ಚಿನ್ನದ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ನಾಲ್ವರನ್ನು 24 ಗಂಟೆಯ ಒಳಗೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು [ಆ.23]: ಪ್ಯಾಲೆಸ್ ಗುಟ್ಟಹಳ್ಳಿಯ ವಿನಾಯಕ ದೇವಾಲಯ ಸರ್ಕಲ್ ಸಮೀಪ ಹಾಡಹಗಲೇ ಚಿನ್ನದ ವ್ಯಾಪಾರಿ ದಂಪತಿ ಮೇಲೆ ಗುಂಡಿನ ದಾಳಿ ನಡೆಸಿ ದರೋಡೆಗೆ ವಿಫಲ ಯತ್ನ ಮಾಡಿ ಪರಾರಿಯಾಗಿದ್ದ ಸೈನಿಕ ಸೇರಿದಂತೆ ನಾಲ್ವರು ದುಷ್ಕರ್ಮಿಗಳನ್ನು ಕೃತ್ಯ ನಡೆದ 24 ತಾಸಿನೊಳಗೆ ಶೇಷಾದ್ರಿಪುರ ಉಪ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಸೊಲ್ಲಾಪುರದ ಬಾಲಾಜಿ ರಮೇಶ್ ಗಾಯಕ್ವಾಡ್, ಹರಿಯಾಣ ಮೂಲದ ಬಿಎಸ್‌ಎಫ್ ಸೈನಿಕ ಬಲವಾನ್ ಸಿಂಗ್, ರಾಜಸ್ಥಾನದ ಶ್ರೀರಾಮ ಬಿಷ್ಣೋಯಿ, ಓಂಪ್ರಕಾಶ್ ಬಂಧಿತರಾಗಿದ್ದು, ಆರೋಪಿಗಳಿಂದ ನಾಡ ಪಿಸ್ತೂಲ್, ಜೀವಂತ ಗುಂಡುಗಳು ಹಾಗೂ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.
ಪ್ಯಾಲೆಸ್ ಗುಟ್ಟಹಳ್ಳಿಯ ಸಾಮ್ರಾಟ್ ಜ್ಯುವೆಲರ್ಸ್ ಮಾಲಿಕ ಆಶಿಶ್ ದಂಪತಿ ಮೇಲೆ ಬುಧವಾರ ಆರೋಪಿಗಳು ಗುಂಡಿನ ದಾಳಿ ನಡೆಸಿ ದರೋಡೆಗೆ ಯತ್ನಿಸಿದ್ದರು. ದಂಪತಿ ಪ್ರತಿರೋಧ ತೋರುತ್ತಿದ್ದಂತೆ ಪರಾರಿಯಾಗುವ ವೇಳೆ ಮಳಿಗೆಯಲ್ಲಿ ದರೋಡೆಕೋರನ ಜೇಬಿನಿಂದ ಕೆಳಗೆ ಬಿದ್ದಿದ್ದ ಮೊಬೈಲ್ ಫೋನ್ ನೀಡಿದ ಸುಳಿವು ಕಳ್ಳರ ಬಂಧನಕ್ಕೆ ಸಹಾಯಕವಾಗಿದೆ.
ಮಹಾರಾಷ್ಟ್ರದ ಬಾಲಾಜಿ ರಮೇಶ್ ಗಾಯಕ್ವಾಡ್, ಚಿನ್ನಾಭರಣ ಕೆಲಸಗಾರನಾದ ಆತ, ಮೆಜೆಸ್ಟಿಕ್‌ನ ರಾಜಾ ಮಾರ್ಕೆಟ್‌ನಲ್ಲಿ ಕಾಲುಂಗರ ತಯಾರಿಕೆಯಲ್ಲಿ ತೊಡಗಿದ್ದ. ಮತ್ತೊಬ್ಬ ಆರೋಪಿ ಬಲವಾನ್ ಸಿಂಗ್ ಬಿಎಸ್‌ಎಫ್‌ನಲ್ಲಿದ್ದು, ಆಶಿಸ್ತು ತೋರಿದ ಆರೋಪದ ಮೇರೆಗೆ ಆತ ಅಮಾನತುಗೊಂಡಿದ್ದ. ಇನ್ನುಳಿದ ಇಬ್ಬರು, ಸ್ಟೈನ್‌ಲೆಸ್ ಸ್ಟೀಲ್ ತಯಾರಿ ಕೆಲಸಗಾರರಾಗಿದ್ದರು.
ಮೊದಲು ನಗರದಲ್ಲಿ ಕೆಲಸ ಮಾಡಿದ ಬಾಲಾಜಿ, ಆನಂತರ ತನ್ನೂರಿಗೆ ಮರಳಿ ಅಲ್ಲಿಂದ ಕೇರಳದಲ್ಲಿ ದುಡಿಮೆ ಮುಂದುವರಿಸಿದ್ದ. ಈ ವೇಳೆ ಆತನಿಗೆ ಸೈನಿಕ ಬಲವಾನ್ ಸ್ನೇಹವಾಯಿತು. ನಂತರ ಇನ್ನುಳಿದವರು ಸಂಪರ್ಕಕ್ಕೆ ಬಂದಿದ್ದಾರೆ. ದರೋಡೆ ಸಲುವಾಗಿ ಇಪ್ಪತ್ತು ದಿನಗಳ ಹಿಂದೆ ಕೇರಳದಿಂದ ನಗರಕ್ಕೆ ಮರಳಿದ ಬಾಲಾಜಿ, ಓಂಪ್ರಕಾಶ್‌ನ ಮನೆಯಲ್ಲಿ ನೆಲೆಸಿದ್ದ. ವೈಯಾಲಿಕಾವಲ್ ಮಾರ್ಗದಲ್ಲಿ ಕೆಲಸಕ್ಕೆ ಹೋಗುತ್ತಿದ್ದರಿಂದ ಬಾಲಾಜಿಗೆ ವಿನಾಯಕ ದೇವಾಲಯ ಸರ್ಕಲ್ ವ್ಯಾಪ್ತಿಯ ಚಿನ್ನಾಭರಣ ಮಳಿಗೆಗಳ ಮೇಲೆ ಕಣ್ಣು ಬಿದ್ದಿತ್ತು. ಆ ಜ್ಯುವಲೆರ್‌ಗಳಲ್ಲಿ ದರೋಡೆಗೆ ಸಂಚು ರೂಪಿಸಿದ ಆರೋಪಿಗಳು, ಮೂರು ದಿನ ಮಾಹಿತಿ ಸಂಗ್ರಹಿಸಿದ್ದರು.
ವಂಶಿ ಜ್ಯುವೆಲರ್ಸ್ಸ್ ಮೇಲೆ ಕಣ್ಣು:
ಸಾಮ್ರಾಟ್ ಜ್ಯುವೆಲರ್ಸ್ ಮಳಿಗೆಗೆ ದಾಳಿಗೂ ಮುನ್ನ ಬಾಲಾಜಿ ತಂಡ, ಹಿಂದಿನ ದಿನ ಅದೇ ರಸ್ತೆಯ ವಂಶಿ ಜ್ಯುವೆಲೆರ್ಸ್ನಲ್ಲಿ ದರೋಡೆಗಾಗಿ ತೆರಳಿದ್ದರು. ಆದರೆ ಆ ಮಳಿಗೆಯಲ್ಲಿ ಸಿಸಿಟಿವಿ ಕ್ಯಾಮೆರಾ ಗಮನಿಸಿ, ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸಿದ್ದರು. ಇದಾದ ನಂತರ ಸಾಮ್ರಾಟ್ ಮಳಿಗೆ ದರೋಡೆಗೆ ಯೋಜನೆ ರೂಪಿಸಿದ್ದರು. ದರೋಡೆಗೆ ಪಿಸ್ತೂಲ್ ಬಳಸುವ ಸಲುವಾಗಿಯೇ ಬಲವಾನ್‌ನನ್ನು ಬಾಲಾಜಿ ಕರೆಸಿಕೊಂಡಿದ್ದ. ಪಿಸ್ತೂಲ್ ಬಾಲಾಜಿ ಬಳಿ ಇತ್ತು ಎಂದು ಪೊಲೀಸರು ಹೇಳಿದ್ದಾರೆ.
ಮೊಬೈಲ್ ನೀಡಿದ ಸುಳಿವು
ಸಾಮ್ರಾಟ್ ಮಳಿಗೆಗೆ ಬುಧವಾರ ಮಧ್ಯಾಹ್ನ ಬಾಲಾಜಿ ತಂಡ ಬಂದಿದೆ. ಶ್ರೀರಾಮ್, ತನಗೆ ಸಚಿನ್ ಚೈನ್ ತೋರಿಸುವಂತೆ ವ್ಯಾಪಾರಿ ಅಶಿಶ್ ಅವರಿಗೆ ಕೇಳಿದ್ದಾನೆ. ಆ ವೇಳೆ ಹೆಲ್ಮಟ್ ಧರಿಸಿದ್ದ ಬಲವಾನ್ ಮಳಿಗೆ ಬಾಗಿಲಿನಲ್ಲಿ ನಿಂತಿದ್ದರೆ, ಇನ್ನುಳಿದ ಇಬ್ಬರು ಗೇಟ್ ಬಳಿ ನಿಂತು ಕಾಯುತ್ತಿದ್ದರು. ಆದರೆ ಗ್ರಾಹಕನ ಮೇಲೆ ಅನುಮಾನಗೊಂಡು ಆಶಿಶ್ ಚೈನ್ ತೋರಿಸಲು ತಡ ಮಾಡುತ್ತಿದ್ದಂತೆ ಬಲವಾನ್, ಗೋಡೆಗೆ ನಾಡ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಬೆದರಿಸಿದ್ದಾನೆ. ಈ ಹಂತದಲ್ಲಿ ಅಶಿಶಿ ಪತ್ನಿ ರಾಖಿ, ಸ್ಟಿಲ್ ಸ್ಟೂಲ್ ತೆಗೆದು ಆರೋಪಿಗಳ ಕಡೆಗೆ ಎಸೆದಿದ್ದಾರೆ. ಇದರಿಂದ ಭಯಗೊಂಡು ಆರೋಪಿಗಳು ಕಾಲ್ಕಿತ್ತಿದ್ದಾರೆ. ಈ ಹಂತದಲ್ಲಿ ಬಾಲಾಜಿ ಜೇಬಿನಲ್ಲಿದ್ದ ಮೊಬೈಲ್ ಕೆಳಗೆ ಬಿದ್ದಿದೆ.
ಈ ಮೊಬೈಲ್ ಕರೆಗಳ ಪರಿಶೀಲಿಸಿದ ಪೊಲೀಸರಿಗೆ ಆರೋಪಿಗಳು ಕೆ.ಆರ್.ಪುರ ವ್ಯಾಪ್ತಿಯಲ್ಲಿ ವಾಸ್ತವ್ಯ ಹೂಡಿರುವ ಸಂಗತಿ ಗೊತ್ತಾಯಿತು. ಪೊಲೀಸರು, ಡಿವಿಜಿ ಬಡಾವಣೆಯಲ್ಲಿ ನಾಡಾ ಪಿಸ್ತೂಲ್ ಸಮೇತ ದರೋಡೆಕೋರರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ದರೋಡೆಗಾಗಿ ಬೈಕ್ ಕಳ್ಳತನ!
ದರೋಡೆ ಕೃತ್ಯಗಳಿಗೆ ಬಾಲಾಜಿ ತಂಡವು, ಕೆ.ಆರ್.ಪುರ ಬಳಿ ಸ್ಪೆ$್ಲಂಡರ್, ರೇಸ್ ಕೋರ್ಸ್ ರಸ್ತೆಯಲ್ಲಿ ಪಲ್ಸರ್ ಕದ್ದಿದ್ದರು. ಕೃತ್ಯ ಎಸಗಿದ ಬಳಿಕ ಪಲ್ಸರ್ ಬೈಕ್‌ಅನ್ನು ಅಂಗಡಿ ಮುಂಭಾಗ, ಮತ್ತೊಂದು ಬೈಕನ್ನು ಹತ್ತಿರದಲ್ಲೇ ಬಿಟ್ಟು ಪರಾರಿಯಾಗಿದ್ದರು. ವೈಯಾಲಿಕಾವಲ್ ಸರ್ಕಲ್‌ನಿಂದ ಆಟೋ ಹತ್ತಿ ಕೆ.ಆರ್.ಪುರಕ್ಕೆ ತೆರಳಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡು ಹಾರಿಸಿದ್ದು ಸೈನಿಕ!
ಬಿಎಸ್‌ಎಫ್ ಸೈನಿಕ ಬಲವಾನ್ ಸಿಂಗ್ ವ್ಯಾಪಾರಿ ಆಶಿಶ್ ದಂಪತಿ ಬೆದರಿಸಲು ಗುಂಡು ಹಾರಿಸಿದ್ದ. ಸೇನೆಯಲ್ಲಿ ರಜೆ ಪಡೆದು ಊರಿಗೆ ಬಂದಿದ್ದಾಗ ಬಲವಾನ್, ಜಮೀನು ವಿವಾದದಲ್ಲಿ ತನ್ನ ಎದುರಾಳಿಗಳ ಮೇಲೆ ಗುಂಡು ಹಾರಿಸಿದ ತಪ್ಪಿಗೆ ಅಮಾನತುಗೊಂಡಿದ್ದ.
ಚಿನ್ನದ ವ್ಯಾಪಾರಿ ಮೇಲಿನ ಗುಂಡಿನ ದಾಳಿ ಪ್ರಕರಣ ಪತ್ತೆ ಹಚ್ಚಿದ ತನಿಖಾ ತಂಡಕ್ಕೆ .1 ಲಕ್ಷ ಬಹುಮಾನ ನೀಡಲಾಗುತ್ತದೆ. ಮುಖ್ಯಮಂತ್ರಿಗಳು ಸಹ ಪೊಲೀಸರಿಗೆ ಅಭಿನಂದಿಸಿದ್ದಾರೆ. ಚಿನ್ನಾಭರಣ ವ್ಯಾಪಾರಿಗಳು ಭದ್ರತೆಗೆ ಬಗ್ಗೆ ಗಮನಹರಿಸಬೇಕು.
ಭಾಸ್ಕರ್ ರಾವ್, ಪೊಲೀಸ್ ಆಯುಕ್ತರು, ಬೆಂಗಳೂರು ನಗರ.
