Asianet Suvarna News Asianet Suvarna News

'ಎಸ್‌ಡಿಪಿಐ, ಆರ್‌ಎಸ್‌ಎಸ್‌ ಎರಡೂ ಸಂಘಟನೆ ನಿಷೇಧಿಸಿ'

ಕೊಪ್ಪಳ ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರಕ್ಕಾಗಿ ರೈತರ ಪರದಾಟ| ಸರ್ಕಾರವೇ ಅಭಾವ ಸೃ​ಷ್ಟಿ​ಸಿ, ಯೂರಿಯಾ ಅಕ್ರಮ ಮಾರಾಟ ಮಾಡುತ್ತಿದೆಯಾ ಎನ್ನುವ ಅನುಮಾನ|  ಬಿ.ಸಿ. ಪಾಟೀಲ ಜಿಲ್ಲೆಗೆ ಸೂಟ್‌ಕೇಸ್‌ ಹೆಗಲಿಗೆ ಹಾಕಿಕೊಂಡು ಹೋಗಲು ಬರುತ್ತಾರೆಯೇ ಎಂದು ಪ್ರಶ್ನೆ ಮಾಡಿದ ಶಿವರಾಜ ತಂಗಡಗಿ| 

Former Minister Shivaraj Tangadagi Says Ban SDPI and RSS Organization
Author
Bengaluru, First Published Aug 21, 2020, 1:09 PM IST

ಕೊಪ್ಪಳ(ಆ.21): ಎಸ್‌ಡಿಪಿಐ ಮತ್ತು ಆರ್‌ಎಸ್‌ಎಸ್‌ ಸಂಘಟನೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ದೊಂಬಿ ಮತ್ತು ಗಲಭೆಯನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ. ನಿಷೇಧ ಮಾಡುವುದಾದರೆ ಎಸ್‌ಡಿಪಿಐ ಮತ್ತು ಆರ್‌ಎಸ್‌ಎಸ್‌ ಎರಡೂ ಸಂಘಟನೆಗಳನ್ನು ನಿಷೇಧ ಮಾಡಲಿ ಎಂದು ಕಾಂಗ್ರೆಸ್‌ ಕೊಪ್ಪಳ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಸಚಿವ ಶಿವರಾಜ ತಂಗಡಗಿ ಆಗ್ರಹಿಸಿದ್ದಾರೆ.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆæ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿಯ ದಾಂಧಲೆಯನ್ನು ನಿಭಾಯಿಸುವಲ್ಲಿ ಮತ್ತು ತಡೆಯುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ ಇದನ್ನು ಮರೆಮಾಚಲು ಇನ್ನಿಲ್ಲದ ನಾಟಕ ಮಾಡುತ್ತಿದೆ. ಘಟನೆ ಹತ್ತಿಕ್ಕುವ ಬದಲು ರಾಜಕೀಯಕ್ಕೆ ಬಳಕೆ ಮಾಡುತ್ತಿದೆ. ಎಸ್‌ಡಿಪಿಐ ಸಂಘಟನೆ ನಿಷೇಧಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ದೊಂಬಿ, ಘರ್ಷಣೆಯ ಅನೇಕ ಪ್ರಕರಣಗಳನ್ನು ಎದುರಿಸುತ್ತಿರುವ ಆರ್‌ಎಸ್‌ಎಸ್‌ ಸಂಘಟನೆಯನ್ನೂ ನಿಷೇಧ ಮಾಡಲಿ ಎಂದು ಸವಾಲು ಹಾಕಿದರು.

ಆರ್‌ಎಸ್‌ಎಸ್‌ ಸಂಘಟನೆಯೂ ದೊಂಬಿ, ಘರ್ಷಣೆ ಮಾಡಿದ ಅನೇಕ ಉದಾಹರಣೆಗಳಿವೆ. ಗಂಗಾವತಿಯಲ್ಲಿಯೇ ಹನುಮ ಮಾಲಾಧಾರಿ ಉತ್ಸವದಲ್ಲಿ ಮಚ್ಚು ಹಿಡಿದು ಬೀದಿಗೆ ಬಂದಿದ್ದು ಎಲ್ಲರಿಗೂ ಗೊತ್ತೇ ಇದೆ. ಇಂಥ ಅದೆಷ್ಟೋ ಉದಾಹರಣೆಗಳು ಇರುವುದರಿಂದ ಸರ್ಕಾರ ಇಂಥ ಎಲ್ಲ ಸಂಘಟನೆಗಳನ್ನು ನಿಷೇಧ ಮಾಡಲಿ ಎಂದು ಆಗ್ರಹಿಸಿದರು.

ಕೊಪ್ಪಳ: ಕೊರೋನಾ ಮಧ್ಯೆ ಪಲ್ಲಕ್ಕಿ ಉತ್ಸವ ನಡೆಸಿದವರಿಗೆ ಲಾಠಿ ಏಟು

ಬೆಂಗಳೂರಿನ ಘಟನೆ ಕಾಂಗ್ರೆಸ್ಸಿನ ಪಾಪದ ಫಲ ಎಂದಿರುವ ಗೋವಿಂದ್‌ ಕಾರಜೋಳ ಅವರಿಗೆ ತೀಕ್ಷ$್ಣ ಎದುರೇಟು ನೀಡಿದ ಶಿವರಾಜ ತಂಗಡಗಿ, ಅವರಿಗೆ ಸತ್ಯಾಂಶ ಗೊತ್ತೇ ಇಲ್ಲ. ಗೊತ್ತಿದ್ದರೂ ಅವರು ಮಾತನಾಡುವುದಿಲ್ಲ. ಈಗ ಸರ್ಕಾರ ಯಾವುದಿದೆ? ರಾಜ್ಯದಲ್ಲಿ, ಬೆಂಗಳೂರಿನಲ್ಲಿ ಏನಾಗುತ್ತಿದೆ ಎನ್ನುವುದನ್ನು ಎಲ್ಲರಿಗೂ ಗೊತ್ತು. ಕಾರಜೋಳ ಅವರು ಆರ್‌ಎಸ್‌ಎಸ್‌ ಕುರಿತು ಮಾತನಾಡುವುದಿಲ್ಲ, ಮಾತನಾಡಿದರೆ ಅವರ ಖುರ್ಚಿಗೆ ಕುತ್ತು ಬರುತ್ತದೆ ಎಂದು ಲೇವಡಿ ಮಾಡಿದರು.

ಕೊಪ್ಪಳ ಸೇರಿದಂತೆ ರಾಜ್ಯದಲ್ಲಿ ಯೂರಿಯಾ ರಸಗೊಬ್ಬರ ಸಮಸ್ಯೆಯಾಗಿದೆ. ರೈತರು ಹತ್ತು ಪಟ್ಟು ಬೆಲೆ ಕೊಟ್ಟು ರಸಗೊಬ್ಬರ ಖರೀದಿ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ರಾಜ್ಯದಲ್ಲಿ ಯೂರಿಯಾ ಸಮಸ್ಯೆಯಾಗುತ್ತಿದೆ. ಈ ಹಿಂದೆ ಯೂರಿಯಾ ರಸಗೊಬ್ಬರ ಕೇಳಿದ್ದಕ್ಕೆ ಗೋಲಿಬಾರ್‌ ಮಾಡಿದ್ದರು. ಈಗ ಮತ್ತೆ ಅದೇ ಸ್ಥಿತಿ ಉದ್ಭವಿಸಿದೆ ಎಂದರು.

ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ಉಸ್ತುವಾರಿ ನೋಡಿಕೊಳ್ಳುತ್ತಿರುವ ಕೊಪ್ಪಳ ಜಿಲ್ಲೆಯಲ್ಲಿಯೂ ಯೂರಿಯಾ ರಸಗೊಬ್ಬರಕ್ಕಾಗಿ ರೈತರು ಪರದಾಡುವಂತಾಗಿದೆ. ಸರ್ಕಾರವೇ ಅಭಾವ ಸೃ​ಷ್ಟಿ​ಸಿ, ಯೂರಿಯಾ ಅಕ್ರಮ ಮಾರಾಟ ಮಾಡುತ್ತಿದೆಯಾ ಎನ್ನುವ ಅನುಮಾನ ಬರುತ್ತಿದೆ. ಬಿ.ಸಿ. ಪಾಟೀಲರು ಜಿಲ್ಲೆಗೆ ಸೂಟ್‌ಕೇಸ್‌ ಹೆಗಲಿಗೆ ಹಾಕಿಕೊಂಡು ಹೋಗಲು ಬರುತ್ತಾರೆಯೇ ಎಂದು ಪ್ರಶ್ನೆ ಮಾಡಿದರು.

ದೇಶಾಭಿಮಾನಿಗಳು ಈಗ ಎಲ್ಲಿ ಹೋಗಿದ್ದಾರೆ? ಆತ್ಮನಿರ್ಭರ ಭಾರತ ಎಂದೆಲ್ಲಾ ಬಡಾಯಿ ಕೊಚ್ಚಿಕೊಳ್ಳುವವರು ಎಲ್ಲಿದ್ದಾರೆ? ಚೀನಾ ದೇಶದ ಆ್ಯಪ್‌ ನಿಷೇಧ ಮಾಡುತ್ತೇವೆ, ಸಾಮಗ್ರಿ ನಿಷೇಧ ಮಾಡುತ್ತೇವೆ ಎನ್ನುವವರು ಈಗ ಯೂರಿಯಾ ರಸಗೊಬ್ಬರ ಚೀನಾದಿಂದಲೇ ಬರುತ್ತಿದೆಯಲ್ಲ ಎಂದು ತಂಗಡಗಿ ಪ್ರಶ್ನೆ ಮಾಡಿದರು.

ಚೀನಾದಿಂದ ಯೂರಿಯಾ ರಸಗೊಬ್ಬರ ಬರದಿದ್ದರೆ ರೈತರ ಬದುಕಿಗೆ ಮಣ್ಣು ಕೊಡಬೇಕಾಗುತ್ತದೆ. ವಾಸ್ತವ ಸ್ಥಿತಿ ಹೀಗಿದ್ದರೂ ಜನರ ಭಾವನೆಗಳ ಜೊತೆ ಸವಾರಿ ಮಾಡಲಾಗುತ್ತದೆ. ದೇಶಾಭಿಮಾನ ಗುತ್ತಿಗೆ ಹಿಡಿದವರಂತೆ ಮಾತನಾಡುತ್ತಾರೆ. ಇಷ್ಟುವರ್ಷಗಳ ಕಾಲ ಆಳ್ವಿಕೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯೂರಿಯಾ ರಸಗೊಬ್ಬರವನ್ನು ಸ್ಥಳೀಯವಾಗಿಯೇ ಉತ್ಪಾದಿಸಲು ಯಾಕೆ ಆಗಲಿಲ್ಲ? ಎಂದು ಪ್ರಶ್ನಿಸಿದರು.
 

Follow Us:
Download App:
  • android
  • ios