ವಿಜಯಪುರ: ಆರಕ್ಷಕರಿಗೆ ವಕ್ಕರಿಸಿದ ಕೊರೋನಾ, ನಾಲ್ಕು ಪೊಲೀಸ್ ಠಾಣೆ ಸೀಲ್‌ಡೌನ್
ವಿಜಯಪುರ ಜಿಲ್ಲೆಯೊಂದರಲ್ಲಿಯೇ ನಾಲ್ಕು ಪೊಲೀಸ್ ಠಾಣೆ ಸೀಲ್‌ಡೌನ್ ಮಾಡಿ ಪೊಲೀಸ್ ಠಾಣೆಯನ್ನು ಬೇರೆ ಸ್ಥಳದಲ್ಲಿ ನಡೆಸಲಾಗುತ್ತಿದೆ| ನಗರದ ರೈಲ್ವೆ ಪೊಲೀಸ್ ಠಾಣೆ ಪೇದೆಯೊಬ್ಬನಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಪಿಎಸೈ ಸೇರಿದಂತೆ 20 ಮಂದಿಗೆ ಕ್ವಾರಂಟೈನ್|
ವಿಜಯಪುರ(ಜು.06): ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ದಾಂಗುಡಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಪೊಲೀಸರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ವಕ್ಕರಿಸುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಈಗಾಗಲೇ ನಾಲ್ಕು ಪೊಲೀಸ್ ಠಾಣೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಜಿಲ್ಲೆಯೊಂದರಲ್ಲಿಯೇ ನಾಲ್ಕು ಪೊಲೀಸ್ ಠಾಣೆಗಳನ್ನು ಸೀಲ್‌ಡೌನ್ ಮಾಡಿ ಪೊಲೀಸ್ ಠಾಣೆಯನ್ನು ಬೇರೆ ಸ್ಥಳದಲ್ಲಿ ನಡೆಸಲಾಗುತ್ತಿದೆ. ನಗರದ ರೈಲ್ವೆ ಪೊಲೀಸ್ ಠಾಣೆ ಪೇದೆಯೊಬ್ಬನಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಪಿಎಸೈ ಸೇರಿದಂತೆ 20 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಸದ್ಯಕ್ಕೆ ಠಾಣೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಬಾಗಲಕೋಟೆಯ ಮೂವರು ರೈಲ್ವೆ ಪೊಲೀಸ್‌ರು ಠಾಣೆಯ ಹೊರಗಡೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಹಾರಾಷ್ಟ್ರದಿಂದ ರೈಲ್ವೆ ಮೂಲಕ ಜಿಲ್ಲೆಗೆ ಮರಳಿದ ಸಂದರ್ಭದಲ್ಲಿ ರೈಲು ನಿಲ್ದಾಣದಲ್ಲಿ ಕಾನ್ಸಟೇಬಲ್ ಸೇವೆ ಸಲ್ಲಿಸಿದ್ದ. ಆ ಸಂದರ್ಭದಲ್ಲಿ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ.
ಎರಡನೇ ಬಾರಿ ಸೀಲ್‌ಡೌನ್
ವಿಜಯಪುರದ ಜಲನಗರ ಪೊಲೀಸ್ ಠಾಣೆ ಈಗಾಗಲೇ ಈ ಹಿಂದೆ ಒಂದು ಬಾರಿ ಸೀಲ್‌ಡೌನ್ ಆಗಿತ್ತು. ಈಗ ಮತ್ತೆ ಸೀಲ್ಡೌನ್ ಮಾಡಲಾಗಿದೆ. ಈ ಹಿಂದೆ ಕಂಟೈನ್ಮೆಂಟ್ ಝೋನ್‌ನಲ್ಲಿ ಠಾಣೆಯ ಪೊಲೀಸ್ ಕಾನ್ಸಟೇಬಲ್ ಒಬ್ಬರು ಕರ್ತವ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ಕೊರೋನಾ ಪಾಸಿಟಿವ್ ಬಂದಿತ್ತು. ಆಗ ಠಾಣೆಯ ಪಿಎಸ್‌ಐ ಸೇರಿದಂತೆ ಇತರ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಈಗ ಮತ್ತೆ ಈ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ ಕೊಲೆ ಆರೋಪಿಗೆ ಕೊರೋನಾ ಸೋಂಕು ದೃಢ ಪಟ್ಟಿದೆ. ಮುಂಜಾಗ್ರತೆ ಕ್ರಮವಾಗಿ ಇಬ್ಬರು ಪಿಎಸೈ ಸೇರಿ 6 ಜನರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಈ ಠಾಣೆಯನ್ನು ಖಾಸಗಿ ಶಿಕ್ಷಣ ಸಂಸ್ಥೆ ಶಾಲೆಗೆ ಸ್ಥಳಾಂತರಿಸಲಾಗಿದೆ.
SSLC ಪರೀಕ್ಷೆ: ಮೇಲ್ವಿಚಾರಕರ ಯಡವಟ್ಟು, ಪ್ರಶ್ನೆ ಪತ್ರಿಕೆ ಅದಲು ಬದಲು
ಬಸವನ ಬಾಗೇವಾಡಿಯಲ್ಲೂ ಪೊಲೀಸ್ ಠಾಣೆ ಸೀಲ್‌ಡೌನ್
ಠಾಣೆಯ 40 ವರ್ಷದ ಒಬ್ಬ ಹೆಡ್ ಕಾನ್ಸಟೇಬಲ್‌ಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಠಾಣೆ ಬಿಟ್ಟು ಎಲ್ಲಿಯೂ ಹೊರ ಹೋಗದ ಈ ಹೆಡ್ ಕಾನ್ಸಟೇಬಲ್‌ಗೆ ಪಾಸಿಟಿವ್ ಬಂದಿರುವುದು ಆರೋಗ್ಯ ಇಲಾಖೆ ಸಿಬ್ಬಂದಿಗೆ ತಲೆನೋವಾಗಿದೆ. ಪಾಸಿಟಿವ್ ಮೂಲ ಹುಡುಕಲು ಆರೋಗ್ಯ ಸಿಬ್ಬಂದಿ ಮುಂದಾಗಿದ್ದಾರೆ. ಈ ಕಾನ್ಸಟೇಬಲ್ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಲಾಗಿದೆ. ಈ ಕಾನ್ಸಟೇಬಲ್ ಜೊತೆ ಪ್ರಥಮ ಮತ್ತು ದ್ವಿತೀಯ ಹೊಂದಿದವರನ್ನು ಕ್ವಾರಂಟೈನ್ ಮಾಡಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಈ ಪೊಲೀಸ್ ಠಾಣೆಯನ್ನು ಸೀಲ್‌ಡೌನ್ ಮಾಡಿ ಪೊಲೀಸ್ ಇಲಾಖೆಯ ಪಕ್ಕದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
ಕೂಡಗಿ ಠಾಣೆಯೂ ಸೀಲ್‌ಡೌನ್
ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಪೊಲೀಸ್ ಠಾಣೆಯ ಪೇದೆಯೊಬ್ಬನಿಗೆ ಕೊರೋನಾ ದೃಢ ಪಟ್ಟಿರುವ ಹಿನ್ನೆಲೆಯಲ್ಲಿ ಕೂಡಗಿ ಠಾಣೆಯನ್ನೂ ಸೀಲ್‌ಡೌನ್ ಮಾಡಲಾಗಿದೆ. ಈ ಪೇದೆಯ ಪ್ರಥಮ ಹಾಗೂ ದ್ವಿತೀಯ ಸಂಪರ್ಕದವರನ್ನು ಗಂಟಲು ದ್ರವ ಸಂಗ್ರಹಿಸಿ ಕ್ವಾರಂಟೈನ್ ಮಾಡಲಾಗಿದೆ. ಸದ್ಯಕ್ಕೆ ಈ ಕೂಡಗಿ ಪೊಲೀಸ್ ಠಾಣೆಯನ್ನು ನಿಡಗುಂದಿ ಪೊಲೀಸ್ ಠಾಣೆ ಆವರಣಕ್ಕೆ ಸ್ಥಳಾಂತರಿಸಲಾಗಿದೆ.
ಕೊರೋನಾ ಪಾಸಿಟಿವ್ ದೃಢಪಟ್ಟಿರುವ ಪೊಲೀಸ್ ಇಲಾಖೆ ಸಿಬ್ಬಂದಿಯನ್ನು ಕೋವಿಡ್-19 ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸ್ ಠಾಣೆಗಳನ್ನು ಡಿಸ್ ಇನ್‌ಫೆಕ್ಷನ್ ಮಾಡಿ ಎಲ್ಲ ಅಗತ್ಯದ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ್ ಅವರು ತಿಳಿಸಿದ್ದಾರೆ.