ಅಲಿ(ಮೌಲಿ) ಒತ್ತಾಯಿಸಿದ್ದಾರೆ. ದುಬಾರಿ ದಂಡದ ಕಾಯ್ದೆ ರೈತರು, ಕಾರ್ಮಿಕರು, ಬಡವರು, ಜನ ಸಾಮಾನ್ಯರಿಗೆ ಆರ್ಥಿಕ ಸಂಕಷ್ಟತಂದೊಡ್ಡುತ್ತಿದೆ ಎಂದು ಅವರು ದೂರಿದ್ದಾರೆ.

ದಾವಣಗೆರೆ(ಸೆ.14): ದೇಶದ ಬೆನ್ನೆಲುಬಾಗಿರುವ ರೈತರ ವಾಹನಗಳಿಗೆ ಸರ್ಕಾರವೇ ಉಚಿತವಾಗಿ ನೋಂದಣಿ, ವಿಮೆ, ಡಿಎಲ್‌ ಮಾಡಿಸಿಕೊಡಬೇಕು ಎಂದು ವಕೀಲ ಮುಷ್ತಾಕ್‌ ಅಹಮ್ಮದ್‌ ಅಲಿ(ಮೌಲಿ) ಒತ್ತಾಯಿಸಿದ್ದಾರೆ.

ನಗರದ ಎಪಿಎಂಸಿ ಸಭಾಂಗಣದಲ್ಲಿ ಶುಕ್ರವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ನೂತನ ಐಎಂವಿ ಕಾಯ್ದೆ ಕುರಿತ ಉಚಿತ ಕಾನೂನು ಅರಿವು, ಅಧ್ಯಯನ ಶಿಬಿರದಲ್ಲಿ ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತನಿಗೆ ಆತನ ವಾಹನಗಳಿಗೆ ಉಚಿತ ನೋಂದಣಿ, ವಿಮೆ, ಚಾಲನಾ ಪರವಾನಿಗೆ ಮಾಡಿಸುವ ಕೆಲಸ ಸರ್ಕಾರವೇ ಮಾಡಲಿ ಎಂದಿದ್ದಾರೆ.

ದಂಡದಿಂದ ಜನಸಾಮಾನ್ಯರಿಗೆ ಆರ್ಥಿಕ ಸಂಕಷ್ಟ:

ಕೇಂದ್ರ, ರಾಜ್ಯ ಸರ್ಕಾರಗಳು ಜಾರಿಗೊಳಿಸಿದ ಹೊಸ ಮೋಟಾರು ವಾಹನ ಕಾಯ್ದೆ ಜನರಿಗೆ ಸಂಚಾರ ನಿಯಮಗಳ ಪಾಲನೆ ಬಗ್ಗೆ ಅರಿವು ಮೂಡಿಸುವ ಬದಲಿಗೆ ಭಯದಲ್ಲೇ ಇರುವಂತೆ ಮಾಡಿವೆ. ಯಾವುದೇ ಕಾಯ್ದೆ, ಕಾನೂನುಗಳು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬದಲಾವಣೆ ತರುವಂತಿರಬೇಕು. ಆದರೆ, ಈಗ ತಂದ ದುಬಾರಿ ದಂಡದ ಕಾಯ್ದೆ ರೈತರು, ಕಾರ್ಮಿಕರು, ಬಡವರು, ಜನ ಸಾಮಾನ್ಯರಿಗೆ ಆರ್ಥಿಕ ಸಂಕಷ್ಟತಂದೊಡ್ಡುತ್ತಿದೆ ಎಂದು ಅವರು ದೂರಿದ್ದಾರೆ.

ಮೋಟಾರು ಕಾಯ್ದೆ ಸರಳಗೊಳಿಸಿ:

ಹೊಸದಾಗಿ ಜಾರಿಗೊಂಡ ದುಬಾರಿ ದಂಡ ವಿಧಿಸುವ ಕಾನೂನು ವಿರುದ್ಧ ರೈತರು, ಜನ ಸಾಮಾನ್ಯರ ಪರವಾಗಿ ರೈತ ಸಂಘಟನೆಗಳು ನಿಲ್ಲಬೇಕು. ಸರ್ಕಾರದ ಇಂತಹ ಜನ ವಿರೋಧಿ ನೀತಿ, ಕಾನೂನು, ಕಾಯ್ದೆ ವಿರುದ್ಧ ಧ್ವನಿ ಎತ್ತುವ ಕೆಲಸವಾಗಬೇಕು. ದೇಶದಲ್ಲಿ ವಾಹನಗಳನ್ನು ಶೇ.10ರಷ್ಟುರೈತರು ಮಾತ್ರ ಹೊಂದಿರುತ್ತಾರೆ. ಈ ಹಿನ್ನೆಲೆಯಲ್ಲಿ ದುಬಾರಿ ದಂಡ ಕೈಬಿಟ್ಟು, ಮೋಟಾರು ಕಾಯ್ದೆಯನ್ನು ಸರಳಗೊಳಿಸುವ ಕೆಲಸವನ್ನು ಉಭಯ ಸರ್ಕಾರಗಳೂ ಮಾಡಲಿ ಎಂದು ಆಗ್ರಹಿಸಿದ್ದಾರೆ.

ರಿಯಾಯಿತಿ ಬೆಲೆಯಲಿ ಪೆಟ್ರೋಲ್ ನೀಡಿ:

ರೈತರಿಗೆ ಹೋಬಳಿ, ಗ್ರಾಮ ಮಟ್ಟದಲ್ಲಿ ವಾಹನ ಚಾಲನಾ ಪರವಾನಿಗೆ, ವಾಹನ ವಿಮೆ, ನೋಂದಣಿ ಮಾಡಿಸಲು ಪ್ರತಿ ತಿಂಗಳೂ ಸಾರಿಗೆ ಇಲಾಖೆಯಿಂದ ಶಿಬಿರಗಳನ್ನು ಆಯೋಜಿಸುವ ಕೆಲಸ ಮೊದಲು ಆಗಬೇಕು. ಪ್ರತಿಯೊಬ್ಬ ರೈತರೂ ಟ್ರ್ಯಾಕ್ಟರ್‌ನಿಂದ ಉಳುಮೆ ಮಾಡಲು ರಿಯಾಯಿತಿ ದರದಲ್ಲಿ ಡೀಸೆಲ್‌ ನೀಡಬೇಕು. ರೈತ ಸಂಘಟನೆಗಳ ಮೂಲಕ ರೈತರೂ ಸಹ ಇಂತಹ ಬೇಡಿಕೆ ಮುಂದಿಟ್ಟುಕೊಂಡು ಜನ ಪ್ರತಿನಿಧಿಗಳು, ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಕಿವಿಮಾತು ಹೇಳಿದ್ದಾರೆ.

ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೊಳಿಸಿದ ಹೊಸ ಮೋಟಾರು ವಾಹನ ಕಾಯ್ದೆ ಬಗ್ಗೆ ಯಾರದ್ದೇ ತಕರಾರು ಇಲ್ಲ. ಆದರೆ, ಜನ ವಿರೋಧಿ, ರೈತ, ಕಾರ್ಮಿಕ ವಿರೋಧಿಯಾಗಿ, ಅವೈಜ್ಞಾನಿಕವಾಗಿ ದುಬಾರಿ ದಂಡ ವಿಧಿಸುತ್ತಿರುವುದಕ್ಕೆ ನಮ್ಮೆಲ್ಲರದ್ದೂ ತೀವ್ರ ವಿರೋಧ ಇದೆ. ಸಂಚಾರಿ ನಿಯಮ ಪ್ರತಿಯೊಬ್ಬರೂ ಪಾಲನೆ ಮಾಡಬೇಕು. ವಾಹನಗಳ ವಿಮೆ, ದಾಖಲಾಗಿ ಸರಿಯಾಗಿಟ್ಟುಕೊಳ್ಳಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಸರ್ಕಾರಗಳು ಮಾಡಲಿ ಎಂದರು.

ನೆರೆ ಪರಿಹಾರ: ಕೇಂದ್ರ ಕಡೆಗಣನೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಮ್ಮನೂರು ಬಸವರಾಜ, ತಾಲೂಕು ಅಧ್ಯಕ್ಷ ಕಾಡಜ್ಜಿ ಪ್ರಕಾಶ, ಚಿರಂಜೀವಿ, ಪರಶುರಾಮ, ಪಾಮೇನಹಳ್ಳಿ ಗೌಡ್ರ ಶೇಖರಪ್ಪ, ಖಾಜಾ ಹುಸೇನ್‌ ಸಾಬ್‌, ಹುಚ್ಚವ್ವನಹಳ್ಳಿ ಪ್ರಕಾಶ, ದೊಣೆಹಳ್ಳಿ ಲೋಕೇಶ, ಕರಿಲಕ್ಕೇನಹಳ್ಳಿ ನಾಗರಾಜ, ಕೋಲ್ಕುಂಟೆ ಉಚ್ಚೆಂಗೆಪ್ಪ, ಇಂಗಳಗುಂದಿ ಸುರೇಶ ಸೇರಿದಂತೆ ರೈತ ಮುಖಂಡರು, ರೈತರು, ಸಾರ್ವಜನಿಕರು ಭಾಗವಹಿಸಿದ್ದರು.

ಹಿಂಭಾರ ಹೆಚ್ಚಾಗಿ ಟ್ರಾಕ್ಟರ್‌ ಟ್ರೈಲರ್‌ನಿಂದ ಬಿದ್ದ ಗಣೇಶ!