ಬೆಳಗಾವಿ(ಫೆ.19): ಒಂದು ಕಾಲದಲ್ಲಿ ಬೆಳಗಾವಿ ಜಿಲ್ಲೆಯ 19 ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲಿ ಗೆದ್ದಿದ್ವಿ, ಇದೀಗ ಝೀರೋ ಪಾಯಿಂಟ್‌ನಲ್ಲಿದ್ದೇವೆ, ಸತ್ಯ ಹೇಳೋದಕ್ಕೆ ಏನು ಅಂಜಿಕೆ ಇಲ್ಲ. ನನಗೆ ಕೆಲ ತಿಂಗಳುಗಳಲ್ಲಿ 87 ವಯಸ್ಸಾಗಲಿದೆ, ಪಕ್ಷವನ್ನು ಕಟ್ಟಬೇಕು. ಐ ನೋ ದಿ ರಿಯಾಲಿಟಿ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ  ಹೆಚ್.ಡಿ.ದೇವೇಗೌಡ ಹೇಳಿದ್ದಾರೆ. 

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗ ಇರೋ ಲೀಡರ್‌ಗಳನ್ನೇ ಒಂದುಗೂಡಿಸಿ ಪಕ್ಷ ಕಟ್ಟಬೇಕಿದೆ. ಫಲಾಫಲವೆಲ್ಲಾ ಜನತೆಯ ತೀರ್ಮಾನಕ್ಕೆ ಬಿಟ್ಟಿದ್ದು, ಕ್ಷೇತ್ರದ ಮೇಲೆ ಯಾರೂ ಆಸಕ್ತಿ ವಹಿಸುತ್ತಾರೆ ಇಲ್ಲೇ ಕುಳಿತು ಚರ್ಚೆ ಮಾಡುತ್ತೇನೆ. ನನ್ನ ಕೆಲಸ ಗುರುತಿಸುವ ಹಿರಿಯ ನಾಯಕರು ಇದ್ದಾರೆ, ಯಂಗಸ್ಟರ್ಸ್ ಸಹ ಇದ್ದಾರೆ. ಬೆಳಗಾವಿಗೆ ಈಗ ವಿಮಾನ ಸೌಕರ್ಯ ಆಗಿದೆ, ಈ ಭಾಗಕ್ಕೆ ಹೆಚ್ಚು ಬರುತ್ತೇನೆ ಎಂದು ಹೇಳಿದ್ದಾರೆ.
ಇಂದು ಮಧ್ಯಾಹ್ನ ಬೆಳಗಾವಿಯಲ್ಲೇ ಕೋರ್ ಕಮೀಟಿ ಸಭೆ ಮಾಡುತ್ತೇನೆ. ಪಕ್ಷದ ಮೆಂಬರ್‌ಶಿಪ್‌ ಎನರೋಲ್‌ಮೆಂಟ್ ಮಾಡುತ್ತೇವೆ. ಕೋರ್ ಕಮಿಟಿ ಸಭೆಯಲ್ಲಿ ನಾಲ್ಕೈದು ಜಿಲ್ಲೆಯ ಪ್ರಮುಖ ಸಭೆ ನಡೆಸುತ್ತೇವೆ. ಬೇರೆ ಪಕ್ಷದ ನಾಯಕರು ಅವರ ಫ್ಯೂಚರ್ ಅವರು ನೋಡಿಕೊಳ್ಳಲಿ ಅವರ ಬಗ್ಗೆ ನಾನು ಮಾತನಾಡಲ್ಲ ಎಂದು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಯಡಿಯೂರಪ್ಪ ಸರ್ಕಾರ ಮೂರೂವರೆ ವರ್ಷ ಇರಲಿ ಎಂಬುದು ನನ್ನ ಆಶಯವಾಗಿದೆ. ಬಿಜೆಪಿ ಶಿಸ್ತುಬದ್ಧ ಪಕ್ಷ ಅದು, ಅವರು ಒಳ್ಳೆಯ ಕೆಲಸ ಮಾಡಲಿ. 2023ರ ಮೇನಲ್ಲಿ ಮತ್ತೆ ಜನತೆ ಮುಂದೆ ಹೋಗೋಣ. ಅಧಿಕಾರಿಗಳಿಂದ ಭ್ರಷ್ಟಾಚಾರ ಹೆಚ್ಚಾಗಿದೆ ಅಂತಾ ಯಡಿಯೂರಪ್ಪರವರೇ ಹೇಳಿದ್ದಾರೆ. ವಿಧಾನಸಭೆ ಅಧಿವೇಶನ ನಡೀತಿದೆ ಎಲ್ಲ ಬಗ್ಗೆಯೂ ಚರ್ಚೆ ನಡೆಯಲಿ. ಸಿದ್ದರಾಮಯ್ಯ, ಹೆಚ್‌ಡಿಕೆಗೆ ಮಾತನಾಡೋ‌ ಶಕ್ತಿ ಇದೆ ಮಾತನಾಡುತ್ತಾರೆ. ಸರ್ಕಾರಿ ಖಜಾನೆ ಖಾಲಿಯಾದ ಬಗ್ಗೆ ಶ್ವೇತಪತ್ರ ಹೊರಡಿಸುವ ಅಗತ್ಯ ಇಲ್ಲ. ಬಜೆಟ್ ಮಂಡನೆಯಾಗುವವರೆಗೂ ಕಾದು ನೋಡೋಣ ಎಂದಿದ್ದಾರೆ.  ಬಿಜೆಪಿ, ಕಾಂಗ್ರೆಸ್‌ನಲ್ಲಿಯೂ ಅತೃಪ್ತರು ಇದ್ದಾರೆ, ಕೆಲವರು ಅಧಿಕಾರ ಎಂಜಾಯ್ ಮಾಡುತ್ತಿದ್ದಾರೆ. ಅವರನ್ನು ನಾನು ಕರೆಯಲ್ಲ ಎಂದು ತಿಳಿಸಿದ್ದಾರೆ.

ವಿಧಾನ ಪರಿಷತ್ ಚುನಾವಣೆಯಲ್ಲಿ  ಜಿ.ಟಿ.ದೇವೇಗೌಡ ಕ್ರಾಸ್ ವೋಟಿಂಗ್ ವಿಚಾರದ  ಬಗ್ಗೆ ಮಾತನಾಡಿದ ಅವರು, ಜಿ.ಟಿ.ದೇವೇಗೌಡ ಹಿಂದೆಯೂ ಬಿಜೆಪಿ ಹೋಗಿದ್ದರು. ಜಿಟಿಡಿ ಬಿಜೆಪಿಗೆ ಹೋಗ್ತಾರೋ ಕಾಂಗ್ರೆಸ್‌ಗೆ ಹೋಗ್ತಾರೋ ಗೊತ್ತಿಲ್ಲ. ಸಮ್ಮಿಶ್ರ ಸರ್ಕಾರ ಪತನದ ನಂತರ ಜಿಟಿಡಿ ಯಡಿಯೂರಪ್ಪ ಮನೆಗೆ ಹೋಗಿದ್ದರು. ಕ್ಷೇತ್ರದ ಕೆಲಸ ಮಾಡಲು ಡಿಸಿಎಂ ನೆರವು ಬೇಕು ಎಂದು ಜಿಟಿಡಿ ಹೇಳಿದ್ದಾರೆ. ಜಿಟಿಡಿಗೆ ನಾನೇನು ವಿಪ್ ಕೊಟ್ಟಿಲ್ಲ, ಕಾಂಗ್ರೆಸ್, ಬಿಜೆಪಿ ಹೋಗ್ತಾರೆ ಗೊತ್ತಿಲ್ಲ. ನಾವು ವಿಪ್ ಮೂಲಕ ಯಾರನ್ನು ಕಟ್ಟಿ ಹಾಕಲ್ಲ, ರಾಜಕೀಯ ಉದ್ದೇಶಕ್ಕೆ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಅವರಿಗೆ ಬಿಟ್ಟಿದ್ದು. ನಿನ್ನೆ ಸಭೆ ನಡೆಸಿ ಯಾರು ಪಕ್ಷಕ್ಕೆ ನಿಷ್ಠೆಯಿಂದ ಕೆಲಸ‌ ಮಾಡುತ್ತೀರೋ ಮಾಡಿ ಎಂದಿದ್ದೇನೆ. ಜಿ.ಟಿ.ದೇವೇಗೌಡರೊಬ್ಬರನ್ನು ಬಿಟ್ಟರೇ ಯಾರೂ ಸಹ ಪಕ್ಷಕ್ಕೆ ಬಿಡಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಾಂಬೆಗೆ ಹೋದವರೇ ಈ ಬಗ್ಗೆ ಹೇಳಿದ್ದಾರೆ ನಾನು ಹೆಚ್ಚು ಮಾತನಾಡಲ್ಲ. ಸ್ಪೀಕರ್ ಹಾಗೂ ಸಿದ್ದರಾಮಯ್ಯ ಹೇಳಿದ ಮೇಲೆ ನಾವು ಬಾಂಬೆಗೆ ಹೋಗಿದ್ದೇವೆ ಅಂತಾ ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಬೇಕು ಅಂತಾ ಹೇಳಿದ್ದರು ಎಂದು ಹೇಳಿದ್ದಾರೆ. ಹೀಗಾಗಿ ಸಮ್ಮಿಶ್ರ ಸರ್ಕಾರ ಪತನ ಬಗ್ಗೆ ಹೆಚ್ಚು ಚರ್ಚಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.