Asianet Suvarna News Asianet Suvarna News

'ಸಿ.ಪಿ. ಯೋಗೇಶ್ವರ್‌ ಬಾಯಿಚಪಲಕ್ಕೆ ಮಾತನಾಡಬಾರದು'

ನಾನು ಹೆಚ್‌.ಡಿ.ಕುಮಾರಸ್ವಾಮಿ ಬಗ್ಗೆ ಮಾತನಾಡುವುದಿಲ್ಲ. ಅವರು ತುಂಬಾ ದೊಡ್ಡವರಿದ್ದಾರೆ| ಮುಖ್ಯಮಂತ್ರಿ ಸ್ಥಾನ ಜವಾಬ್ದಾರಿಯುತ ಹುದ್ದೆ. ಈ ಸಮಯದಲ್ಲಿ ಯಾರಿದ್ದರೂ ಪರಿಸ್ಥಿತಿಯನ್ನು ನಿಭಾಯಿಸಲೇಬೇಕು| ಯಡಿಯೂರಪ್ಪ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇದರಲ್ಲಿ ಯಾರ ಹೆಚ್ಚುಗಾರಿಕೆಯೂ ಇಲ್ಲ ಎಂದು ಕುಟುಕಿದ ಚಲುವರಾಯಸ್ವಾಮಿ|

Former MP Chaluvarayaswamy Reacts Over C P Yogeeshwara Statement
Author
Bengaluru, First Published Jul 27, 2020, 3:48 PM IST

ಮದ್ದೂರು(ಜು.27):  ಸಿ.ಪಿ. ಯೋಗೇಶ್ವರ್‌ ತಮ್ಮ ಘನತೆಗೆ ತಕ್ಕಂತೆ ಮಾತನಾಡಲಿ, ರಾಜಕೀಯ ತೆವಲಿಗೋ ಅಥವಾ ಬಾಯಿ ಚಪಲಕ್ಕಾಗಿ ಯಾರ ವಿರುದ್ಧವೂ ಹಗುರವಾಗಿ ಮಾತನಾಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ನಿವೃತ್ತ ಕುದುರೆಗಳು ಎನ್ನುವ ಹೇಳಿಕೆಗೆ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ. 

ಪಟ್ಟಣದ ಶಿವಪುರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅವರು ಟೀಕೆ ಮಾಡಿರುವವರಲ್ಲಿ ಒಬ್ಬರು ಗೆದ್ದು ಮುಖ್ಯಮಂತ್ರಿಯಾಗಿದ್ದವರು, ಮತ್ತೊಬ್ಬರು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಯಾವ ದೃಷ್ಟಿಯಲ್ಲಿ ಅವರನ್ನು ನಿವೃತ್ತ ಕುದುರೆಗಳು ಎಂದು ಕರೆದಿದ್ದಾರೋ ಗೊತ್ತಿಲ್ಲ. ಬಿಜೆಪಿ ಈಗ ಅವರನ್ನು ಎಂಎಲ್‌ಸಿ ಮಾಡಿದೆ, ಮುಂದೆ ಮಂತ್ರಿಯಾಗುವವರು. ಒಳ್ಳೆಯ ಕೆಲಸ ಮಾಡಲಿ. ಅದನ್ನು ಬಿಟ್ಟು ಲಘುವಾಗಿ ಮಾತನಾಡಿ ತಮ್ಮ ವ್ಯಕ್ತಿತ್ವಕ್ಕೆ ಚ್ಯುತಿ ತಂದುಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ. 

'ಆಹಾರ ರುಚಿಸುತ್ತಿರಲಿಲ್ಲ, ಆದ್ರೂ ತಿನ್ಬೇಕಿತ್ತು' : ಕೊರೋನಾ ಗೆದ್ದ ಸುಮಲತಾ ಮಾತುಗಳಿವು

ಆದೇಶಕ್ಕೂ, ಆಗ್ರಹಕ್ಕೂ ವ್ಯತ್ಯಾಸ ಗೊತ್ತಿಲ್ಲ:

ಆರೋಗ್ಯ ಸುರಕ್ಷಾ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯನವರು ತನಿಖೆಗೆ ಆಗ್ರಹಿಸಿದ್ದಾರೆ. ಆದೇಶಕ್ಕೂ, ಆಗ್ರಹಕ್ಕೂ ವ್ಯತ್ಯಾಸವೇ ಗೊತ್ತಿಲ್ಲದವರಂತೆ ಸಚಿವ ಅಶೋಕ್‌ ಮಾತನಾಡುತ್ತಿದ್ದಾರೆ. ಅವರೂ ಸಹ ಉಪಮುಖ್ಯಮಂತ್ರಿಯಾಗಿದ್ದವರು, ಸರ್ಕಾರದಲ್ಲಿ ಪ್ರಭಾವಿ ಸಚಿವರು ಹಾಗೂ ಮುಂದಿನ ಮುಖ್ಯಮಂತ್ರಿ ರೇಸ್‌ನಲ್ಲಿರುವವರು. ಸಿದ್ದರಾಮಯ್ಯನವರ ಮಾತನ್ನು ಅರ್ಥ ಮಾಡಿಕೊಂಡು ಮಾತನಾಡಬೇಕು ಎಂದು ಹೇಳಿದರು.

ಹಳೆಯದನ್ನೂ ಸೇರಿಸಿ ತನಿಖೆ ಮಾಡಲಿ:

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲೂ ಅವ್ಯವಹಾರ ನಡೆದಿದ್ದಲ್ಲಿ ಅದನ್ನೂ ಸೇರಿಸಿಕೊಂಡು ತನಿಖೆ ಮಾಡಲಿ. ಈಗ ಅವರದ್ದೇ ಸರ್ಕಾರ ಇದೆ. ಎಲ್ಲಿಂದ ಬೇಕಾದರೂ ತನಿಖೆ ಮಾಡಬಹುದು ಎಂದು ತಿಳಿಸಿದರು.
ಕೊರೋನಾ ಸಂಕಷ್ಟಸಮಯದಲ್ಲಿ ಮೊದಲು ಜನರ ಆರೋಗ್ಯ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕು. ಆರ್ಥಿಕ ತೊಂದರೆಯಲ್ಲಿದ್ದವರಿಗೆ ನೆರವು ನೀಡಬೇಕು. ಅವ್ಯವಹಾರ ನಡೆಸದೆ ಪಾರದರ್ಶಕವಾಗಿ ನಡೆದುಕೊಂಡಿದ್ದರೆ ತನಿಖೆ ಎದುರಿಸಲು ಹಿಂಜರಿಯುವುದೇಕೆ ಎಂದು ಪ್ರಶ್ನಿಸಿದರು.

ಎಚ್‌ಡಿಕೆ ದೊಡ್ಡವರು:

ಕೊರೋನಾ ಸಂಕಷ್ಟವನ್ನು ನಾನಿದ್ದರೆ ನಿಭಾಯಿಸುತ್ತಿದ್ದೆ ಎಂಬ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಅವರ ಬಗ್ಗೆ ಕೇಳಿದಾಗ, ನಾನು ಅವರ ಬಗ್ಗೆ ಮಾತನಾಡುವುದಿಲ್ಲ. ಅವರು ತುಂಬಾ ದೊಡ್ಡವರಿದ್ದಾರೆ. ಮುಖ್ಯಮಂತ್ರಿ ಸ್ಥಾನ ಜವಾಬ್ದಾರಿಯುತ ಹುದ್ದೆ. ಈ ಸಮಯದಲ್ಲಿ ಯಾರಿದ್ದರೂ ಪರಿಸ್ಥಿತಿಯನ್ನು ನಿಭಾಯಿಸಲೇಬೇಕು. ಅದರಂತೆ ಯಡಿಯೂರಪ್ಪನವರೂ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇದರಲ್ಲಿ ಯಾರ ಹೆಚ್ಚುಗಾರಿಕೆಯೂ ಇಲ್ಲ ಎಂದು ಕುಟುಕಿದರು.
ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಗುರುಚರಣ್‌, ತಾಪಂ ಮಾಜಿ ಅಧ್ಯಕ್ಷ ತ್ಯಾಗರಾಜು, ಮನ್‌ಮುಲ್‌ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಮುಖಂಡ ಗಣಿಗ ರವಿ, ಅಪೆಕ್ಸ್‌ ಬ್ಯಾಂಕ್‌ ಮಾಜಿ ನಿರ್ದೇಶಕ ಕೆ.ಜೋಗಿಗೌಡ, ನಾಗಮಂಗಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ದಿವಾಕರ್‌, ತಾಪಂ ಮಾಜಿ ಅಧ್ಯಕ್ಷ ಪಿ.ಸಂದರ್ಶ, ಶಿಂಷಾ ಸಹಕಾರ ಬ್ಯಾಂಕ್‌ ಅಧ್ಯಕ್ಷ ಎಂ.ಚಂದ್ರು ಇತರರಿದ್ದರು.
 

Follow Us:
Download App:
  • android
  • ios