ಬೆಂಗಳೂರು(ಫೆ.21): ಅಮೂಲ್ಯ ಲಿಯೋನ್ ಪಾಕಿಸ್ತಾನ ಪರ ಘೋಷಣೆ ಕೂಗಿ ವಿವಾದ ಸೃಷ್ಟಿಸಿದ ಸಿಎಎ ವಿರೋಧಿ ಪ್ರತಿಭಟನಾ ಸಮಾವೇಶಕ್ಕೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ಆಹ್ವಾನಿಸಲಾಗಿತ್ತು. ಆದರೆ, ವೈಯಕ್ತಿಕ ಕಾರಣಾಂತರಗಳಿಂದ ಕಾರ್ಯಕ್ರಮಕ್ಕೆ ಗೈರಾಗಿದ್ದ ಎಚ್‌ಡಿಡಿ ಅವರು ಈ ಮುಜುಗರದ ಪ್ರಸಂಗದಿಂದ ಪಾರಾಗಿದ್ದಾರೆ.

ಕೇಂದ್ರ ಸರ್ಕಾರದ ಸಿಎಎ, ಎನ್‌ಆರ್‌ಸಿ ವಿರೋಧಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ‘ಹಿಂದೂ ಮುಸ್ಲಿಂ ಸಿಖ್‌ ಇಸಾಯಿ ಫೆಡರೇಷನ್‌’ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನಾ ಸಮಾವೇಶವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಫೇಸ್‌ಬುಕ್‌ನಲ್ಲೂ ಪಾಕ್‌ಗೆ ಅಮೂಲ್ಯ ‘ಜೈ’!

ಈ ಸಮಾವೇಶಕ್ಕೆ ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಒವೈಸಿ ಸೇರಿದಂತೆ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಆದರೆ, ಅವರು ವೈಯಕ್ತಿಕ ಕಾರಣಾಂತರಗಳಿಂದ ಗೈರಾಗಿದ್ದರು. ಇಲ್ಲದಿದ್ದಲ್ಲಿ ಅನಿರೀಕ್ಷಿತವಾಗಿ ಘಟಿಸಿದ ಘಟನೆಗೆ ಸಾಕ್ಷಿಯಾಗುವ ಸಂದರ್ಭ ಎದುರಾಗುತ್ತಿತ್ತು.

ಸಮಾವೇಶದಲ್ಲಿ ಕೊಪ್ಪ ಮೂಲದ ವಿದ್ಯಾರ್ಥಿನಿ ‘ಪಾಕಿಸ್ತಾನ್‌ ಜಿಂದಾಬಾದ್‌’ ಎಂಬ ಘೋಷಣೆ ಕೂಗಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ. ಎಚ್‌.ಡಿ.ದೇವೇಗೌಡರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದಲ್ಲಿ ದೇಶದ್ರೋಹಿ ಘೋಷಣೆ ಕೂಗುವ ಘಟನೆಯಿಂದ ಮುಜುಗರಕ್ಕೆ ಈಡಾಗಬೇಕಾಗುತ್ತಿತ್ತು.