Chikkaballapura : ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್‌ಪಾಸ್ ವಿತರಣೆ ಸ್ಥಗಿತ!
ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಕಾರ್ಯಕ್ರಮವಾದ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ವಿತರಿಸುವ ಯೋಜನೆ ಆರಂಭಗೊಂಡ ಎರಡೇ ತಿಂಗಳಿಗೆ ಸದ್ದಿಲ್ಲದೇ ಸ್ಥಗಿತಗೊಂಡಿದೆ.
ಕಾಗತಿ ನಾಗರಾಜಪ್ಪ.
ಚಿಕ್ಕಬಳ್ಳಾಪುರ (ನ.09): ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಕಾರ್ಯಕ್ರಮವಾದ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ವಿತರಿಸುವ ಯೋಜನೆ ಆರಂಭಗೊಂಡ ಎರಡೇ ತಿಂಗಳಿಗೆ ಸದ್ದಿಲ್ಲದೇ ಸ್ಥಗಿತಗೊಂಡಿದೆ.
ವಿಪರ್ಯಾಸದ ಸಂಗತಿಯೆಂದರೆ ಜಿಲ್ಲೆಯಲ್ಲಿ ನೊಂದಾಯಿತ ಕಟ್ಟಡ ಹಾಗೂ ಇತರೇ ನಿರ್ಮಾಣ ಕಾರ್ಮಿಕರು (Labour) 60 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿದ್ದರೂ ಜಿಲ್ಲೆಯಲ್ಲಿ ಉಚಿತ ಬಸ್ ಪಾಸ್ (Free Bus Pass) ಸೌಲಭ್ಯ ಸಿಕ್ಕಿದ್ದು ಮಾತ್ರ ಇಲ್ಲಿಯವರೆಗೂ ಕೇವಲ 1,250 ಮಂದಿಗೆ ಮಾತ್ರ. ಉಳಿದವರಿಗೆ ಬಸ್‌ಪಾಸ್ ಯಾವಾಗ ಸಿಗುತ್ತದೆ ಎನ್ನುವುದು ಮಾತ್ರ ಯಕ್ಷಪ್ರಶ್ನೆಯಾಗಿದೆ.
ಸೆಪ್ಟೆಂಬರ್‌ನಲ್ಲಿ ಘೋಷಿಸಿದ್ದ ಯೋಜನೆ
ರಾಜ್ಯ ಸರ್ಕಾರ ಬೆಂಗಳೂರು (Bengaluru) ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಘೋಷಿಸಿದ್ದ ಉಚಿತ ಬಸ್ ಸೌಕರ್ಯವನ್ನು ಕಳೆದ ಸೆಪ್ಪಂಬರ್ ತಿಂಗಳಲ್ಲಿ ರಾಜ್ಯದ ಎಲ್ಲಾ ನೊಂದಾಯಿತ ಕಟ್ಟಡ ಹಾಗೂ ಇತರೇ ನಿರ್ಮಾಣದ ಕಾರ್ಮಿಕರಿಗೆ ವಿಸ್ತರಿಸಿ ಆದೇಶಿಸಿತ್ತು. ಸುಮಾರು 45 ಕಿ.ಮೀ ದೂರದಷ್ಟುವ್ಯಾಪ್ತಿಯಲ್ಲಿ ಸಂಚರಿಸಲು ಅನುಕೂಲ ಕಲ್ಪಿಸಿ ಕಟ್ಟಡ ಹಾಗೂ ಇತರೇ ನಿರ್ಮಾಣ ಕಾರ್ಮಿಕರಿಗೆ ಬಸ್ ಪಾಸ್ ವಿತರಣೆಗೆ ಆದೇಶಿಸಿತ್ತು.
ಆದರೆ ಜಿಲ್ಲೆಯಲ್ಲಿ 60 ಸಾವಿರಕ್ಕೂ ಅಧಿಕ ನೊಂದಾಯಿತ ಕಟ್ಟಡ ಇತರೇ ನಿರ್ಮಾಣ ಕಾರ್ಮಿಕರಿದ್ದರೂ ಕೇವಲ 1.250 ಮಂದಿಗೆ ಮಾತ್ರ ಇಲ್ಲಿಯವರೆಗೂ ಉಚಿತ ಬಸ್ ಸೌಲಭ್ಯ ಸಿಕ್ಕಿದ್ದು ಇನ್ನೂ 58 ಸಾವಿರದಷ್ಟುಕಟ್ಟಡ ಕಾರ್ಮಿಕರಿಗೆ ಸೌಲಭ್ಯ ಸಿಗದೇ ಯೋಜನೆಯನ್ನು ಸರ್ಕಾರ ಸದ್ದಿಲ್ಲದೇ ಸ್ಥಗಿತಗೊಳಿಸುವ ಮೂಲಕ ಕಾರ್ಮಿಕರ ಆಕ್ರೋಶಕ್ಕೆ ಗುರಿಯಾಗಿದೆ. ಸರ್ಕಾರದ ಈ ನಿರ್ಧಾರದಿಂದ ಈ ಕಟ್ಟಡ ಕಾರ್ಮಿಕರು ಎಂದಿನಂತೆ ಟಿಕೆಟ್ ಖರೀದಿಸಿ ಪ್ರಯಾಣಿಸಬೇಕಿದೆ.
ರಾಜ್ಯ ಮಟ್ಟಗ 1 ಲಕ್ಷ ಪಾಸ್ ವಿತರಣೆ
ಸರ್ಕಾರ ಉಚಿತ ಬಸ್‌ಗಾಗಿ ಕಾರ್ಮಿಕರಿಂದ ಗ್ರಾಮ್ ಒನ್ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಿ ಬಸ್ ವಿತರಣೆಗೆ ಮುಂದಾಗಿತ್ತು. ಆದರೆ ಸರ್ಕಾರ ಗುರಿ ನೀಡಿದ್ದ 1 ಲಕ್ಷ ಕಾರ್ಮಿಕರಿಗೆ ಈಗಾಗಲೇ ರಾಜ್ಯವ್ಯಾಪಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವೂ ಗ್ರಾಮ ಒನ್ ಮೂಲಕ ಅರ್ಜಿ ಸಲ್ಲಿಸಿ ಕಾರ್ಮಿಕರಿಗೆ ಬಸ್ ಪಾಸ್ ವಿತರಿಸಿರುವ ಹಿನ್ನಲೆಯಲ್ಲಿ ಈಗ ಅರ್ಜಿ ಸ್ಪೀಕರಿಸುವುದನ್ನು ಗ್ರಾಮ ಒನ್ ಮೂಲಕ ನಿಲ್ಲಿಸಿರುವ ಪರಿಣಾಮ ಇತರೇ ಕಾರ್ಮಿಕರು ಬಸ್ ಪಾಸ್ ಸೌಲಭ್ಯ ಪಡೆಯುವ ಕನಸಿಗೆ ಭಂಗ ಉಂಟಾಗಿದೆ.
ಈ ಬಗ್ಗೆ ಕಾರ್ಮಿಕ ಅಧಿಕಾರಿಗಳನ್ನು ಕೇಳಿದರೆ ಸರ್ಕಾರ 1 ಲಕ್ಷ ಕಾರ್ಮಿಕರಿಗೆ ರಾಜ್ಯದಲ್ಲಿ ಉಚಿತ ಬಸ್ ಪಾಸ್ ವಿತರಿಸಿದೆ. ಗುರಿ ಮುಗಿದಿರುವ ಕಾರಣಕ್ಕೆ ಅರ್ಜಿ ಸ್ಪೀಕರಿಸುವುದನ್ನು ನಿಲ್ಲಿಸಿದೆಯೆಂದು ಹೆಸರು ಹೇಳಲು ಇಚ್ಛಿಸದ ಕಾರ್ಮಿಕ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಕನ್ನಡಪ್ರಭಗೆ ತಿಳಿಸಿದರು. ಜಿಲ್ಲೆಯಲ್ಲಿ ಸುಮಾರು 60 ಸಾವಿರದಷ್ಟುಕಟ್ಟಡ ಹಾಗೂ ಇತರೇ ನೊಂದಾಯಿತ ಕಾರ್ಮಿಕರು ಇದ್ದಾರೆ. ಕನಿಷ್ಠ 35 ರಿಂದ 40 ಸಾವಿರದಷ್ಟುಕಾರ್ಮಿಕರು ಉಚಿತ ಬಸ್ ಸೌಲಭ್ಯ ಪಡೆಯಲು ಅರ್ಹರಿದ್ದರು. ಆದರೆ ಇಲ್ಲಿವರೆಗೂ ಜಿಲ್ಲೆಯಲ್ಲಿÜ ಎಷ್ಟುಮಂದಿಗೆ ಸರ್ಕಾರದಿಂದ ಉಚಿತ ಬಸ್‌ಪಾಸ್ ಸೌಲಭ್ಯ ಸಿಕ್ಕಿದೆ ಎನ್ನುವ ಮಾಹಿತಿ ನಮ್ಮ ಬಳಿ ಇಲ್ಲ. ಅದು ಕೆಎಸ್‌ಆರ್‌ಟಿಸಿಗೆ ಸಂಬಂದಿಸಿದ್ದು ಎಂದರು.
ಜಿಲ್ಲೆಯಲ್ಲಿ ಇಲ್ಲಿಯವರೆಗೂ ಒಟ್ಟು 1,250 ಮಂದಿ ಕಟ್ಟಡ ಹಾಗೂ ಇತರೇ ನಿರ್ಮಾಣ ಕಾರ್ಮಿಕರಿಗೆ ಉಚಿತ ಬಸ್‌ಪಾಸ್ ವಿತರಿಸಲಾಗಿದೆ. ರಾಜ್ಯಾದ್ಯಂತ 1 ಲಕ್ಷದಷ್ಟುಕಟ್ಟಡ ಕಾರ್ಮಿಕರಿಗೆ ಪಾಸ್ ವಿತರಣೆ ಗುರಿ ತಲುಪಿರುವ ಕಾರಣ ಉಚಿತ್ ಬಸ್‌ಪಾಸ್ ವಿತರಣೆ ಸದ್ಯಕ್ಕೆ ಸ್ಥಗಿತಗೊಂಡಿದೆ.
--ಹಿಮವರ್ಧನ ನಾಯ್ದು. ಕೆಎಸ್‌ಆರ್‌ಟಿಸಿ ವಿಭಾಗೀಯ ನಿಂತ್ರಣಾಧಿಕಾರಿ.