ಕಲಬುರಗಿ(ಜ.05): ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸೇಡಂನ ಮಾಜಿ ಶಾಸಕರು, ಹಿರಿಯ ಧುರೀಣರು, ರಾಜಕೀಯ ಮುತ್ಸದ್ದಿ ಬಸವಂತರೆಡ್ಡಿ ಪಾಟೀಲ್ ಮೋತಕಪಲ್ಲಿ ಅವರು ಸೋಮವಾರ ರಾತ್ರಿ 11. 20 ಗಂಟೆಗೆ ಮೋತಕಪಲ್ಲಿಯಲ್ಲಿಯೇ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.

ಮೋತಕಪಲ್ಲಿಯಲ್ಲಿ ವಾಸವಾಗಿದ್ದ ಬಸಂವತರೆಡ್ಡಿಯವರಿಗೆ ಏಕಾಏಕಿ ಅನಾರೋಗ್ಯ ಕಾಣಿಸಿಕೊಂಡಾಗ ಬಂಧುಗಳು, ಕುಟುಂಬ ವರ್ಗದವರು ಅವರನ್ನು ಕಲಬುರಗಿ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆಂದು ದಾಖಲಿಸಿದ್ದರು. ಆಸ್ಪತ್ರೆಯಲ್ಲಿಯೇ ಮೋತಕಪಲ್ಲಿಯವರು ಕೊನೆಯುಸಿರೆಳೆದಿದ್ದಾರೆ.

ಸಿಎಂ ಸಭೆಯಲ್ಲಿ ಯತ್ನಾಳ್ ಗರಂ, ಮುನಿಸಿಗೆ ಮುಲಾಮು ಹಚ್ತಾರಾ ಬಿಎಸ್‌ವೈ.?

ಮೃತರು ಓರ್ವ ಪುತ್ರ ಮತ್ತು ಪುತ್ರಿ, ಆರು ಜನ ಮೊಮ್ಮಕ್ಕಳು, ಬಂಧು- ಬಳಗ ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಮೃತರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ಮೋತಕಪಲ್ಲಿ ಗ್ರಾಮದಲ್ಲಿರುವ ಅವರ ಸ್ವಂತ ಜಮೀನಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಎರಡು ಬಾರಿ ಸೇಡಂ ಶಾಸಕರಾಗಿದ್ದರು:

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮೋತಕಪಲ್ಲಿ ಗ್ರಾಮದ ಬಸವಂತರೆಡ್ಡಿಯವರು 1978 ರಲ್ಲಿ ರಾಜಕೀಯ ಪ್ರವೇಶಿಸಿ ಜನತಾ ಪಕ್ಷದಿಂದ ಸ್ಪರ್ಧೆ ಮಾಡಿದ್ದರು.  1988 ರಲ್ಲಿ ಮುಧೋಳ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದವರು. ಸೇಡಂ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದು ಎರಡು ಬಾರಿ ಶಾಸಕರಾಗಿದ್ದರು.

ಕಾಂಗ್ರೆಸ್  ಪಕ್ಷದಿಂದ ಸ್ಪರ್ಧಿಸಿ 1989 ರಲ್ಲಿ ಸೇಡಂನ ಶಾಸಕರಾಗಿ ಆಯ್ಕೆಯಾದರು. ನಂತರ 1994 ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಇವರು ಸೋಲುಂಡಿದ್ದರು. ಮತ್ತೆ ಕಾಂಗ್ರೆಸ್ ಪಕ್ಷದಿಂದ 1999 ರಲ್ಲಿ  ಶಾಸಕರಾಗಿ ಪುನರಾಯ್ಕೆಯಾದ ಇವರು ಅನೇಕ ಪ್ರಗತಿಪರ ಕೆಲಸಗಳನ್ನು ಸೇಡಂನಲ್ಲಿ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ  ಎಸ್. ಎಂ. ಕೃಷ್ಣ  ಅವರ ಆಪ್ತ ಬಳಗದಲ್ಲಿ ಗುರುತಿಸಿ ಕೊಂಡಿದ್ದರು. ನಂತರದ ರಾಜಕೀಯ ಬೆಳವಣಿಗೆಗಳಿಂದಾಗಿ ಮೋತಕಪಲ್ಲಿಯವರು ಕಾಂಗ್ರೆಸ್ ಪಕ್ಷ ತ್ಯಜಿಸಿದ್ದರು. ಕಳೆದೊಂದು ದಶಕದಿಂದ ಈಚೆಗೆ ಅವರು ಬಿಜೆಪಿ ಪಕ್ಷದಲ್ಲಿದ್ದರು.

ಮಾಜಿ ಶಾಸಕ ಬಸವಂತರೆಡ್ಡಿ ಅವರ ನಿಧನಕ್ಕೆ ಸೇಡಂ ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ್, ಬಸವರಾಜ ಪಾಟೀಲ್ ಸೇಡಂ, ಡಾ. ಶರಣಪ್ರಕಾಶ ಪಾಟೀಲ್ ಸೇರಿದಂತೆ ಸೇಡಂನ ಜನತೆ, ಅಭಿಮಾನಿಗಳು ಕಂಬನಿ ಮಿಡಿದ್ದಾರೆ. ಭಗವಂತ ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಕೋರಿದ್ದಾರೆ.