ಮೈಸೂರು (ಫೆ.01):  ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಯಾದವಗಿರಿ ರೈಲ್ವೆ ಲೈನ್‌ ಪಕ್ಕದ ಕೊಳೆಗೇರಿಯಲ್ಲಿ ಹಾಗೂ ಬಂಬೂಬಜಾರ್‌ ರೈಲ್ವೆ ಹಳಿಯ ಪಕ್ಕದಲ್ಲಿನ ಮೈಸೂರು ಸಾಮಿಲ್‌ ಪ್ರದೇಶದ ಕೊಳೆಗೇರಿಯಲ್ಲಿ ವಾಸವಾಗಿದ್ದ ಕೊಳಚೆ ಪ್ರದೇಶದ ನಿವಾಸಿಗಳಿಗೆ ಲಾಟರಿ ಮೂಲಕ ನರ್ಮ್ ಮನೆಗಳನ್ನು ಹಂಚಲಾಯಿತು.

ಸುಮಾರು 25- 30 ವರ್ಷಗಳಿಂದ ಮೂಲಭೂತ ಸೌಕರ್ಯವಿಲ್ಲದೇ ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದ ಅರ್ಹರಿಗೆ ಸಂಸದ ಪ್ರತಾಪ್‌ ಸಿಂಹ, ಶಾಸಕ ಎಲ್. ನಾಗೇಂದ್ರ ಅವರು ಪಾರದರ್ಶಕವಾಗಿ ಮನೆಗಳನ್ನು ಲಾಟರಿ ಎತ್ತುವ ಮೂಲಕ ಹಂಚಿದರು.

ಕೆಸರೆ ಸರ್ವೆ ನಂ.484/1, 484/2 ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ವತಿಯಿಂದ ಕೊಳಚೆ ಪ್ರದೇಶದ ಒಟ್ಟು 252 ಕುಟುಂಬಗಳಿಗೆ ಜೆಎನ್‌ ನರ್ಮ್- ಬಿಎಸ್‌ಯುಪಿ ಯೋಜನೆಯಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳಾದ ವಿದ್ಯುತ್‌, ಶುದ್ಧ ಕುಡಿಯುವ ನೀರು, ಸಮುದಾಯ ಭವನ, ಅಂಗನವಾಡಿ ಕಟ್ಟಡ, ಉದ್ಯಾನಗಳನ್ನೊಳಗೊಂಡಂತೆ ನಿರ್ಮಿಸಲಾಗಿದೆ.

ಸರ್ಕಾರದ ವಸತಿ ಯೋಜನೆಯಡಿ ಮಂಜೂರಾದ ಮನೆಗಳಿಗೆ ಇಲ್ಲ ಅನುದಾನ ...

ಈ ಕೊಳಚೆ ಪ್ರದೇಶದಲ್ಲಿ ವಾಸವಾಗಿದ್ದರೂ ಲಾಟರಿ ಮೂಲಕ ಮನೆ ಹಂಚಿಕೆಗೆ ಆಯ್ಕೆ ಪ್ರಕ್ರಿಯೆಯಲ್ಲಿ ಹಾಜರಾಗದವರಿಗೆ ಅವರ ಹೆಸರನ್ನು ಕೂಗಿ ಲಾಟರಿ ಎತ್ತಿ ಅವರಿಗೆ ಬಂದ ಮನೆಸಂಖ್ಯೆಯನ್ನು ಗುರುತಿಸಿ ದಾಖಲಿಸಲಾಯಿತು. ಈ ಪ್ರಕ್ರಿಯೆಗೆ ಹಾಜರಾಗದವರು ಹೈವೆ ಸರ್ಕಲ್‌ ಬಳಿಯಿರುವ ಕರ್ನಾಟಕ ಕೊಳಚೆ ಪ್ರದೇಶ ಅಭಿವೃದ್ದಿ ಮಂಡಳಿ ಕಚೇರಿಗೆ ಭೇಟಿ ನೀಡಿ, ದಾಖಲೆಗಳನ್ನು ಸಲ್ಲಿಸಿ ಮನೆ ಸಂಖ್ಯೆಗಳನ್ನು ಪಡೆಯುವಂತೆ ತಿಳಿಸಲಾಯಿತು.

ಮನೆ ಹಂಚಿಕೆಯಾದ ಎಲ್ಲಾ ಕುಟುಂಬಗಳಿಗೂ ಈ ಹಿಂದೆಯೇ ನೋಟೀಸ್‌ ನೀಡಿರುವಂತೆ 10 ದಿವಸದ ಒಳಗಾಗಿ ಹಾಲಿ ವಾಸವಿರುವ ಶೆಡ್‌ಗಳನ್ನು, ತಾತ್ಕಾಲಿಕ ನಿರ್ಮಿತ ಮನೆಗಳನ್ನು ತೆರವುಗೊಳಿಸುವಂತೆ ಸೂಚಿಸಿ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು.