'ಯಡಿಯೂರಪ್ಪ ಸರ್ಕಾರ ಹೆಣದ ಮೇಲೆ ಹಣ ಸಂಪಾದಿಸುತ್ತಿದೆ'
ಸೋಂಕು ತಡೆಯುವಲ್ಲಿ ಸರ್ಕಾರ ವಿಫಲ: ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್| ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರಿಗೆ ಗ್ರಾಮ ಪಂಚಾಯಿತಿ ಸದಸ್ಯರಾಗಲು ಅರ್ಹತೆ ಇಲ್ಲ, ಅಂತಹ ವ್ಯಕ್ತಿಗೆ ಸರ್ಕಾರದಲ್ಲಿ ಉನ್ನತ ಹುದ್ದೆ ನೀಡಿದ್ದಾರೆ| ಇಲ್ಲಿವರೆಗೆ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಸಮಸ್ಯೆ ಆಲಿಸಿಲ್ಲ. ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಪ್ರಯತ್ನವನ್ನು ಮಾಡಿಲ್ಲ|
ರಾಮನಗರ(ಜು.30): ಕೋವಿಡ್ ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಹೆಣದ ಮೇಲೆ ಹಣ ಸಂಪಾದಿಸುವ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ವಾಗ್ದಾಳಿ ನಡೆಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ಸೋಂಕಿತರ ಹೆಸರಿನಲ್ಲಿ ಸಾವಿರಾರು ಕೋಟಿ ರುಪಾಯಿ ಭ್ರಷ್ಟಾಚಾರ ಮಾಡಿರುವ ಬಿಜೆಪಿ ಸರ್ಕಾರ ಹೆಣದ ಮೇಲೂ ಹಣ ಸಂಪಾದಿಸುತ್ತಿದೆ ಎಂದು ಟೀಕಿಸಿದರು.
'ಸಿ.ಪಿ. ಯೋಗೇಶ್ವರ್ ರಾಜ್ಯ ರಾಜಕಾರಣದಲ್ಲಿ ಗೆಲ್ಲುವ ಕುದುರೆ'
ಅಂತ್ಯಸಂಸ್ಕಾರ ಸಂಪ್ರದಾಯ ಉಲ್ಲಂಘನೆ
ಕೋವಿಡ್ ಸೋಂಕಿತರೆಂದು ಆಸ್ಪತ್ರೆಗೆ ದಾಖಲಾದ ವ್ಯಕ್ತಿಗಳು ಹೆಣವಾಗಿ ಹೊರಗೆ ಬರುತ್ತಿದ್ದಾರೆ. ಧರ್ಮ, ಸಂಸ್ಕಾರ ಹಾಗೂ ಸಂಸ್ಕೃತಿಯ ಪರಿಚಾರಕರೆಂದು ಹೇಳಿಕೊಳ್ಳುವ ಬಿಜೆಪಿ ಸರ್ಕಾರ ಮೃತ ಸೋಂಕಿತ ವ್ಯಕ್ತಿಗಳ ಅಂತ್ಯಸಂಸ್ಕಾರವನ್ನು ಸಂಪ್ರದಾಯ ಪ್ರಕಾರ ನೆರವೇರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಿಸಿದೆ ಎಂದರು.
ಆಸ್ಪತ್ರೆಗಳಲ್ಲಿ ಸೌಲಭ್ಯಗಳಿಲ್ಲ
ಕೊರೋನಾ ನಿಯಂತ್ರಣಕ್ಕೆ ಬಾರದಿರುವ ಕಾರಣ ವೈದ್ಯರು ಅಸಹಾಯಕತೆ ಹಾಗೂ ಸಾವಿನ ಮನೆಯ ರೋದನ ಸರ್ಕಾರಕ್ಕೆ ಕಾಣುತ್ತಿಲ್ಲ. ಕೋವಿಡ್ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಬಿಸಿ ನೀರು, ಶೌಚಾಲಯದಂತಹ ಕನಿಷ್ಠ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರದಿಂದ ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರಿಗೆ ಗ್ರಾಮ ಪಂಚಾಯಿತಿ ಸದಸ್ಯರಾಗಲು ಅರ್ಹತೆ ಇಲ್ಲ. ಅಂತಹ ವ್ಯಕ್ತಿಗೆ ಸರ್ಕಾರದಲ್ಲಿ ಉನ್ನತ ಹುದ್ದೆ ನೀಡಿದ್ದಾರೆ. ಇಲ್ಲಿವರೆಗೆ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಸಮಸ್ಯೆ ಆಲಿಸಿಲ್ಲ. ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಪ್ರಯತ್ನವನ್ನು ಮಾಡಿಲ್ಲ ಎಂದು ಇಕ್ಬಾಲ್ ಹುಸೇನ್ ದೂರಿದರು.