ಮಂಡ್ಯದಲ್ಲಿ ಹೊಸ ಮನೆ ಪೂಜೆ ನೆರವೇರಿಸಿದ ಮಾಜಿ ಸಂಸದೆ: ಕುತೂಹಲಕ್ಕೆ ಕಾರಣವಾದ ಸುಮಲತಾ ನಡೆ!
ಹೊಸ ಬಾಡಿಗೆ ಮನೆಯೊಂದಿಗೆ ಸುಮಲತಾ ಅಂಬರೀಶ್ ಅವರ ಸೆಕೆಂಡ್ ಇನ್ನಿಂಗ್ಸ್ ರಾಜಕಾರಣ ಹೇಗಿರಲಿದೆ ಎನ್ನುವುದು ಸದ್ಯದ ಕುತೂಹಲವಾಗಿದೆ.
ಮಂಡ್ಯ(ಜ.09): ಮಾಜಿ ಸಂಸದೆ ಸುಮಲತಾ ಅವರು ಮಂಡ್ಯ ನಗರದಲ್ಲಿ ಹೊಸ ಬಾಡಿಗೆ ಮನೆಯೊಂದನ್ನು ಪಡೆದು ಅದರ ಪೂಜೆಯನ್ನು ನೆರವೇರಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಚಾಮುಂಡೇಶ್ವರಿ ನಗರ ಎರಡನೇ ಕ್ರಾಸ್‌ನಲ್ಲಿ ಅಂಬರೀಶ್ ಮನೆಯೊಂದನ್ನು ಬಾಡಿಗೆ ಪಡೆದು ನೆಲೆಸಿದ್ದರು. ಅಂಬರೀಶ್ ನಂತರ ರಾಜಕಾರಣ ಪ್ರವೇಶಿಸಿದ ಸುಮಲತಾ ಕೂಡ ಅದೇ ಮನೆಯಲ್ಲಿ ವಾಸವಿದ್ದರು. ಸ್ವಾಭಿಮಾನಿ ಸಂಸದೆಯಾಗಿ ಸಂಸತ್‌ಗೆ ಆಯ್ಕೆಯಾಗಿದ್ದರು. ಅಂಬರೀಶ್ ಮತ್ತು ಸುಮಲತಾ ಪಾಲಿಗೆ ಅದೃಷ್ಟದ ಮನೆ ಎಂದೇ ಬಿಂಬಿತವಾಗಿತ್ತು.
ಅಂಬರೀಷ್ ಅವರ ಅವಧಿಯಲ್ಲಿ ಮಾಡಿದ ಕೆಲಸಗಳಿಂದ ನನಗೆ ತೃಪ್ತ ಮನೋಭಾವ: ಸುಮಲತಾ
2024ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರಿಗೆ ಮಂಡ್ಯ ಕ್ಷೇತ್ರದ ಟಿಕೆಟ್ ಸಿಗಲಿಲ್ಲ. ಜೆಡಿಎಸ್-ಬಿಜೆಪಿ ಮೈತ್ರಿಯಿಂದಾಗ ಮಂಡ್ಯ ಟಿಕೆಟ್ ಜೆಡಿಎಸ್ ಪಾಲಾಯಿತು. ಎಚ್.ಡಿ.ಕುಮಾರಸ್ವಾಮಿ ಸಂಸದರಾಗಿ ಕೇಂದ್ರ ಮಂತ್ರಿಯೂ ಆದರು. ಸುಮಲತಾ ಅವರಿಗೆ ರಾಜಕೀಯವಾಗಿ ಯಾವುದೇ ಸ್ಥಾನ-ಮಾನಗಳು ದೊರಕಲಿಲ್ಲ. ರಾಜಕೀಯ ಭವಿಷ್ಯವೂ ಮಸುಕಾದಂತೆ ಕಂಡುಬಂದಿತು.
ಲೋಕಸಭಾ ಚುನಾವಣೆ ಮುಗಿದು ಆರೇಳು ತಿಂಗಳ ಬಳಿಕ ಈಗ ದಿಢೀರನೇ ಚಾಮುಂಡೇಶ್ವರಿ ನಗರದ ಮನೆಯಿಂದ ಹೊರಬಂದಿರುವ ಸುಮಲತಾ ಬಂದೀಗೌಡ ಬಡಾವಣೆಯಲ್ಲಿ ಹೊಸದೊಂದು ಬಾಡಿಗೆ ಮನೆಯನ್ನು ಪಡೆದುಕೊಂಡಿದ್ದಾರೆ. ಶಾಸಕ ಪಿ.ರವಿಕುಮಾರ್ ಅವರಿರುವ ಮನೆಯಿಂದ ಕೂಗಳತೆ ದೂರದಲ್ಲಿ ಸುಮಲತಾ ಅವರ ಬಾಡಿಗೆ ಮನೆ ಇದೆ. ಕಳೆದ ಹದಿನೈದು ದಿನಗಳ ಹಿಂದೆ ಯಾರಿಗೂ ಮಾಹಿತಿಯನ್ನು ಬಿಟ್ಟುಕೊಡದೆ ಹನಕೆರೆ ಶಶಿಕುಮಾರ್, ಗಿರೀಶ್ ಅವರ ಕುಟುಂಬದವರೊಡಗೂಡಿ ಹೊಸ ಮನೆಯ ಪೂಜೆ ನೆರವೇರಿಸಿದ್ದಾರೆ.
ನಟಿ ಸುಮಲತಾ ಅಂಬರೀಶ್‌ಗೆ ಬ್ಯೂಟಿ ಕ್ವೀನ್ ಕಿರೀಟ: ಕುತೂಹಲದ ಮಾಹಿತಿ ಶೇರ್ ಮಾಡಿದ ಸಂಸದೆ
ಸದ್ಯಕ್ಕೆ ಯಾವುದೇ ಚುನಾವಣೆ ಇಲ್ಲ. ಇದರ ನಡುವೆ ಹೊಸ ಮನೆ ಪೂಜೆ ನೆರವೇರಿಸಿರುವುದರ ಸುಮಲತಾ ಹಿಂದಿನ ಗುಟ್ಟೇನು ಎನ್ನುವುದು ಅರ್ಥವಾಗುತ್ತಿಲ್ಲ. ಚಾಮುಂಡೇಶ್ವರಿ ನಗರದಲ್ಲಿರುವ ಮನೆಗೆ 50 ಸಾವಿರ ರು. ಬಾಡಿಗೆ ಇದ್ದು, ಅದು ದುಬಾರಿ ಹಾಗೂ ಅಲ್ಲಿಗೆ ಜನರು ಬರುವುದಕ್ಕೆ ತೊಂದರೆಯಾಗಲಿದೆ ಎಂಬ ಕಾರಣವನ್ನು ಮುಂದಿಟ್ಟು ಚಾಮುಂಡೇಶ್ವರಿ ನಗರದಿಂದ ಬಂದೀಗೌಡ ಬಡಾವಣೆಗೆ ಬಾಡಿಗೆ ಮನೆಯನ್ನು ಸ್ಥಳಾಂತರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಮನೆ ಮಂಗಳೂರು ಮೂಲದವರದ್ದೆಂದು ತಿಳಿದುಬಂದಿದೆ. ಸುಮಲತಾ ಆಪ್ತರೇ ಹುಡುಕಿರುವ ಮನೆ ಅವರಿಗೂ ಮೆಚ್ಚುಗೆಯಾಗಿದೆ. ಅಡ್ವಾನ್ಸ್ ಕೊಟ್ಟು ಧನುರ್ಮಾಸಕ್ಕೂ ಮುನ್ನವೇ ಮನೆಗೆ ಪೂಜೆ ನೆರವೇರಿಸಿದ್ದರು. ಹೊಸ ಬಾಡಿಗೆ ಮನೆಯೊಂದಿಗೆ ಸುಮಲತಾ ಅವರ ಸೆಕೆಂಡ್ ಇನ್ನಿಂಗ್ಸ್ ರಾಜಕಾರಣ ಹೇಗಿರಲಿದೆ ಎನ್ನುವುದು ಸದ್ಯದ ಕುತೂಹಲವಾಗಿದೆ.