ದಾವಣಗೆರೆ[ಸೆ.13]: ಎಂಜಿನ್‌ ಬದಲಿಸುತ್ತಿದ್ದ ವೇಳೆ ಹಿಂಭಾರ ಹೆಚ್ಚಾಗಿ ಟ್ರೈಲರ್‌ ಹಿಂದಕ್ಕೆ ವಾಲಿದ ಪರಿಣಾಮ ಗಣೇಶ ಮೂರ್ತಿಯು ಹಿಮ್ಮುಖವಾಗಿ ಬಿದ್ದು ಭಗ್ನಗೊಂಡ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ಗುರುವಾರ ಸಂಭವಿಸಿದೆ.

ಚನ್ನಗಿರಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಹಿಂದೂ ಏಕತಾ ಸಮಿತಿಯಿಂದ ಪ್ರತಿಷ್ಠಾಪಿಸಿದ್ದ ಶ್ರೀ ಏಕತಾ ಗಣೇಶ ಮೂರ್ತಿ ವಿಸರ್ಜನೆಯನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ 2 ಡಿಜೆ ಸೆಟ್‌ಗೆ ಅನುಮತಿ ನೀಡುವುದಾಗಿ ಪೊಲೀಸರು ತಿಳಿಸಿದ್ದರು. ಆದರೆ ಸಂಘಟಕರು 6 ಡಿಜೆ ಸೆಟ್‌ಗೆ ಅನುಮತಿ ನೀಡುವಂತೆ ಪಟ್ಟು ಹಿಡಿದ್ದರು. ಈ ನಡುವೆಯೇ ಶುರುವಾದ ವಿಸರ್ಜನಾ ಮೆರವಣಿಗೆ ಠಾಣೆ ಮುಂಭಾಗಕ್ಕೆ ಬರುತ್ತಿದ್ದಂತೆ ತಾರಕಕ್ಕೇರಿತು. ಹೀಗಾಗಿ ಸಂಘಟಕರು ಠಾಣೆ ಬಳಿ ಮೆರವಣಿಗೆ ಬರುತ್ತಿದ್ದಂತೆಯೇ ಗಣೇಶ ಇದ್ದ ಟ್ರೈಲರ್‌ ಬಿಟ್ಟು, ಟ್ರ್ಯಾಕ್ಟರ್‌ ಎಂಜಿನ್‌ ಬಿಚ್ಚಿಕೊಂಡು ಹೋದರು. ಪೊಲೀಸರು ಹೋಗಿ ಮನವೊಲಿಸಿ, ಟ್ರ್ಯಾಕ್ಟರ್‌ ಎಂಜಿನ್‌ ವಾಪಸ್ಸು ತಂದರು.

ಈ ವೇಳೆ ಟ್ರ್ಯಾಕ್ಟರ್‌ ಎಂಜಿನ್‌ಗೆ ಟ್ರೈಲರ್‌ ಹುಕ್‌ ಜೋಡಿಸುತ್ತಿದ್ದ ವೇಳೆ ಅಚಾತುರ್ಯದಿಂದಾಗಿ ಹಿಂಭಾರಕ್ಕೆ ಟ್ರೈಲರ್‌ ವಾಲಿ ಹಿಂಭಾಗಕ್ಕೆ ನೆಲಕ್ಕೆ ಒರಗಿದೆ. ಈ ಘಟನೆಯಲ್ಲಿ ಗಣೇಶನ ಮೂರ್ತಿಯು ಹಿಮ್ಮುಖವಾಗಿ ಧರೆಗುರುಳಿಸಿದ್ದು, ಮೂರ್ತಿ ಒಂದಿಷ್ಟುಭಗ್ನವಾಗಿದೆ. ಬಳಿಕ ಪೊಲೀಸರ ಮುಂದಾಳತ್ವದಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.