ಕೊಪ್ಪಳ(ನ.21): ಕುಕನೂರು ತಾಲೂಕು ನಿಟ್ಟಾಲಿ ಗ್ರಾಮದ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿ 367ರಲ್ಲಿ ಬೈಕ್‌ ಅಡ್ಡ ಬಂದಿದ್ದರಿಂದ ಮಿನಿಬಸ್ಸು ಗುಂಡಿಗೆ ಬಿದ್ದು ನಾಲ್ವರು ಮೃತಪಟ್ಟಿರುವ ಘಟನೆ ಶುಕ್ರ​ವಾರ ಸಂಭ​ವಿ​ಸಿ​ದ್ದು, ಬೀಗರ ಮನೆಗೆ ಹೋಳಿಗೆ ಊಟಕ್ಕೆ ಹೋದವರು ಮಸಣ ಸೇರಿದಂತಾಗಿದೆ.

ಘಟ​ನೆ​ಯಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದ್ದು, 12 ಜನರು ತೀವ್ರವಾಗಿ ಗಾಯಗೊಂಡಿದ್ದು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರನ್ನು ಅಗಸನಕೊಪ್ಪ ಗ್ರಾಮದ ಭೀಮವ್ವ ಗೋಡಿ (60) ರಂಗಪ್ಪ ನಾಗಣ್ಣವರ (80), ಶಿವನಾಂದಪ್ಪ (60) ಹಾಗೂ ನಿಟ್ಟಾಲಿ ಗ್ರಾಮದ ಬೈಕ್‌ ಸವಾರ ಸಂತೋಷ (22) ಮೃತಪಟ್ಟಿರುವ ದುರ್ದೈವಿಗಳು. ಮಿನಿಬಸ್‌ ಚಾಲಕ ನಾಪತ್ತೆಯಾಗಿದ್ದಾನೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಅಗಸನಕೊಪ್ಪ ಗ್ರಾಮದ ಪರಸಪ್ಪ ಹಿಂದಿನಮನಿ ಅವರ ಮಗಳನ್ನು ಹಿರೇಹಸಿಂದೋಗಿ ಗ್ರಾಮದ ಪುಟ್ಟರಾಜ ಚನ್ನಪ್ಪ ಕೊಳ್ಳಿ ಅವರಿಗೆ ಬೀಗತನ ಮಾಡಲಾ​ಗಿದೆ. ಈ ಹಿನ್ನೆ​ಲೆ​ಯಲ್ಲಿ ಹೋಳಿಗೆ ಊಟಕ್ಕೆ ಆಗಮಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

ದೀಪಾವಳಿ ದಿನವೇ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ದುರ್ಮರಣ

ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಮಿನಿಬಸ್ಸು ಸಾಗುತ್ತಿದ್ದ ವೇಳೆ ನಿಟ್ಟಾಲಿ ಗ್ರಾಮದಿಂದ ಬೈಕ್‌ನಲ್ಲಿ ಆಗಮಿಸಿದ ಸಂತೋಷ ಮಿನಿಬಸ್ಸು ಗಮನಿಸದೇ ನೇರವಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಪ್ರವೇಶ ಮಾಡಿದ್ದಾರೆ. ಏಕಾಏಕಿ ಬೈಕ್‌ ಬಂದಿದ್ದರಿಂದ ಬೈಕ್‌ ಸವಾರನನ್ನು ಉಳಿಸಲು ಹೋಗಿ ಮಿನಿಬಸ್‌ ಚಾಲಕ ಸೈಡ್‌ ತೆಗೆದುಕೊಳ್ಳುವ ಯತ್ನ ಮಾಡಿದ್ದಾನೆ. ಆದರೆ, ಬೈಕ್‌ಗೆ ಠಕ್ಕರ್‌ ಕೊಟ್ಟಮಿನಿಬಸ್ಸು ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯ ಗುಂಡಿಗೆ ನುಗ್ಗಿದೆ. ರಸ್ತೆ ಬದಿಯಲ್ಲಿದ್ದ ಗಿಡವೊಂದಕ್ಕೆ ಡಿಕ್ಕಿ ಹೊಡೆದಿದೆ.

ಇದರಿಂದ ಮಿನಿಬಸ್ಸಿನಲ್ಲಿದ್ದ ಮೂವರು ಹಾಗೂ ಬೈಕ್‌ ಸವಾರ ಸ್ಥಳದಲ್ಲಿಯೇ ಮೃತ​ಪ​ಟ್ಟಿದ್ದಾರೆ. ತೀವ್ರ ಗಾಯಗೊಂಡಿರುವ ಸಂಗಪ್ಪ, ಕಳಸವ್ವ, ಬಸಪ್ಪ, ಶಾಂತವ್ವ ಹಾಗೂ ಅನ್ನಪೂರ್ಣವ್ವ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ಶಾಸಕರ ಭೇಟಿ:

ಶಾಸಕ ಹಾಲಪ್ಪ ಆಚಾರ್‌ ಅವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡುವಂತೆ ಆಸ್ಪತ್ರೆಯಲ್ಲಿನ ವೈದ್ಯರಿಗೆ ಸೂಚಿಸಿದರು. ಕೆಡಿಪಿ ಸಭೆಯಲ್ಲಿ ಭಾಗವಹಿಸಿದ್ದ ಅವರು ಊಟ ಮಾಡುತ್ತಿರುವ ವೇಳೆಯಲ್ಲಿ ಮಾಹಿತಿ ತಿಳಿದು, ತಕ್ಷಣ ಆಸ್ಪತ್ರೆಗೆ ಆಗಮಿಸಿ, ಮುತುವರ್ಜಿವಹಿಸಿ, ಗಾಯಾಳುಗಳ ಸರಿಯಾದ ಆರೈಕೆಗೆ ಸೂಚಿಸಿದರು.

ಈ ಸಂದ​ರ್ಭ​ದ​ಲ್ಲಿ ಮಾತನಾಡಿದ ಅವರು, ರಸ್ತೆ ಅಪಘಾತಗಳನ್ನು ತಪ್ಪಿಸಲು ರಸ್ತೆ ನಿಯಮಗಳನ್ನು ಪಾಲನೆ ಮಾಡುವುದು ತೀರಾ ಅಗತ್ಯವೆಂದರು. ದುರಂತ ನಡೆಯಬಾರದಿತ್ತು. ನಿಜಕ್ಕೂ ಅವರೆಲ್ಲರನ್ನು ನೋಡಿದರೇ ಕರುಳು ಚುರ್‌ ಎನ್ನುತ್ತದೆ ಎಂದ​ರು. ಸ್ಥಳಕ್ಕೆ ಎಸ್ಪಿ ಟಿ. ಶ್ರೀಧರ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಳಿಕ ಜಿಲ್ಲಾಸ್ಪತ್ರೆಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಒಬ್ಬನ ಉಳಿ​ಸಲು ಹೋಗಿ ನಾಲ್ವರ ಬಲಿ!

ಮದುವೆ ನಿಶ್ಚಯ ಮಾಡಿಕೊಂಡು ಸಂತಸ, ಸಂಭ್ರಮ ಮನೆ ಮಾಡಬೇಕಾಗಿದ್ದ ಅಲ್ಲಿ ಸೂತಕದ ಕಳೆ ತುಂಬಿತ್ತು. ಓರ್ವ ಬೈಕ್‌ ಚಾಲಕನ ಅಜಾಗರೂಕತೆ, ಅವಸರ, ಆವೇಗ ದೊಡ್ಡ ದುರಂತವನ್ನೇ ಸೃಷ್ಟಿಸಿತ್ತು. ತನ್ನೂರ ಕೂಡು ರಸ್ತೆಯ ಮೂಲಕ ಹೆದ್ದಾರಿ ಪ್ರವೇಶಿಸಬೇಕಾದರೆ ಮೈಮರೆಯದೇ ತೆಗೆದುಕೊಳ್ಳಬೇಕಾದ ಕನಿಷ್ಠ ಎಚ್ಚರಿಕೆ ಪಾಲಿಸಿದ್ದರೆ ಬೈಕ್‌ ಚಾಲಕನೂ ಉಳಿಯುತ್ತಿದ್ದನಲ್ಲದೇ ಇನ್ನೂ ಮೂವರು ಮೃತರಾಗಿ, ಹತ್ತಾರು ಜನರು ಗಾಯಗೊಂಡು ಸಾವು ನೋವಿನಲ್ಲಿ ಬಳಲಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಅಷ್ಟೇ ಅಲ್ಲ ಹತ್ತಾರು ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯಬೇಕಾದ ಪ್ರಸಂಗವೇ ಬರುತ್ತಿರಲಿಲ್ಲ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಅಗಸನಕೊಪ್ಪ ಗ್ರಾಮದ ಪರಸಪ್ಪ ಹಿಂದಿನಮನಿ ಅವರ ಮಗಳನ್ನು ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮದ ಚನ್ನಪ್ಪ ಕೊಳ್ಳಿ ಅವರ ಮಗ ಪುಟ್ಟರಾಜುಗೆ ಕೊಟ್ಟು ಮದುವೆ ಮಾಡುವ ಕುರಿತು ಹೋಳಿಗೆ ಊಟ ಮಾಡಿ, ನಿಶ್ಚಯ ಮಾಡಬೇಕಾಗಿತ್ತು. ಆದರೆ, ಬೀಗರ ಊರು ತಲುಪುವ ಮುನ್ನವೇ ದುರಂತ ನಡೆದು ಹೋಯಿತು.

ಕೆಲವರು ಕಾರು ಮತ್ತು ಟ್ರ್ಯಾಕ್ಸ್‌ನಲ್ಲಿ ತೆರಳಿ, ಹಿರೇಸಿಂದೋಗಿ ತಲುಪಿದ್ದರು. ಮಧ್ಯಾಹ್ನವಾದರೂ ಅವರು ಬಾರದೆ ಇದ್ದಾಗ ಪದೇ ಪದೇ ಕರೆ ಮಾಡಿದರೂ ಯಾರೂ ಕರೆಯನ್ನು ಸ್ವೀಕಾರ ಮಾಡುತ್ತಲೇ ಇರಲಿಲ್ಲ. ಇನ್ನು ಕೆಲವರ ಮೊಬೈಲ್‌ಗಳು ಸ್ವಿಚ್‌ ಆಫ್‌ ಆಗಿದ್ದವು. ಕಾರಿನಲ್ಲಿ ಮತ್ತು ಟ್ರ್ಯಾಕ್ಸ್‌ನಲ್ಲಿ ಬಂದಿದ್ದವರು ಹಿರೇಸಿಂದೋಗಿಯಲ್ಲಿ ಬೀಗರೊಂದಿಗೆ ಚಡಪಡಿಸಲಾರಂಭಿಸಿದರು.

ಹೀಗೆ ಚಡಪಡಿಸುತ್ತಿರುವಾಗಲೇ ಅಘಾತಕಾರಿ ಸುದ್ದಿ ಬಂದಿತ್ತು. ಬೀಗರು ಬರುತ್ತಿದ್ದ ಮಿನಿ ಬಸ್ಸು ಕುಕನೂರು ತಾಲೂಕಿನ ನಿಟ್ಟಾಲಿ ಕ್ರಾಸ್‌ ಬಳಿ ಅಪಘಾತಕ್ಕಿಡಾಗಿದೆ ಎಂಬ ಸುದ್ದಿ ಕೇಳಿ ಬರಸಿಡಿಲು ಬಡಿದಂತೆ ಆಯಿತು. ಅಪಘಾತದಲ್ಲಿ ಗಾಯಗೊಂಡವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಿ, ಚಿಕಿತ್ಸೆಯನ್ನು ನೀಡಲಾಗುತ್ತಿದ್ದ ವೇಳೆ ಆಗಮಿಸಿದ ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು.

ಅಜಾಗರೂಕತೆಯೇ ಕಾರಣ:

ಕೂಡು ರಸ್ತೆಯಿಂದ ಹೆದ್ದಾರಿ ಪ್ರವೇಶ ಮಾಡುವ ಬೈಕ್‌ ಸವಾರ ಒಂಚೂರು ಜಾಗರೂಕತೆ ವಹಿಸಿದ್ದರೂ ಈ ದುರಂತ ನಡೆಯುತ್ತಿರಲಿಲ್ಲ. ಹೆದ್ದಾರಿಯಲ್ಲಿ ಮಿನಿಬಸ್ಸು ಬರುವುದನ್ನು ಗಮನಿಸಿದೇ ನೇರವಾಗಿಯೇ ಪ್ರವೇಶ ಮಾಡಿದ್ದ ಬೈಕ್‌, ಮಿನಿ ಬಸ್ಸಿನ ಮುಂಭಾಗಕ್ಕೇ ಬಂದಿತ್ತು. ಚಾಲಕನಿಗೆ ನಿಯಂತ್ರಣ ಮಾಡಲು ಸಾಧ್ಯವಾಗಿಲ್ಲ. ಬೈಕ್‌ಗೆ ಬಸ್‌ ಡಿಕ್ಕಿ ಹೊಡೆಯುತ್ತದೆ ಎಂದು ತಪ್ಪಿಸಲು ಸೈಡ್‌ ತೆಗೆದುಕೊಂಡಿದ್ದರಿಂದಲೇ ಈ ದುರಂತ ನಡೆಯಿತು. ಬೈಕ್‌ ಸವಾರನ ಪ್ರಾಣ ಉಳಿಸುವ ಚಾಲಕನ ಕಾಳಜಿಯೇ ನಾಲ್ವರನ್ನು ಬಲಿ ಪಡೆದು, ಅನೇಕರು ಅಂಗಾಗ ಊನಗೊಂಡ ಜೀವನವೀಡಿ ನರಳುವಂತೆ ಮಾಡಿತು.

ಇದಕ್ಕಿಂತ ಮಿಗಿಲಾಗಿ ರಾಷ್ಟ್ರೀಯ ಹೆದ್ದಾರಿಯಾಗಿದ್ದರೂ ಯಾವುದೇ ಸಿಗ್ನಲ್‌ಗಳನ್ನು ಹಾಕಿಲ್ಲ. ಕೂಡು ರಸ್ತೆ ಸೇರುವ ಬಗ್ಗೆ ರಸ್ತೆಯಲ್ಲಿ ಮಾಹಿತಿ ಅಥವಾ ಸೂಚನಾ ಫಲಕ ಇಲ್ಲ. ಇನ್ನು ಗ್ರಾಮದ ರಸ್ತೆ ಹೆದ್ದಾರಿ ಪ್ರವೇಶ ಮಾಡುವ ಮುನ್ನ ಬಲವಾದ ಹಂಪ್‌ಗಳನ್ನು ಹಾಕಿದ್ದರೂ ಈ ದುರಂತ ನಡೆಯುತ್ತಿರಲಿಲ್ಲ. ಇದೊಂದು ಪಾಠವಾಗಿದ್ದು, ದುರಂತದಿಂದ ಇನ್ನಾದರೂ ಸಂಬಂಧಪಟ್ಟ ಇಲಾಖೆ ಹೆದ್ದಾರಿಗೆ ಕೂಡು ರಸ್ತೆಗಳು ಪ್ರವೇಶ ಮಾಡುವ ಮುನ್ನ ಮುಂಜಾಗ್ರತಾ ಕ್ರಮ ಅನುಸರಿಸಿ, ಕನಿಷ್ಠ ನಿಯಮಗಳನ್ನು ಪಾಲನೆ ಮಾಡುವಂತೆ ಆಗಬೇಕು ಎನ್ನುವುದು ಸ್ಪಷ್ಟ.ಈಗಲೇ ಅಪಘಾತಕ್ಕೆ ಕಾರಣವನ್ನು ಪತ್ತೆ ಮಾಡಲು ಆಗುವುದಿಲ್ಲ. ತನಿಖೆಯಲ್ಲಿ ಅದು ಗೊತ್ತಾಗುತ್ತದೆ. ಆದರೆ, ಕೂಡು ರಸ್ತೆ ಪ್ರವೇಶ ಮಾಡುವ ಸೂಚನೆಗಳು ರಸ್ತೆಯಲ್ಲಿ ಇರಲಿಲ್ಲ. ಅಲ್ಲದೆ ರಸ್ತೆ ನಿರ್ಮಾಣ ಈಗ ನಡೆದಿದೆ ಎಂದು ಕೊಪ್ಪಳ ಎಸ್ಪಿ ಟಿ. ಶ್ರೀಧರ ತಿಳಿಸಿದ್ದಾರೆ. 

ರಸ್ತೆ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದೆ ಇದ್ದರೇ ಏನಾಗುತ್ತದೆ ಎಂದು ಈ ಅಪಘಾತದಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ. ನಿಜಕ್ಕೂ ಬಹುದೊಡ್ಡ ದುರಂತವಾಗಿದೆ. ರಸ್ತೆ ಸುರಕ್ಷತಾ ಕ್ರಮಗಳು ಹಾಗೂ ನಿಯಮಗಳ ಪಾಲನೆ ತೀರಾ ಅಗತ್ಯ ಎಂದು ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್‌ ತಿಳಿಸಿದ್ದಾರೆ.