ನರೇಗಾ ಯೋಜನೆ ಹಣ ಬಿಡುಗಡೆಗೆ ಮೀನಮೇಷ: ಮಾಜಿ ಶಾಸಕ ತಿಮ್ಮರಾಯಪ್ಪ ಕಿಡಿ
ಸರ್ಕಾರದ ನಿಯಮನುಸಾರ ನರೇಗಾ ಯೋಜನೆ ಅಡಿಯಲ್ಲಿ ಕಾಮಗಾರಿ ನಿರ್ವಹಿಸಿ ಮೂರು ವರ್ಷ ಕಳೆದಿದ್ದು ಯೋಜನೆಯ ಹಣ ಬಿಡುಗಡೆಗೊಳಿಸುವಲ್ಲಿ ಮೀನಮೇಷ ಎಣಿಸುತ್ತಿದ್ದನ್ನು ಪ್ರಶ್ನಿಸಿ ಗುರುವಾರ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ತಾಪಂ ಇಒ ಹಾಗೂ ಸಹಾಯಕ ಅಧಿಕಾರಿಯೊಬ್ಬರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.
ಪಾವಗಡ : ಸರ್ಕಾರದ ನಿಯಮನುಸಾರ ನರೇಗಾ ಯೋಜನೆ ಅಡಿಯಲ್ಲಿ ಕಾಮಗಾರಿ ನಿರ್ವಹಿಸಿ ಮೂರು ವರ್ಷ ಕಳೆದಿದ್ದು ಯೋಜನೆಯ ಹಣ ಬಿಡುಗಡೆಗೊಳಿಸುವಲ್ಲಿ ಮೀನಮೇಷ ಎಣಿಸುತ್ತಿದ್ದನ್ನು ಪ್ರಶ್ನಿಸಿ ಗುರುವಾರ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ತಾಪಂ ಇಒ ಹಾಗೂ ಸಹಾಯಕ ಅಧಿಕಾರಿಯೊಬ್ಬರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.
ತಾಲೂಕು ಕೊಡಮಡಗು ಗ್ರಾಪಂ ವ್ಯಾಪ್ತಿಯ ಕಡಮಲಕುಂಟೆ ಗ್ರಾಮದ ಓಬಳೇಶ್ ಎಂಬುವರು ಕೊಡ ಮಡಗು ಗ್ರಾಪಂಗೆ ದಾಖಲೆ ಸಲ್ಲಿಸಿ ನರೇಗಾ ಯೋಜನೆ ಅಡಿಯಲ್ಲಿ ನಿಯಮನುಸಾರ 3ಲಕ್ಷ ವೆಚ್ಚದ ವಾಟರ್ ಪೊಲ್ ನಿರ್ಮಾಣದ ಹಿನ್ನೆಲೆಯಲ್ಲಿ ಗ್ರಾಪಂನಿಂದ ವರ್ಕ್ ಅರ್ಡರ್ ಪಡೆದ ಬಳಿಕ ಸರ್ಕಾರದ ಮಾರ್ಗಸೂಚಿ ಅನ್ವಯ ತಾಲೂಕು ಕಡಮಲಕುಂಟೆ ಗ್ರಾಮದಲ್ಲಿ ಸುಸಜ್ಜಿತವಾಗಿ ವಾಟರ್ ಪೋಲ್ ನಿರ್ಮಾಣದ ಕೆಲಸ ಪೂರ್ಣಗೊಳಿಸಿದ್ದಾರೆ. ಈ ಸಂಬಂಧ ನಿರ್ವಹಣೆ ಕಾಮಗಾರಿಯ ಸಾಮಗ್ರಿಗಳ ಬಿಲ್ಲು ಮಾಡಿಕೊಡುವಲ್ಲಿ ಮೂರು ವರ್ಷದಿಂದ ಅಧಿಕಾರಿಗಳು ಹಾಕುವ ಮೀನಮೇಷ ವಿರೋಧಿಸಿ ಕಾಮಗಾರಿಯ ದಾಖಲೆ ಸಮೇತ ತಾಲೂಕು ಪಂಚಾತಿಯಿಗೆ ಪ್ರವೇಶಿಸಿದ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ತಾಪಂ ಇಒ ಜಾನಕಿರಾಮ್ ಹಾಗೂ ತಾಪಂ ಸಹಾಯಕ ಅಧಿಕಾರಿ ರಂಗನಾಥ್ ಮತ್ತು ಸಂಬಂಧಪಟ್ಟ ನರೇಗಾ ಎಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಗ್ರಾಮೀಣ ರೈತ ಪ್ರಗತಿ ಹಾಗೂ ಕೂಲಿಕಾರರ ಜೀವನ ನಿರ್ವಹಣೆಗೆ ರಾಷ್ಟ್ರೀಯ ಮಹತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಕೇಂದ್ರ ಅನುಷ್ಟಾನಗೊಳಿಸಿದೆ. ಕಾಂಗ್ರೆಸ್ ಜೆಡಿಎಸ್ ಹಾಗೂ ಬಿಜೆಪಿ ಅಂತ ಪಕ್ಷಪಾತ ಮಾಡಬೇಡಿ. ಸಮಾನವಾಗಿ ಪರಿಗಣಿಸುವ ಮೂಲಕ ಯೋಜನೆ ಅನುಷ್ಠಾನ ಕೈಗೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಪಂನಲ್ಲಿ ನರೇಗಾ ಯೋಜನೆಯ ಕಾಮಗಾರಿ ಮಂಜೂರಾತಿ ಹಾಗೂ ನಿರ್ವಹಣೆಯ ಕಾಮಗಾರಿಯ ಬಿಲ್ಲು ಪಾಸು ಮಾಡುವಲ್ಲಿ ಪಕ್ಷಪಾತ ಧೋರಣೆ ಸರಿಯಲ್ಲ. ಇದರ ವಿರುದ್ಧ ಪ್ರತಿಭಟನೆಗೆ ಸಜ್ಜಾಗಬೇಕಾಗುತ್ತದೆ. ಕಡಮಲಕುಂಟೆ ಗ್ರಾಮದಲ್ಲಿ ವಾಟರ್ ಪೋಲ್ ಕಾಮಗಾರಿ ನಿರ್ವಹಣೆಯ ಅಗತ್ಯ ದಾಖಲೆಗಳಿವೆ. ಎಲ್ಲಾ ಸರಿ ಇದ್ದರೂ ಕಳೆದ ಮೂರು ವರ್ಷಗಳಿಂದ ಕಾಮಗಾರಿಯ ಬಿಲ್ಲು ಪಾಸು ಮಾಡಿಕೊಡುವಲ್ಲಿ ಸತಾಯಿಸುತ್ತಿರುವ ಉದ್ದೇಶ ಅರ್ಥವಾಗುತ್ತಿಲ್ಲ. ಇದೇ ರೀತಿ ಆನೇಕ ಗ್ರಾಪಂಗಳಲ್ಲಿ ಹಣವಿದ್ದರೂ ನರೇಗಾ ಯೋಜನೆ ಕಾಮಗಾರಿ ನಿರ್ವಹಣೆಯ ಕೂಲಿ ಮತ್ತು ಸಾಮಗ್ರಿಗಳ ಹಣ ಬಿಡುಗಡೆಗೊಳಿಸುತ್ತಿಲ್ಲ. ಮೊದಲು ಕಾಮಗಾರಿ ನಿರ್ವಹಣೆಯ ನರೇಗಾ ಯೋಜನೆಯ ಕೂಲಿ ಹಾಗೂ ಸಾಮಗ್ರಿಯ ಹಣ ಖಾತೆಗೆ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು. ವಿಳಂಬಗೊಳಿಸಿದರೆ ಮುಂದಿನ ಪರಿಣಾಮ ಮೇಲಧಿಕಾರಿಗಳ ಗಮನ ಹಾಗೂ ಕಾನೂನು ರೀತ್ಯಾ ಹೋರಾಟಕ್ಕೆ ಸಜ್ಜಾಗುವುದಾಗಿ ಎಚ್ಚರಿಸಿದರು.
ಪಳವಳ್ಳಿ ಗ್ರಾಪಂ ಕಟ್ಟಡ ಕಾಮಗಾರಿ ತಡೆ ಹಾಗೂ ಕೋಣನಕುರಿಕೆ ಶಾಲಾ ಕಟಡ್ಡದ ವಿಳಂಬ ಕುರಿತು ತಾಪಂ ಇಒ ಜಾನಕಿರಾಮ್ ಪ್ರತಿಕ್ರಿಯಿಸಿ, ಕಡಮಲಕುಂಟೆಯ 3ಲಕ್ಷ ವಾಟರ್ ಪೋಲ್ ಕಾಮಗಾರಿಯ ವರದಿ ಹಾಗೂ ಬಿಲ್ಲು ಪಾಸು ಮಾಡಿಕೊಡುವಂತೆ ತಾಪಂ ಸಹಾಯಕ ಅಧಿಕಾರಿ ರಂಗನಾಥ್ ಹಾಗೂ ನರೇಗಾ ಎಂಜಿನಿಯರ್ ವೀಣಾ ಅವರಿಗೆ ಆದೇಶಿಸಿದರು.
ಇದೇ ವೇಳೆ ಸಂತ್ರಸ್ಥ ಕಾಮಗಾರಿ ನಿರ್ವಹಣೆಯ ಓಬಳೇಶ್ ಹಾಗೂ ಪಳವಳ್ಳಿ ಗ್ರಾಪಂ ಸದಸ್ಯರಾದ ಪಾರ್ಥಸಾರಥಿ, ಗೋವಿಂದಪ್ಪ ಸೇರಿದಂತೆ ಆನೇಕ ಮಂದಿ ಜೆಡಿಎಸ್ ಕಾರ್ಯಕರ್ತರಿದ್ದರು.