ಗೋಕಾಕ(ಸೆ.27) ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸ್ಪೀಕರ್‌ ಆಗಿದ್ದ ರಮೇಶ್‌ ಕುಮಾರ್‌ ಅವರು ಮಾಜಿ ಸಿಎಂ ಸಿದ್ದರಾಮಯ್ಯನವರ ಏಜೆಂಟ್‌ರಂತೆ ಕೆಲಸ ಮಾಡಿದ್ದಾರೆ ಎಂದು ಅನರ್ಹ ಶಾಸಕ ರಮೇಶ್‌ ಜಾರಕಿಹೊಳಿ ಆರೋಪಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ನೀಡಿದಾಗ ಕೂಲಂಕಷವಾಗಿ ಪರಿಶೀಲನೆ ನಡೆಸದ ಮಾಜಿ ಸ್ಪೀಕರ್‌ ಸಿದ್ದರಾಮಯ್ಯ ಏಜೆಂಟರಂತೆ ಕೆಲಸ ಮಾಡಿ ನಮ್ಮನ್ನು ಅನರ್ಹ ಮಾಡಿದ್ದಾರೆ. ಫೆಬ್ರವರಿಯಲ್ಲಿ ವಿಪ್‌ ಕೊಟ್ಟಿದ್ದಕ್ಕೆ ನಾನು ಅಧಿವೇಶನಕ್ಕೆ ಹಾಜರಾಗಿದ್ದೇನೆ. ಆ ವಿಪ್‌ ಅಲ್ಲಿಯೇ ಮುಕ್ತಾಯವಾಗಿದೆ. ಮಗಳ ಮದುವೆಗೆ ರಮೇಶ್‌ ಜಾರಕಿಹೊಳಿ ಹೋಗಿದ್ದಾರೆ ಎಂದು ಸ್ವತಃ ಸಿದ್ದರಾಮಯ್ಯನವರೇ ಹೇಳಿದ್ದರು. ಆದರೆ, ರಮೇಶ್‌ ಕುಮಾರ್‌ ಕುತಂತ್ರದಿಂದ ಹಲವು ಸಾಕ್ಷಿ ಸಿದ್ಧಪಡಿಸಿದ್ದಾರೆ ಎಂದು ದೂರಿದ್ದಾರೆ.

ಲಖನ್‌ಗೆ ಕ್ಷೇತ್ರ ಬಿಟ್ಟುಕೊಡುವೆ:

ನನ್ನವರೆಂದು ನಂಬಿದವರೇ ನನ್ನ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದಾರೆ. ಸತೀಶ್‌ ಜಾರಕಿಹೊಳಿ ಮೊದಲಿನಿಂದಲೂ ನನ್ನನ್ನು ವಿರೋಧಿಸುತ್ತಿದ್ದ. ಈಗ ಲಖನ್‌ ವಿರೋಧಿಸುತ್ತಿರುವುದು ನನಗೆ ನೋವುಂಟಾಗಿದೆ. ಏನೇ ಆದರೂ ಇಂದಿಗೂ ಲಖನ್‌ ಮೇಲೆ ಪ್ರೀತಿಯಿದೆ. ಅವನು ನನ್ನ ಪ್ರೀತಿಯ ತಮ್ಮ. ಉಪಚುನಾವಣೆಯಲ್ಲಿ ಗೋಕಾಕ್‌ನಿಂದ ಸ್ಪರ್ಧೆ ಮಾಡದಂತೆ ಹಿರಿಯ ಅಣ್ಣನಾಗಿ ಲಖನ್‌ಗೆ ತಿಳಿಸುತ್ತೇನೆ. ಚುನಾವಣೆಗೆ ಸ್ಪರ್ಧಿಸಲು ಇದು ಸಕಾಲವಲ್ಲ. ಈಗ ಸುಮ್ಮನೆ ಕುಳಿತುಕೊಳ್ಳಲಿ. ಮುಂದೆ ಯಮಕನಮರಡಿಯಲ್ಲಿ ನಾನು ಸ್ಪರ್ಧಿಸಿ ಗೋಕಾಕ್‌ನಲ್ಲಿ ಅವನನ್ನು ನಿಲ್ಲಿಸುತ್ತೇನೆ. ಯಮಕನಮರಡಿಯಲ್ಲಿ ಸ್ಪರ್ಧಿಸಿ ಸತೀಶ್‌ನ ತಾಕತ್‌ ನೋಡುತ್ತೇನೆ ಎಂದು ಸವಾಲ್‌ ಹಾಕಿದರು.

ರಾಜೀನಾಮೆ ಪತ್ರ ಹರಿದ ವಿಡಿಯೋ ಇದೆ!:

ಉಪಚುನಾವಣೆಗೆ ಸುಪ್ರೀಂಕೋರ್ಟ್‌ ತಡೆ ನೀಡಿರುವುದು ಸಂತಸ ತಂದಿದೆ ಎಂದಿರುವ ರಮೇಶ್‌ ಜಾರಕಿಹೊಳಿ, ಎಲ್ಲರೂ ಒಗ್ಗಟ್ಟಾಗಿ ರಾಜೀನಾಮೆ ನೀಡುವ ವೇಳೆ ಅಂದಿನ ಪ್ರಭಾವಿ ಸಚಿವರು ರಾಜೀನಾಮೆ ಪತ್ರವನ್ನು ಹರಿದು ಹಾಕಿದ ವಿಡಿಯೋ ಕೂಡ ನಮ್ಮ ಬಳಿ ಇದೆ. ಅಗತ್ಯ ಬಿದ್ದಾಗ ಅದನ್ನು ಬಿಡುಗಡೆ ಮಾಡುವುದಾಗಿ ಹೊಸ ಬಾಂಬ್‌ ಸಿಡಿಸಿದರು.
ಕುಮಾರಸ್ವಾಮಿ ಮುಖ್ಯಮಂತ್ರಿ ಆದ ದಿನದಿಂದಲೂ ಸಿದ್ದರಾಮಯ್ಯ ಅವರಿಂದ ಹಿಡಿದು ಎಲ್ಲರೂ ಅಸಮಾಧಾನಗೊಂಡಿದ್ದರು. ಕಳೆದ ಒಂದು ವರ್ಷದಿಂದ ನಾವು ಅಸಮಾಧಾನದಿಂದ ಇದ್ದೆವು. ರಾಜೀನಾಮೆ ಕೊಟ್ಟರೂ ನಾವು ಪಕ್ಷದ ವಿರುದ್ಧ ಮಾತನಾಡಿಲ್ಲ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಮಾಜಿ ಸ್ಪೀಕರ್‌ ರಮೇಶ್‌, ಕಾಂಗ್ರೆಸ್‌ ನಾಯಕರನ್ನು ಖುಷಿ ಪಡಿಸಲು 17 ಶಾಸಕರನ್ನು ಅನರ್ಹರನ್ನಾಗಿ ಮಾಡಿದ್ದಾರೆ. ಆನಂದ ಸಿಂಗ್‌ ಹಾಗೂ ನಾನು ಒಂದೇ ದಿನ ರಾಜೀನಾಮೆ ನೀಡಿದ್ದೇವೆ. ಅದನ್ನು ರಮೇಶಕುಮಾರ ಮರೆಮಾಚಿದ್ದಾರೆ ಎಂದು ಆರೋಪಿಸಿದರು. ವಿಪಕ್ಷದಲ್ಲಿ ಕುಳಿತುಕೊಳ್ಳೋಣ, ಮೈತ್ರಿ ಸರ್ಕಾರ ಬೇಡವೆಂದು ಮುಖಂಡರ ಬಳಿ ಹೇಳಿದ್ದೆ ಎಂದು ಹೇಳಿದ್ದಾರೆ.