ಧಾರವಾಡ(ಡಿ. 02): ಕೃಷಿಗೆ ಸಂಬಂಧಿಸಿದ ಮೂರು ಕಾನೂನುಗಳನ್ನು ಜಾರಿಗೆ ತರುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನೀತಿ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಚಳುವಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದೇ ಸರ್ವಾಧಿಕಾರ ಧೋರಣೆ ತೋರುತ್ತಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ, ರೈತ ಮುಖಂಡ ಬಾಬಾಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕಾನೂನುಗಳ ಜಾರಿಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎನ್ನುವ ಪ್ರಧಾನಿ, ಡಿ. 3ರಂದು ರೈತರಿಗೆ ಕಾನೂನುಗಳ ಕುರಿತು ಮನವರಿಕೆ ಮಾಡಲು ಸಭೆ ನಡೆಸುತ್ತಿದ್ದಾರೆ. ತಮ್ಮ ನಿಲುವು ಬದಲಿಸಿಕೊಳ್ಳದ, ರೈತರ ಚಳವಳಿಗೆ ಮಾನ್ಯತೆ ನೀಡದಿರುವ ಪ್ರಧಾನಿ ಸಭೆಗೆ ಹೋರಾಟಗಾರರು ಹೋಗುವ ಅವಶ್ಯಕತೆ ಇಲ್ಲ.

ಪ್ರಧಾನಿ ಜನಪರವಾಗಿಲ್ಲ. ಅವರು ಎಂದೂ ಒಕ್ಕಲುತನ ಮಾಡಿಲ್ಲ. ಆದ್ದರಿಂದ ರೈತರ ಬವಣೆ ಅವರಿಗೆ ತಿಳಿಯುತ್ತಿಲ್ಲ. ರೈತರಿಗೆ ಖಾಸಗಿ ಕಂಪನಿಗಳು ಹೇಗೆ ಮೋಸ ಮಾಡುತ್ತವೆ ಎನ್ನುವುದು ಗೊತ್ತಾಗುವುದಿಲ್ಲ. ರೈತರ ಹೋರಾಟಕ್ಕೆ ಕರ್ನಾಟಕದ ಎಲ್ಲ ರೈತರ ಸಂಪೂರ್ಣ ಬೆಂಬಲವಿದ್ದು, ಡಿ. 3ರ ನಂತರದ ಬೆಳವಣಿಗೆ ನೋಡಿಕೊಂಡು ಡಿ. 4ರಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಧರಣಿ ಕೂರಲು ತೀರ್ಮಾನಿಸಿದ್ದೇವೆ ಎಂದರು.

ನಾಯಕತ್ವ ಬದಲಾವಣೆ ಚರ್ಚೆ ಮಧ್ಯೆ ಬಿಎಸ್‌ವೈ ಸ್ಥಾನದ ಬಗ್ಗೆ ಭವಿಷ್ಯ ನುಡಿದ ಸ್ವಾಮೀಜಿ..!

ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿದ್ದು ಇದರಿಂದ ರೈತರಿಗೆ ಉತ್ತಮ ಬೆಲೆ ಸಿಗಲಿದೆ. ಖಾಸಗಿ ಉದ್ಯಮಿಗಳಿಂದ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದೆಲ್ಲ ಹೇಳಲಾಗುತ್ತಿದೆ. ಇದರಿಂದ ಎಪಿಎಂಸಿಯಲ್ಲಿ ಖಾಸಗೀಕರಣಗೊಂಡು ಕೃಷಿ ಬೆಳೆಗಳನ್ನು ಒಬ್ಬಾತ ಎಷ್ಟಾದರೂ ಸಂಗ್ರಹ ಮಾಡಿಕೊಳ್ಳಲು ಅವಕಾಶವಿದೆ. ಕಡಿಮೆ ಬೆಲೆಗೆ ರೈತರಿಂದ ಖರೀದಿಸಿ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದೇ ಇದರ ಉದ್ದೇಶ. ಈ ಕಾನೂನುಗಳ ತಿದ್ದುಪಡಿಯಿಂದ ದೊಡ್ಡ ಕಂಪನಿಗಳಿಗೆ ದೇಶದ ರೈತರ ಉತ್ಪನ್ನಗಳನ್ನು ಮಾರಾಟ ಮಾಡುವ ಒಳಗುಟ್ಟು ಹೊಂದಲಾಗಿದೆ ಎಂದು ಆರೋಪಿಸಿದ ಬಾಬಾಗೌಡ ಪಾಟೀಲ, ರೈತರನ್ನು ಖಾಸಗಿ ಕಂಪನಿಗಳ ಕಾಲಕೆಳಗೆ ಹಾಕಬೇಕೆಂಬ ಹುನ್ನಾರ ಹೊಂದಲಾಗಿದೆ. ಈಸ್ಟ್‌ ಇಂಡಿಯಾ ಕಂಪನಿಯ ಅಪ್ಪನಂತೆ ಈಗಿನ ಕೇಂದ್ರ ಸರ್ಕಾರ ವರ್ತನೆ ತೋರುತ್ತಿದೆ. ಇದು ಪ್ರಜಾಸತ್ತೆ ಎನಿಸುತ್ತಿಲ್ಲ. ದುಡ್ಡಿನಸತ್ತೆ ಎನಿಸುತ್ತಿದೆ ಎಂದು ಕಿಡಿಕಾರಿದರು.

ಇದರೊಂದಿಗೆ ಬೇಕಾದಷ್ಟುಜಮೀನು ಹೊಂದಬಹುದು ಎಂಬ ಕಾನೂನು ಸಹ ರೈತರಿಗೆ ಮಾರಕ. ದೇಶದ ಅನವಶ್ಯಕ ಭೂಮಿಯನ್ನು ಐಟಿಸಿ ಕಂಪನಿಗೆ ಕೊಡಲಾಗುತ್ತಿದೆ. ರೈತರಿಗೆ, ಬಡವರಿಗೆ ಈ ಜಮೀನು ಕೊಟ್ಟಿದ್ದರೆ ತೊಂದರೆ ಆಗುತ್ತಿತ್ತಾ ಎಂದು ಪ್ರಶ್ನಿಸಿದರು. ಜನರನ್ನು ಬದುಕಿಸುವ ಯೋಜನೆ ಬದಲು ನಮ್ಮನ್ನು ಜೀತದಾಳನ್ನಾಗಿಸುತ್ತಿದ್ದಾರೆ ಎಂದು ಆರೋಪಿಸಿದರು.

ಷಂಡ ಸರ್ಕಾರವೇ?:

ಈ ಚಳವಳಿ ಕುರಿತು ಬಿಜೆಪಿ ಮುಖಂಡರು ಏನೆಲ್ಲ ಅಸಂಬಂಧ ಹೇಳಿಕೆ ನೀಡುತ್ತಿದ್ದಾರೆ. ಕೇವಲ ಖಲೀಸ್ಥಾನ ಜನರು ಚಳವಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಏಕೆ ಭಾರತ ಸರ್ಕಾರ ಷಂಡ ಸರ್ಕಾರವೇ? ರೈತರ ಹೆಸರಿನಲ್ಲಿ ಖಲೀಸ್ತಾನಿ ಚಳವಳಿ ಮಾಡಿದ್ದರೆ ಅವರನ್ನು ಹಿಡಿದು ಒಳಗೆ ಹಾಕಲು ತಾಕತ್ತು ಇಲ್ಲವೇ? ನಿಮ್ಮಲ್ಲಿ ಗುಪ್ತಚರ ಇಲ್ಲವೇ? ಪೊಲೀಸರು ಇಲ್ಲವೇ? ಸುಮ್ಮನೆ ಆರೋಪ ಬೇಡ. ಚಳವಳಿ ಮಾಡುವವರು ಭಯೋತ್ಪಾದಕರು ಎನ್ನುವುದಾದರೆ ಅವರನ್ನು ಒಳಗೆ ಹಾಕಿ ಏತಕ್ಕೆ ಆ ಕಾರ್ಯ ಮಾಡುತ್ತಿಲ್ಲ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಆಗಿನ ಯುಪಿಎ ಸರ್ಕಾರ ಇದ್ದಾಗಿನ ಅನುದಾನ, ಈಗಿನ ಅನುದಾನದ ಹಂಚಿಕೆ ಬಗ್ಗೆ ಬಿಜೆಪಿ ಮುಖಂಡರೊಬ್ಬರು ಮಾತನಾಡುತ್ತಾರೆ. ನಾನು ಶಾಸಕನಿದ್ದಾಗ ತಿಂಗಳಿಗೆ 500 ಸಂಬಳ. ಈಗ ಲಕ್ಷವಿದೆ. ಇದಕ್ಕೆ ಏನನ್ನಬೇಕು? ಅವತ್ತಿಗೆ, ಇವತ್ತಿಗೆ 100ರಿಂದ  1000 ಪಟ್ಟ ಹೆಚ್ಚಾಗಿದೆ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಟಾಂಗ್‌ ನೀಡಿದರು.

ದೇವರ ರಾಜಕಾರಣ:

ದೇಶದ ಜನರ ರಕ್ತದಲ್ಲಿ ಧಾರ್ಮಿಕ ನಂಬಿಕೆಗಳಿವೆ. ಬಿಜೆಪಿ ಮುಖಂಡರು ಆ ಭಾವನೆಗಳನ್ನು ಶೋಷಣೆ ಮಾಡುತ್ತಿದ್ದಾರೆ. ಇದು ಜನವಿರೋಧಿ ನೀತಿ. ಅಲ್ಲದೇ, ದೇವರನ್ನು ರಾಜಕಾರಣಕ್ಕೆ ತಂದು ದೇಶ ಹಾಳು ಮಾಡಬೇಡಿ. ದೇವರನ್ನು ಸಂಸತ್ತಿನಲ್ಲಿ ತರಬೇಡಿ. ಅದು ಸಹ ಸಂಸ್ಕೃತ ಭಾಷೆಯ ದೇವರಿಗೆ ಮಾತ್ರ ಮನ್ನಣೆ ಸಿಗುತ್ತಿದೆ. ಹಾಗೆಂದ ಮಾತ್ರಕ್ಕೆ ರಾಮನ ಪೂಜೆ ಮಾಡಬೇಡಿ ಎಂದಿಲ್ಲ. ಆದರೆ, ದೇಶ, ಬದುಕು ಬದುವಂತೆ ಆಡಳಿತ ಮಾಡಿ. ಇದು ಬಹಳ ದಿನ ನಡೆಯುವುದಿಲ್ಲ. ಅವರ ಅಂತ್ಯದ ಕಾಲ ಬರಲಿದೆ. ಅಲ್ಲಿಯ ವರೆಗೆ ಕಾಯೋಣ ಎಂದು ಬಾಬಾಗೌಡ ಪಾಟೀಲ್‌ ಹೇಳಿದರು.