ಕಾಳಸಂತೆಯಲ್ಲಿ ರೆಮಿಡಿಸಿವರ್ ಮಾರಲು ಯತ್ನ: 4 ಮಂದಿ ಬಂಧನ
ಬೆಂಗಳೂರಿನ ಐದು ಕಡೆ ದಾಳಿ| ಔಷಧ ವ್ಯಾಪಾರಿಗಳ ಬಂಧನ| ಸರ್ಕಾರ ನಿಗದಿ ಪಡಿಸಿರುವ ಬೆಲೆಗಿಂತ 11 ಸಾವಿರ ಹೆಚ್ಚಿನ ಬೆಲೆಗೆ ಮಾರಾಟ| 10 ಬಾಟಲ್ ರೆಮಿಡಿಸಿವರ್ ಚುಚ್ಚುಮದ್ದು ಜಪ್ತಿ| ಆರೋಪಿಗಳ ವಿರುದ್ಧ ತಿಲಕನಗರ ಠಾಣೆಯಲ್ಲಿ ಪ್ರಕರಣ ದಾಖಲು|
ಬೆಂಗಳೂರು(ಏ.22): ಕಾಳಸಂತೆಯಲ್ಲಿ ಕೊರೋನಾ ಚಿಕಿತ್ಸೆಗೆ ಮದ್ದು ರೆಮಿಡಿಸಿವರ್ ದಂಧೆ ವಿರುದ್ಧ ಸಿಸಿಬಿ ಕಾರ್ಯಾಚರಣೆ ಮುಂದುವರೆದಿದ್ದು, ಮತ್ತೆ ನಗರದ ಐದು ಕಡೆ ದಾಳಿ ನಡೆಸಿ ಔಷಧ ವ್ಯಾಪಾರಿಗಳನ್ನು ಬಂಧಿಸಿದ್ದಾರೆ.
ಜಯನಗರ 3ನೇ ಹಂತ ಎಲ್‌ಐಸಿ ಕಾಲೋನಿಯಲ್ಲಿನ ರಾಮ್ ದೇವ್ ಡ್ರಗ್ ಹೌಸ್ ಏಜೆನ್ಸಿಯಲ್ಲಿ ಮೇಲೆ ದಾಳಿ ನಡೆಸಿದ ಸಿಸಿಬಿ, ಸರ್ಕಾರ ನಿಗದಿ ಪಡಿಸಿರುವ ಬೆಲೆಗಿಂತ 11 ಸಾವಿರ ಹೆಚ್ಚಿನ ಬೆಲೆಗೆ ಮಾರುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ. ಈ ವೇಳೆ ಏಜೆನ್ಸಿಯ ಧಂರಾಮ್ ಪಾಟೀಲ್, ಚಂಪಲಾಲ್ ಮತ್ತು ಶಂಕರ್‌ನನ್ನು ಬಂಧಿಸಿದ್ದಾರೆ. ಬಳಿಕ 10 ಬಾಟಲ್ ರೆಮಿಡಿಸಿವರ್ ಚುಚ್ಚುಮದ್ದು ಜಪ್ತಿ ಮಾಡಲಾಗಿದೆ. ಆರೋಪಿಗಳ ವಿರುದ್ಧ ತಿಲಕನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಕ್ಸಿಜನ್, ರೆಮ್ಡಿಸ್‌ವಿರ್ ಪೂರೈಕೆಗೆ ವಾರ್ ರೂಂ ಸ್ಥಾಪನೆ: ಡಾ. ಸುಧಾಕರ್ ಭರವಸೆ
ಅದೇ ರೀತಿ ಇಂದಿರಾನಗರ 1ನೇ ಹಂತ ಬಿಎಂಶ್ರೀ ವೃತ್ತದಲ್ಲಿ ಮತ್ತೊಬ್ಬ ಸಿಸಿಬಿ ಬಲೆಗೆ ಬಿದ್ದಿದ್ದಾನೆ. ಸರ್ಜಿಕಲ್ ಫಾರ್ಮಾಸಿ ನೌಕರ ವಿಷ್ಣುವರ್ಧನ್ (43) ಬಂಧಿತನಾಗಿದ್ದು, ರೆಮಿಡಿಸಿವರ್ ಚುಚ್ಚುಮದ್ದನ್ನು .11 ಸಾವಿರಕ್ಕೆ ಮಾರಲು ಯತ್ನಿಸಿದ್ದ. ಆತನಿಂದ ನಾಲ್ಕು ಇಂಜೆಕ್ಷನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಡಿವಾಳ, ವಿವೇಕನಗರ ಹಾಗೂ ಕೋರಮಂಗಲ ವ್ಯಾಪ್ತಿಯಲ್ಲಿ ಸಹ ಸಿಸಿಬಿ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.