ಅಥಣಿ(ನ.27): ಅನರ್ಹಗೊಂಡ ನಂತರವೂ ಅನರ್ಹ ಶಾಸಕರು ತಾವು ಅರ್ಹರು ಅಂತಾ ಹೇಳಿಕೊಳ್ಳುತ್ತಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲು ಅನರ್ಹಗೊಂಡ ನಂತರ ಅರ್ಹರು ಅಂತಾ ಹೇಳಿಕೊಳ್ತಿದ್ರೆ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಿ, ಅವರ ತಲೆ ಸರಿ ಇಲ್ಲ, ಒಳ್ಳೆ ತಲೆ ಡಾಕ್ಟರ್ ಗೆ‌ ತೋರಿಸಿ ಎಂದು ಮಾಜಿ ಸ್ಪೀಕರ್ ರಮೇಶ ಕುಮಾರ್ ಅವರು ಹೇಳಿದ್ದಾರೆ. 

ಅಥಣಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ವ್ಯಕ್ತಿಗತವಾಗಿ ಅನರ್ಹಗೊಳಿಸಿಲ್ಲ, ಸಂವಿಧಾನಾತ್ಮಕವಾಗಿ ಅವರನ್ನ ಅನರ್ಹರು ಅಂತ ಘೋಷಣೆ ಮಾಡಿದ್ದೇನೆ. ಸುಪ್ರೀಂ ಕೋರ್ಟ್ ಸಹ ಆದೇಶವನ್ನು  ಎತ್ತಿ ಹಿಡಿದಿದೆ, ನಾನು ಕೊಟ್ಟ ತೀರ್ಪು ಸರಿನಾ ಹೇಗೆ ಅಂತಾ ತಿರುಗಾಡಿ ನೋಡ್ತಿದ್ದೀನಿ, ಎಲ್ಲ ಜನರು ತೀರ್ಪು ಸರಿ ಇದೆ ಎಂದು ಹೇಳ್ತಿದ್ದಾರೆ ಎಂದ ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಳಿಕ ಮತ್ತೋರ್ವ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ಈ ಉಪಚುನಾವಣೆ ಪ್ರಜಾಪ್ರಭುತ್ವದ ಅಳಿವು ಉಳಿವಿನ ಪ್ರಶ್ನೆಯಾಗಿದೆ. 14 ಮಂದಿ ಕಾಂಗ್ರೆಸ್, ಮೂವರು ಜೆಡಿಎಸ್ ಪಕ್ಷ ತ್ಯಜಿಸಿದ್ದಾರೆ. ಅಧಿವೇಶನದಲ್ಲಿ ಭಾಗಿಯಾಗಲಾರದೇ ಮುಂಬೈಗೆ ಹೋಗಿ ಕಾಂಗ್ರೆಸ್ ಪಕ್ಷಕ್ಕೆ ಮೋಸ ಮಾಡಿದ್ದಾರೆ ಎಂದು ಅನರ್ಹ ಶಾಸಕರ ವಿರುದ್ಧ ಹರಿಹಾಯ್ದಿದ್ದಾರೆ. 

ಗೋಕಾಕ್ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರು ಕ್ರಿಯಾಶೀಲ ಯುವಕರಾಗಿದ್ದಾರೆ. ಕೈ ಕೊಟ್ಟು ಹೋದವರ ನಾಡಿಮಿಡಿತ ಲಖನ್ ಕೈಯಲ್ಲಿದೆ, ಶತಮಾನದಲ್ಲಿ ಕಂಡರಿಯದಂತಗ ಪ್ರವಾಹ ಬಂದಿತ್ತು, ಆ ವೇಳೆ ಸತೀಶ್ ಜಾರಕಿಹೊಳಿ‌ ಮುಂಚೂಣಿಯಲ್ಲಿ ನಿಂತು ಆಪತ್ಭಾಂಧವರಾಗಿ ಕೆಲಸ ಮಾಡಿದ್ದರು. ಈ ಚುನಾವಣೆ ಗೆಲುವಿನ ರೂವಾರಿಯಾಗಿ ಟೊಂಕ ಕಟ್ಟಿ ನಿಂತಿದ್ದಾರೆ. ಸೂರ್ಯ ಪೂರ್ವದಲ್ಲಿ ಉದಯಿಸುವುದು ಎಷ್ಟು ನಿಶ್ಚಿತವೋ ಲಖನ್ ಗೆಲುವು ಅಷ್ಟೇ ನಿಶ್ಚಿತವಾಗಿದೆ ಎಂದು ತಿಳಿಸಿದ್ದಾರೆ.

ನಂದು, ಸತೀಶ್ ಜಾರಕಿಹೊಳಿ‌ ಮಂತ್ರಿ ಸ್ಥಾನ ಒಂದೇ ಸಾರಿ ಹೋಗಿತ್ತು. ಈ ಚುನಾವಣೆ ನ್ಯಾಯ ಅನ್ಯಾಯ, ಧರ್ಮ ಅಧರ್ಮ, ಸತ್ಯ ಅಸತ್ಯ ಮಧ್ಯದ ಚುನಾವಣೆಯಾಗಿದೆ. ಪ್ರಜಾಪ್ರಭುತ್ವ ಮೌಲ್ಯ ಎತ್ತಿ ಹಿಡಿಯಲು ಈ ಚುನಾವಣೆ ಬಂದಿದೆ. ಕೌರವ ಪಾಂಡವರ ಯುದ್ಧ ತರನಾಗಿದೆ ಈ ಉಪಚುನಾವಣೆ. ರಮೇಶ ಜಾರಕಿಹೊಳಿ‌ ಕೌರವರು, ನಾವು ಪಾಂಡವರು. ಕೊನೆಗೆ ನ್ಯಾಯಕ್ಕೆ, ನೀತಿಗೆ ಗೆಲುವು ಸಿಕ್ಕೇ ಸಿಗುತ್ತದೆ. ತಾಯಿ ಧಿಕ್ಕರಿಸುವುದು, ಮಾತೃಪಕ್ಷ ಧಿಕ್ಕರಿಸಿ ಹೋಗೋದು ಎರಡೂ ಒಂದೇ, ತಾಯಿ ಧಿಕ್ಕರಿಸಿ ಹೋದವರಿಗೆ ಒಳ್ಳೆಯದಾಗಿದ್ದು ನೋಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. 

ಜಾರಕಿಹೊಳಿ‌ ಕುಟುಂಬ ರಾಜ್ಯದಲ್ಲಿ ಪ್ರತಿಷ್ಠಿತ ಕುಟುಂಬವಾಗಿದೆ. ರಮೇಶ್ ಏಕೆ ಪಕ್ಷ ಬಿಟ್ಟು ಹೋದರೂ ಅನ್ನೋದೇ ತಿಳಿಯಲಿಲ್ಲ. 45 ವರ್ಷಗಳ ಸಾರ್ವಜನಿಕ ಬದುಕಿನ ಲ್ಲಿ ಹೀಗೆ ಪಕ್ಷ ಬಿಟ್ಟು ಹೋದವರನ್ನ ನೋಡಿಲ್ಲ. ಅನರ್ಹ ಮಾಡಿದ್ದು ಸರಿ ಅಂತಾ ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಇವತ್ತು ಲಖನ್ ಎದುರು ನಿಂತಿರುವ ವ್ಯಕ್ತಿ ಅನರ್ಹ ಶಾಸಕನಾಗಿದ್ದಾನೆ ಎಂದು ಹೇಳಿದ್ದಾರೆ. 

ಸುಪ್ರೀಂಕೋರ್ಟ್ ಸ್ಪೀಕರ್ ನೀಡಿದ ಆದೇಶ ಎತ್ತಿ ಹಿಡಿದಿದೆ. ಅನರ್ಹ ಹಣೆಪಟ್ಟಿ ಹೊತ್ತುಕೊಂಡು ಹೇಗೆ ಮತ ಕೇಳುತ್ತಿದ್ದಾರೋ ನಮಗೆ ಗೊತ್ತಾಗುತ್ತಿಲ್ಲ. ಹಣನೂ ಹೋಗಲಿ, ಗುಣನೂ ಹೋಗಲಿ ಅಂತಾ ಚುನಾವಣಾ ಸ್ಪರ್ಧೆಗೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಬಹಳ ಜಾಣ್ಮೆಯಿಂದ ಸುಪ್ರೀಂಕೋರ್ಟ್ ಆದೇಶ ನೀಡಿದೆ ಅನಿಸುತ್ತೆ, ಅವರು ಅನರ್ಹ ಆಗಿದ್ದನ್ನ ನಾವು ಎತ್ತಿ ಹಿಡಿದಿದ್ದೇವೆ, ಚುನಾವಣೆಗೆ ನಿಂತು ಜನತಾ ನ್ಯಾಯಾಲಯ ತಕ್ಕ ಉತ್ತರ ನೀಡಲಿ ಅಂತಾ ಸ್ಪರ್ಧೆಗೆ ಅವಕಾಶ ಕೊಟ್ಟಿದೆ. ಯೋಗ್ಯವಾದ ತೀರ್ಪು ಕೊಟ್ಟು ಶಿಕ್ಷೆ ನೀಡಲಿ ಅಂತಾ ಜನತಾ ನ್ಯಾಯಾಲಯ ಬಳಿ ಕೊಟ್ಟು ಕಳಿಸಿದ್ದಾರೆ. ನೀವೇ ಜಡ್ಜ್‌ಗಳು, ಗೋಕಾಕ್ ನಲ್ಲಿ ಪ್ರಜ್ಞಾವಂತ ಮತದಾರರಿದ್ದಾರೆ. ಇವರನ್ನು ಜನರು ಧೂಳಿಪಟ, ಗಾಳಿಪಟ ಮಾಡಿ ಹಾರಿಸುತ್ತಾರೆಂಬ ವಿಶ್ವಾಸವಿದೆ ಎಂದಿದ್ದಾರೆ.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.