Asianet Suvarna News Asianet Suvarna News

ನಾರಾಯಣಪುರ ಡ್ಯಾಂ ಭರ್ತಿ: ಯಾವುದೇ ಕ್ಷಣದಲ್ಲಿ ಕೃಷ್ಣಾ ನದಿಗೆ ಪ್ರವಾ​ಹ, ಜನತೆ ಎಚ್ಚರದಿಂದರಲು ಸೂಚನೆ

*  ಬಸವಸಾಗರ ಜಲಾಶಯದಿಂದ ನೀರು ಹರಿಬಿಡುವ ಮುನ್ಸೂಚನೆ
*  ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ಹೆಚ್ಚಾದ ಒಳಹರಿವು
*  ನಾರಾಯಣಪುರ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಳ 
 

Instruct the People to be Cautious Due to Flood in Bank of River Krishna grg
Author
Bengaluru, First Published Jun 26, 2022, 2:20 PM IST

ಯಾದಗಿರಿ(ಜೂ.26): ಸುರಪುರ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯ ಭರ್ತಿಯಾಗುತ್ತಿದ್ದು, ಯಾವ ಸಂದರ್ಭದಲ್ಲಾದರೂ ನದಿಗೆ ನೀರು ಹರಿಬಿಡುವ ಸಾಧ್ಯತೆಯಿದೆ. ಆದ್ದರಿಂದ ಕೃ​ಷ್ಣಾ ನದಿ ತಟದ ಗ್ರಾಮಗಳ ಜನರು ಎಚ್ಚರದಿಂದ ಇರಬೇಕು ಎಂದು ಎಸ್‌ಪಿ ಡಾ. ಸಿ.ಬಿ. ವೇದಮೂರ್ತಿ ತಿಳಿಸಿದ್ದಾರೆ.

ನೆರೆಯ ಮಹಾರಾಷ್ಟ್ರ ಹಾಗೂ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕೆಲ ಭಾಗಗಳಲ್ಲಿ ಸುರಿದ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಇದರಿಂದ ನಾರಾಯಣಪುರ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ನಾರಾಯಣಪುರ ಜಲಾಶಯದ ಮಟ್ಟ490.97 ಮೀಟರ್‌ ಇದೆ. ಜೂ. 25ರಂದು ಜಲಾಶಯದಲ್ಲಿ 27.84 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿಯಾಗಲು 5.47 ಟಿಎಂಸಿ ಅಡಿ ನೀರು ಅವಶ್ಯಕತೆಯಿದೆ. ಹೀಗಾಗಿ ನದಿ ಪಾತ್ರದ ಜನರು ಎಚ್ಚರದಿಂದ ಇರಬೇಕು ಎಂದು ಜಿಲ್ಲಾಡಳಿತ ಮತ್ತು ಕೃಷ್ಣಾ ಭಾಗ್ಯ ಜಲ ನಿಗಮ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಬಾಲಕಿ ದೇವಮ್ಮಳ ಚಿಕಿತ್ಸೆಗೆ ಬೇಕಿದೆ ನೆರವಿನ ಹಸ್ತ: ದಾನಿಗಳ ಮೊರೆ ಹೋದ ಬಡ ಕುಟುಂಬ

ಎಡಿ​ಸಿ ಭೇಟಿ:

ನಾರಾಯಣಪುರ ಜಲಾಶಯಕ್ಕೆ ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ ಮತ್ತು ಸುರಪುರ ತಹಸೀಲ್ದಾರ್‌ ಸುಬ್ಬಣ್ಣ ಜಮಖಂಡಿ, ಹುಣಸಗಿ ತಹಸೀಲ್ದಾರ್‌ ಅಶೋಕ ಶಹಾಪೂರಕರ್‌ ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರಸ್ತುತ ನೀರಿನ ಸಂಗ್ರಹದ ಮಟ್ಟ ಪರಿಶೀಲಿಸಿದರು.

ಬಳಿಕ ಮಾತನಾಡಿದ ಎಡಿಸಿ ಶಂಕರಗೌಡ ಸೋಮನಾಳ, ನಾರಾಯಣಪುರದ ಬಸವಸಾಗರ ಜಲಾಶಯವು ಈಗಾಗಲೇ ಭರ್ತಿಯಾಗುತ್ತಿದೆ. ಒಂದು ವೇಳೆ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ಒಳಹರಿವು ಬಂದಲ್ಲಿ ನದಿಗೆ ನೀರು ಬಿಡುವ ಸಾಧ್ಯತೆಯಿದೆ. ಆದ್ದರಿಂದ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಜಂಗಿನಗಡ್ಡಿ, ಮೇಲಿನಗಡ್ಡಿ, ಜುಮಾಲಪುರ, ನೀಲಕಂಠರಾಯನಗಡ್ಡಿ, ತಿಂಥಣಿ, ಶೆಳ್ಳಗಿ ಸೇರಿ ನದಿ ತೀರದ ಗ್ರಾಮಗಳಲ್ಲಿ ಡಂಗುರ ಸಾರುವ ಮೂಲಕ ಸಾರ್ವಜನಿಕರಿಗೆ ಪಂಪ್‌ಸೆಟ್‌ ಹಾಗೂ ಜಾನುವಾರುಗಳನ್ನು ರಕ್ಷಿಸುವುದರ ಜೊತೆಗೆ ನದಿತೀರದತ್ತ ತೆರಳದಂತೆ ಮನವಿ ಮಾಡಿದರು.

ಕೆಬಿಜೆಎನ್‌ಎಲ್‌ ಎಇಇ ಆರ್‌.ಎಲ್‌. ಹಳ್ಳೂರು, ಜೆಇಇಗಳಾದ ಶಿವರಾಜ್‌ ಪಾಟೀಲ್‌, ಸುಬ್ರಹ್ಮಣ್ಯಂ, ನಾರಾಯಣಪುರ ಪುನರ್ವಸತಿ ಅಧಿಕಾರಿ ಹಣಮಪ್ಪ ಹಂಡರಗಲ್‌, ಪ್ರಭಾರಿ ಕಂದಯ ನಿರೀಕ್ಷಕ ಶಾಂತಪ್ಪ, ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಪೀರಾಪುರ, ಅಪ್ಪಣ್ಣ ಇತರರಿದ್ದರು.
 

Follow Us:
Download App:
  • android
  • ios