ಹುಬ್ಬಳ್ಳಿ: ಪಾಕಿಸ್ತಾನ ವಿರುದ್ಧ ಗೆದ್ದು ಕೊರೋನಾಗೆ ಸೋತ ಯೋಧ!
ಇತ್ತೀಚೆಗೆ ಉಸಿರಾಟದ ಸಮಸ್ಯೆಯಿಂದ ಇಲ್ಲಿನ ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದ ಸುಬೇದಾರ್ ರಂಗಪ್ಪ ಕವಡಿಮಟ್ಟಿ| ಎರಡು ಕೋವಿಡ್ ವರದಿಗಳು ‘ನೆಗೆಟಿವ್’ ಬಂದಿದ್ದವು. ಮಂಗಳವಾರ ಬಂದ ಮೂರನೇ ವರದಿ ಮಾತ್ರ ‘ಪಾಸಿಟಿವ್’| ಕೋವಿಡ್ ನಿಯಮಾನುಸಾರ ಅಂತ್ಯಕ್ರಿಯೆ ನೆರವೇರಿಸಲು ನಿರ್ಧರಿಸಿದ ಜಿಲ್ಲಾಡಳಿತ|
ಹುಬ್ಬಳ್ಳಿ(ಜು.22): ನೆರೆಯ ಶತ್ರು ದೇಶ ಪಾಕಿಸ್ತಾನದ ವಿರುದ್ಧ ನಡೆದ ಎರಡು ಯುದ್ಧ (1965, 1971)ಗಳಲ್ಲಿ ವೀರಸೇನಾನಿಯಾಗಿ ಹೋರಾಡಿ ಭಾರತದ ಗೆಲುವಿಗೆ ಕಾರಣರಾಗಿದ್ದ ಸುಬೇದಾರ್ ರಂಗಪ್ಪ ಕವಡಿಮಟ್ಟಿ(66) ಮಂಗಳವಾರ ಇಲ್ಲಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ!
ಇತ್ತೀಚೆಗೆ ಉಸಿರಾಟದ ಸಮಸ್ಯೆಯಿಂದ ಇಲ್ಲಿನ ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದ ಅವರ ಎರಡು ಕೋವಿಡ್ ವರದಿಗಳು ‘ನೆಗೆಟಿವ್’ ಬಂದಿದ್ದವು. ಮಂಗಳವಾರ ಬಂದ ಮೂರನೇ ವರದಿ ಮಾತ್ರ ‘ಪಾಸಿಟಿವ್’ ಆಗಿದೆ. ಕೋವಿಡ್ ನಿಯಮಾನುಸಾರ ಇಂದು(ಬುಧವಾರ) ಜಿಲ್ಲಾಡಳಿತ ಅಂತ್ಯಕ್ರಿಯೆ ನೆರವೇರಿಸಲು ನಿರ್ಧರಿಸಿದೆ.
ಧಾರವಾಡ: ಕೊರೋನಾ ಏರುಗತಿ ಆತಂಕದ ಮಧ್ಯೆ ಗುಣಮುಖರಾಗುತ್ತಿರುವ ಸಮಾಧಾನ!
28 ವರ್ಷಗಳ ಕಾಲ ಸೇನಾ ಸೇವೆಯಲ್ಲಿದ್ದು ಪಾಕ್ ವಿರುದ್ಧ ಎರಡು ಯುದ್ಧ ಮಾಡಿಯೂ ಭಾರತಾಂಬೆಯ ರಕ್ಷಣೆಗೆ ನಿಲ್ಲುವ ಅವರ ಕೆಚ್ಚು ಕುಗ್ಗಿರಲಿಲ್ಲ. ಕಾರ್ಗಿಲ್ ಕಣಿವೆಗೆ ಪಾಕ್ ಕಾಲು ಕೆದರಿ ಬಂದಾಗ ಕಾರ್ಗಿಲ್ ಕದನದಲ್ಲಿ ಭಾಗವಹಿಸಲು ತಮಗೆ ಅವಕಾಶ ನೀಡಬೇಕೆಂದು ಸೇನೆಯನ್ನು ಕೋರಿದ್ದರು. ಇತ್ತೀಚೆಗೆ ಚೀನಾ-ಭಾರತದ ಗಡಿಯಲ್ಲಿ 20 ಭಾರತೀಯ ಯೋಧರು ಹತರಾದಾಗ ಅಕ್ಷರಶಃ ಕುದ್ದು ಹೋಗಿದ್ದರು ರಂಗಪ್ಪ. ತಮ್ಮ ಇಬ್ಬರು ಪುತ್ರರನ್ನೂ ಸೇನೆಗೆ ಸೇರಿಸಿ ದೇಶ ಸೇವೆಗೆ ಅಣಿಗೊಳಿಸಿದ್ದಾರೆ.
ಮೂಲತಃ ಬಾದಾಮಿ ತಾಲೂಕು ಹಂಗರಗಿ ಗ್ರಾಮದವರಾದ ಈ ಯೋಧ ಸೇನಾ ನಿವೃತ್ತಿಯ ಬಳಿಕ ಹುಬ್ಬಳ್ಳಿಯಲ್ಲಿ ವಾಸವಾಗಿ ಸೇನೆಗೆ ಸೇರುವಂತೆ ಯುವಕರನ್ನು ಹುರಿದುಂಬಿಸುತ್ತಿದ್ದರು. ಕನ್ನಡಪ್ರಭದ ಫ್ರಂಟ್‌ಲೈನ್ ಸರಣಿಯಲ್ಲಿ ಪಾಕಿಸ್ತಾನ ಎದುರು ಸೆಣಸಿದ ತಮ್ಮ ರೋಚಕ ಅನುಭವಗಳನ್ನು ಬಿಚ್ಚಿಟ್ಟಿದ್ದರು.