Asianet Suvarna News Asianet Suvarna News

ಬೆಳಗಾವಿ: ಕೇಂದ್ರದ ಮಾಜಿ ಸಚಿವ, ರೈತ ಮುಖಂಡ ಬಾಬಾಗೌಡ ಪಾಟೀಲ ಇನ್ನಿಲ್ಲ

* ರೈತ ಮುಖಂಡ ಬಾಬಾಗೌಡ ಪಾಟೀಲ ವಿಧಿವಶ
* ತಮ್ಮ ಜೀವನದುದ್ದಕ್ಕೂ ತಮ್ಮನ್ನು ರೈತ ಪರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಪಾಟೀಲ
* ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ

Former Union Minister Babagouda Patil Passed Away in Belagavi grg
Author
Bengaluru, First Published May 21, 2021, 11:33 AM IST

ಬೆಳಗಾವಿ(ಮೇ.21): ಕೇಂದ್ರದ ಮಾಜಿ ಸಚಿವ, ರೈತ ಮುಖಂಡ ಬಾಬಾಗೌಡ ಪಾಟೀಲ(78) ಅವರು ಇಂದು(ಶುಕ್ರವಾರ) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದೆ ಅನರೋಗ್ಯದಿಂದ ಬಳಲುತ್ತಿದ್ದ ಬಾಬಾಗೌಡ ಅವರನ್ನ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. 

ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಬಾಬಾಗೌಡ ಗ್ರಾಮೀಣಾಭಿವೃದ್ದಿ ಸಚಿವರಾಗಿದ್ದರು.  ಬಾಬಾಗೌಡ ಅವರು ತಮ್ಮ ಜೀವನದುದ್ದಕ್ಕೂ ತಮ್ಮನ್ನು ರೈತ ಪರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಬಾಬಾಗೌಡ ಪಾಟೀಲ ನಿಧನದಿಂದ ರೈತ ಪರ ಹೋರಾಟದ ಪ್ರಮುಖ ಕೊಂಡಿ ಕಳಚಿದಂತಾಗಿದೆ. 

ರಾಜ್ಯದ ಮೊದಲ ಮಹಿಳಾ ಶಿಲ್ಪಿ ಕೊರೋನಾಗೆ ಬಲಿ

1989 ರಿಂದ 1994 ರ ವರೆಗೆ ಶಾಸಕರಾಗಿದ್ದ ಬಾಬಾಗೌಡ ಅವರು 1998 ರಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಶಾಲಿಯಾಗಿದ್ದರು.  ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪತ್ನಿಯರು ಸೇರಿದಂತೆ ಅಪಾರ ಬಂಧುಮಿತ್ರರನ್ನ ಅಗಲಿದ್ದಾರೆ.

ಬಾಬಾಗೌಡ ಪಾಟೀಲರ ನಿಧನಕ್ಕೆ ಸಿಎಂ ಸಂತಾಪ

 

ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಬಾಬಾಗೌಡರ ನಿಧನದಿಂದ ರೈತಪರ ಕಾಳಜಿ ಹೊಂದಿದ್ದ ನಾಯಕರನ್ನು ಕಳೆದುಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಮುಖ್ಯಮಂತ್ರಿಗಳು ಪ್ರಾರ್ಥಿಸಿದ್ದಾರೆ.

ರೈತ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಬಾಬಾಗೌಡ ಪಾಟೀಲರು ಏಕಕಾಲಕ್ಕೆ ಎರಡು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಅಪರೂಪದ ನಾಯಕರಾಗಿದ್ದರು. ಕರ್ನಾಟಕ ರಾಜ್ಯ ರೈತ ಸಂಘದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಅವರು  ಸದಾ ರೈತಪರ ಚಿಂತನೆಯಲ್ಲಿ ತೊಡಗಿಕೊಂಡು ರೈತರ ಕಲ್ಯಾಣಕ್ಕೆ ಶ್ರಮಿಸಿದ್ದರು. 

ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಅಟಲ್ ಬಿಹಾರಿ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ಗ್ರಾಮೀಣ ಪ್ರದೇಶ ಮತ್ತು ಉದ್ಯೋಗ ಸಚಿವರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು.
ತಮ್ಮ ಕ್ಷೇತ್ರದ ಅಭಿವೃದ್ಧಿಯಲ್ಲಿಯೂ ಅವರು ಗಣನೀಯ ಕೊಡುಗೆ ನೀಡಿದ್ದರು. ಅವರ ನಿಧನದಿಂದ  ರೈತಪರ ಕಾಳಜಿ ಹೊಂದಿದ್ದ ನಾಯಕರೊಬ್ಬರನ್ನು ಕಳೆದುಕೊಂಡಂತಾಗಿದೆ ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ  ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ  ತಿಳಿಸಿದ್ದಾರೆ.

ಬಾಬಾಗೌಡ ಪಾಟೀಲರ ಅಗಲಿಕೆಗೆ ಡಿಸಿಎಂ ಅಶ್ವತ್ಥ ಕಂಬನಿ 

ಕೇಂದ್ರದ ಮಾಜಿ ಸಚಿವ ಹಾಗೂ ರೈತ ನಾಯಕ ಬಾಬಾಗೌಡ ಪಾಟೀಲರ ನಿಧನಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ತೀವ್ರ ಶೋಕ ವ್ಯಕ್ತಪಡಿಸಿದ್ದು, ಬಾಬಗೌಡರ ಅಗಲಿಕೆ ರೈತ ಚಳವಳಿಗೆ ದೊಡ್ಡ ನಷ್ಟ ಎಂದು ಹೇಳಿದ್ದಾರೆ.

ಸ್ವಚ್ಛ ರಾಜಕಾರಣಿಯಾಗಿದ್ದ ಬಾಬಾಗೌಡರು, ರೈತ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಸದನದ ಹೊರಗೆ ಮತ್ತು ಒಳಗೆ ರೈತರ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸಿದವರು. ಏಕಕಾಲಕ್ಕೆ ಎರಡು ವಿಧಾನಸಭಾ ಕ್ಷೇತ್ರಗಳಿಂದ  ಆಯ್ಕೆಯಾಗಿದ್ದ ನಮ್ಮ ರಾಜ್ಯದ ವಿರಳ ಜನನಾಯಕ. ಅಲ್ಲದೆ, ಕರ್ನಾಟಕ ರಾಜ್ಯ ರೈತ ಸಂಘದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು ಎಂದು ಡಿಸಿಎಂ ಸ್ಮರಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ರೈತರ ಅಭ್ಯುದಯದ ಬಗ್ಗೆ ಅಪರಿಮಿತ ಕಾಳಜಿ ಹೊಂದಿದ್ದ ಬಾಬಾಗೌಡರು ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ್ದರು. ಹೊಸ ತಲೆಮಾರಿನ ರಾಜಕಾರಣಿಗಳಿಗೆ ಮಾರ್ಗದರ್ಶಕರಾಗಿದ್ದರು. ಅವರ ನಿಧನ ತೀವ್ರ ನೋವುಂಟು ಮಾಡಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಡಿಸಿಎಂ ಅವರು ಪ್ರಾರ್ಥಿಸಿದ್ದಾರೆ.

ಬಾಬಾಗೌಡ ಪಾಟೀಲ ನಿಧನಕ್ಕೆ  ಅಮೃತ ದೇಸಾಯಿ ಸಂತಾಪ

ಹಿರಿಯ ರೈತ ನಾಯಕರು, ಮಾಜಿ ಕೇಂದ್ರ ಸಚಿವರು ಹಾಗೂ ಧಾರವಾಡ ಗ್ರಾಮೀಣ ಮತಕ್ಷೇತ್ರದ ಮಾಜಿ ಶಾಸಕರಾಗಿದ್ದ ಬಾಬಾಗೌಡ ಪಾಟೀಲ ಅವರು ನಿಧನರಾಗಿರುವ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಅವರ ಆತ್ಮಕ್ಕೆ ಭಗವಂತ ಸದ್ಗತಿ ಕರುಣಿಸಲಿ, ಅವರ ಕುಟುಂಬ ವರ್ಗಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಪ್ರಾರ್ಥಿಸಿದ್ದಾರೆ.

Follow Us:
Download App:
  • android
  • ios